ವಾಷಿಂಗ್ಟನ್ ಡಿಸಿ:ಭಾರತದ ಮತ ಎಣಿಕೆ ಪ್ರಕ್ರಿಯೆಯ ಬಗ್ಗೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಸ್ಕ್ ಮಾಡಿರುವ 'ಎಕ್ಸ್' ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆ ಹಾಗೂ 14 ರಾಜ್ಯಗಳ 48 ವಿಧಾನಸಭಾ ಹಾಗೂ 2 ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಶನಿವಾರ ಒಂದೇ ದಿನದಲ್ಲಿ ಪೂರ್ಣಗೊಂಡಿದೆ. ಇದರ ಬೆನ್ನಲ್ಲೇ ಎಲಾನ್ ಮಸ್ಕ್ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಕ್ಯಾಲಿಫೋರ್ನಿಯಾದ ಮತ ಎಣಿಕೆಯ ಜೊತೆಗೆ ಹೋಲಿಕೆ ಮಾಡಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಭಾರತ 1 ದಿನದಲ್ಲಿ 640 ಮಿಲಿಯನ್ ಮತಗಳನ್ನು ಎಣಿಕೆ ಮಾಡಿದೆ. ಆದರೆ ಕ್ಯಾಲಿಫೋರ್ನಿಯಾದಲ್ಲಿ ಮತದಾನ ನಡೆದು 2 ವಾರಗಳ ನಂತರವೂ ಎಣಿಕೆ ನಡೆಯುತ್ತಲೇ ಇದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಇದು ಭಾರತದಲ್ಲಿನ ಮತದಾನ, ಎಣಿಕೆ ಪ್ರಕ್ರಿಯೆಗಳಿಗೆ ವ್ಯತಿರಿಕ್ತವಾಗಿದೆ ಎಂದು ಪೋಸ್ಟ್ನಲ್ಲಿ ಟೀಕಿಸಿದ್ದಾರೆ. ಜೊತೆಗೆ, ತಲೆಗೆ ಹೊಡೆದುಕೊಳ್ಳುವ (ಕರ್ಮವೇ ಎಂಬ ಸಂಕೇತದ) ಎನ್ನುವ ಇಮೋಜಿಯನ್ನೂ ಹಾಕಿಕೊಂಡಿದ್ದಾರೆ.