ಕರ್ನಾಟಕ

karnataka

ETV Bharat / international

ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ ಎಂದು ಘೋಷಿಸಿಕೊಂಡ ಡೊನಾಲ್ಡ್​ ಟ್ರಂಪ್​: ಅಧಿಕೃತ ಕಾರ್ಯಕ್ರಮ ರದ್ದುಗೊಳಿಸಿದ ಕಮಲಾ - US ELECTION 6THLD COUNTING

ಅಮೆರಿಕದ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಡೊನಾಲ್ಡ್​ ಟ್ರಂಪ್​ ಅಮೆರಿಕದ ಅಧ್ಯಕ್ಷರ ರೇಸ್​​ನಲ್ಲಿ ಮುಂಚೂಣಿಯಲ್ಲಿದ್ದಾರೆ. ಹ್ಯಾರಿಸ್ ಹಿನ್ನಡೆ ಅನುಭವಿಸಿದ್ದಾರೆ.

donald-trump-declares-victory-makes-forceful-comeback
Etv Bhಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ ಎಂದು ಘೋಷಿಸಿಕೊಂಡ ಡೊನಾಲ್ಡ್​ ಟ್ರಂಪ್​: ಅಧಿಕೃತ ಕಾರ್ಯಕ್ರಮ ರದ್ದುಗೊಳಿಸಿದ ಕಮಲಾarat (Photos- AP)

By PTI

Published : Nov 6, 2024, 3:34 PM IST

ವಾಷಿಂಗ್ಟನ್: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗಲಿದ್ದಾರೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರಕ್ಕೆ ಏರುವ ನಿರೀಕ್ಷೆ ಇದೆ. ಇದು ಅಮೆರಿಕದ ಇತಿಹಾಸದಲ್ಲಿ ಅತಿದೊಡ್ಡ ರಾಜಕೀಯ ಪುನರಾಗಮನವಾಗಿದೆ ಎಂದು ಬಣ್ಣಿಸಲಾಗುತ್ತಿದೆ. ತೀವ್ರ ಹಣಾಹಣಿಯಿಂದ ಕೂಡಿದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಅವರನ್ನು ಹಿಂದಿಕ್ಕಿ ಅವರು ಈ ಬಾರಿ ಮತ್ತೆ ಅಧಿಕಾರದ ಗದ್ದುಗೆ ಏರುವಂತೆ ಮುನ್ನುಗ್ಗುತ್ತಿದ್ದಾರೆ.

ಟ್ರಂಪ್ ವಿಜಯದ ಸ್ಪಷ್ಟ ಸೂಚನೆಯನ್ನು ನೀಡುವ ಬೆಳವಣಿಗೆಗಳು ವಿವಿಧ ರಾಜ್ಯಗಳಿಂದ ಬರುತ್ತಿರುವ ಫಲಿತಾಂಶಗಳಿಂದ ಸಿಗುತ್ತಲಿವೆ. 78 ವರ್ಷದ ರಿಪಬ್ಲಿಕನ್ ನಾಯಕ ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿ ವಿಜಯವನ್ನು ಘೋಷಿಸಿಕೊಂಡಿದ್ದಾರೆ. "ಅಮೆರಿಕದ ಸುವರ್ಣಯುಗ" ಎಂದು ಅವರು ಬಣ್ಣಿಸಿಕೊಂಡಿದ್ದಾರೆ.

ಅಸೋಸಿಯೇಟೆಡ್ ಪ್ರೆಸ್ ಮಧ್ಯಾಹ್ನ 2 ಗಂಟೆಯವರೆಗಿನ ವರದಿಗಳ ಪ್ರಕಾರ, ರಿಪಬ್ಲಿಕನ್ ಅಭ್ಯರ್ಥಿ ಟ್ರಂಪ್‌ಗೆ 267 ಚುನಾವಣಾ ಮತಗಳು ಮತ್ತು 224 ಡೆಮಾಕ್ರಟಿಕ್ ಪಕ್ಷದ ಹ್ಯಾರಿಸ್‌ಗೆ ಬಂದಿವೆ. ಟ್ರಂಪ್ ಗೆಲುವಿಗೆ ಕೇವಲ ಮೂರು ಮತಗಳ ಕೊರತೆ ಇದೆ ಎಂದು ಅಸೋಸಿಯೇಟೆಡ್​ ಪ್ರೆಸ್​ ವರದಿ ಹೇಳಿದೆ..

ಇದು ಅಮೆರಿಕದ ಸುವರ್ಣ ಯುಗ ಎಂದು ಬಣ್ಣಿಸಿದ ಟ್ರಂಪ್:"ಇದು ಅಮೆರಿಕದ ಸುವರ್ಣ ಯುಗ. ಅಮೆರಿಕ ನಮಗೆ ಅಭೂತಪೂರ್ವ ಮತ್ತು ಶಕ್ತಿಯುತ ಜನಾದೇಶವನ್ನು ನೀಡಿದೆ ಎಂದು ಟ್ರಂಪ್ ತಮ್ಮ ಬೆಂಬಲಿಗರ ಹರ್ಷೋದ್ಗಾರದ ನಡುವೆ ತಮ್ಮ ಕುಟುಂಬದೊಂದಿಗೆ ಸುದ್ದಿಗೋಷ್ಠಿ ನಡೆಸಿ ಅವರು ಘೋಷಿಸಿದ್ದಾರೆ."ಇದು ಅಮೆರಿಕನ್​ ಜನರಿಗೆ ಸಿಕ್ಕ ಅತಿ ದೊಡ್ಡ ವಿಜಯವಾಗಿದೆ ಎಂದು ಅವರು ಹೇಳಿದ್ದಾರೆ. ಇದು ಸಾರ್ವಕಾಲಿಕ ಶ್ರೇಷ್ಠ ರಾಜಕೀಯ ಚಳವಳಿ ಎಂದು ನಾನು ನಂಬುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ. '

ಟ್ರಂಪ್​ ಅಮೆರಿಕದ ಹೊಸ ಅಧ್ಯಕ್ಷ; ಬಹುತೇಕ ಖಚಿತ:"ಸಮೀಕ್ಷೆಗಳ ಪ್ರಕಾರ, ಟ್ರಂಪ್ 270 ಎಲೆಕ್ಟೋರಲ್ ಕಾಲೇಜು ಮತಗಳನ್ನು ಪಡೆಯುವ ಎಲ್ಲ ಸಾಧ್ಯತೆಗಳಿವೆ. ಯುಎಸ್‌ನ ಮೊದಲ ಮಹಿಳಾ ಅಧ್ಯಕ್ಷರಾಗುವ ಹ್ಯಾರಿಸ್‌ನ ಅವಕಾಶಕ್ಕೆ ಈ ಮೂಲಕ ಬ್ರೇಕ್​ ಬಿದ್ದಿದೆ. 2020 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್​ ವಿರುದ್ಧ ಸೋಲು ಅನುಭವಿಸಿದ ಬಳಿಕ ಟ್ರಂಪ್ ಅವರ ವಿಜಯವು ಅವರ ರಾಜಕೀಯ ವೃತ್ತಿಜೀವನದ ಅತ್ಯಂತ ದೊಡ್ಡ ಪುನರಾಗಮನವೆಂದು ಪರಿಗಣಿಸಲಾಗಿದೆ.

ಟ್ರಂಪ್ ಚುನಾವಣಾ ಫಲಿತಾಂಶಗಳಿಗೆ ಸವಾಲು ಹಾಕಿದ್ದರು. ಪರೋಕ್ಷವಾಗಿ ಯುಎಸ್ ಕ್ಯಾಪಿಟಲ್‌ ನಲ್ಲಿ ಗದ್ದಲ ಎಬ್ಬಿಸುವ ಪ್ರಯತ್ನ ಮಾಡಿದ್ದರು. ಇದು ಅಮೆರಿಕಾದ ಪ್ರಜಾಪ್ರಭುತ್ವದ ದೇಗುಲದ ಮೇಲೆ ಹಿಂಸಾತ್ಮಕ ದಾಳಿಗಳು ಮತ್ತು ಘರ್ಷಣೆಗಳಿಗೆ ಪ್ರಚೋದನೆ ನೀಡಿತ್ತು. ಈ ಸಂಬಂಧ ಅವರು ಕಾನೂನು ಸಮರಗಳನ್ನು ಎದುರಿಸುತ್ತಿದ್ದಾರೆ. ಮೂರು ನಿರ್ಣಾಯಕ ಸ್ವಿಂಗ್​ ರಾಜ್ಯಗಳಾದ ಪೆನ್ಸಿಲ್ವೇನಿಯಾ, ಜಾರ್ಜಿಯಾ ಮತ್ತು ಉತ್ತರ ಕೆರೊಲಿನಾದಲ್ಲಿ ಟ್ರಂಪ್​ ಗೆಲುವು ಸಾಧಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ಘೋಷಿಸಿವೆ. ಇತರ ಪ್ರಮುಖ ರಾಜ್ಯಗಳಾದ ಅರಿಜೋನಾ, ಮಿಚಿಗನ್, ವಿಸ್ಕಾನ್ಸಿನ್ ಮತ್ತು ನೆವಾಡಾದಲ್ಲಿ ಮತಗಳ ಎಣಿಕೆ ಇನ್ನೂ ನಡೆಯುತ್ತಿದೆ

ಹೋವರ್ಡ್​ ವಿವಿಯಲ್ಲಿದ್ದ ಕಾರ್ಯಕ್ರಮ ರದ್ದುಗೊಳಿಸಿದ ಹ್ಯಾರಿಸ್​;ಚುನಾವಣೆಯಲ್ಲಿ ಹಿನ್ನಡೆಯ ಸುಳಿವು ಸಿಗುತ್ತಿದ್ದಂತೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅಲ್ಮಾ ಮೇಟರ್ ಹೋವರ್ಡ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಭಾಷಣ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಫಲಿತಾಂಶವು ಹ್ಯಾರಿಸ್‌ಗೆ ದೊಡ್ಡ ನಿರಾಶೆಯನ್ನುಂಟು ಮಾಡಿದೆ. ಜುಲೈನಲ್ಲಿ ಅಧ್ಯಕ್ಷ ಬೈಡನ್​ ಅವರ ಮರುಚುನಾವಣೆ ಅಖಾಡದಿಂದ ಹೊರಬಂದ ನಂತರ, ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಕಮಲಾ ಹ್ಯಾರಿಸ್ ತೀವ್ರ ಸ್ಪರ್ಧೆಯೊಡ್ಡಿದ್ದರು.

ಬೈಡನ್​ ಚುನಾವಣಾ ಕಣದಿಂದ ಹಿಂದೆ ಸರಿದ ಬಳಿಕ ಡೆಮಾಕ್ರಟಿಕ್​ ಪಕ್ಷದಿಂದ ಅಧ್ಯಕ್ಷೀಯ ಚುನಾವಣೆಗೆ ನಾಮನಿರ್ದೇಶನಗೊಂಡಿದ್ದು ಒಂದು ಐತಿಹಾಸಿಕ ನಿರ್ಧಾರವಾಗಿತ್ತು. ಔಪಚಾರಿಕವಾಗಿ ನಾಮನಿರ್ದೇಶನ ಸ್ವೀಕರಿಸಿದ ನಂತರ ತಾವು ಮಾಡಿದ ಭಾಷಣದಲ್ಲಿ ಹ್ಯಾರಿಸ್ ಕಹಿ, ಸಿನಿಕತನ ಮತ್ತು ವಿಭಜಕ ರಾಜಕೀಯದಿಂದ ದೂರವಿರುವ "ಹೊಸ ದಾರಿಯನ್ನು ಮುಂದಿಡುವುದಾಗಿ " ಪ್ರತಿಜ್ಞೆ ಮಾಡಿದ್ದರು.

ಹೀಗಿದೆ ಅಮೆರಿಕದ ಸಂಪ್ರದಾಯ:ಅಮೆರಿಕ 50 ರಾಜ್ಯಗಳನ್ನು ಹೊಂದಿದೆ.ಅವುಗಳಲ್ಲಿ ಹೆಚ್ಚಿನವು ಸ್ವಿಂಗ್ ರಾಜ್ಯಗಳನ್ನು ಹೊರತುಪಡಿಸಿ ಪ್ರತಿ ಚುನಾವಣೆಯಲ್ಲಿ ಒಂದೇ ಪಕ್ಷಕ್ಕೆ ಮತ ಹಾಕುತ್ತಾ ಬರುತ್ತಿವೆ. ಪ್ರಮುಖ ಏಳು ಸ್ವಿಂಗ್​ ರಾಜ್ಯಗಳು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಹಣೆಬರಹ ಬರೆಯುತ್ತವೆ. ಸಾಮಾನ್ಯವಾಗಿ, ಪ್ರಮುಖ ರಾಜ್ಯಗಳನ್ನು ಹೊರತುಪಡಿಸಿ ಇತರ ರಾಜ್ಯಗಳಲ್ಲಿ ಅಭ್ಯರ್ಥಿಗಳು ಗೆಲುವು ಸಾಧಿಸುವುದರಲ್ಲಿ ಹೆಚ್ಚಿನ ಆಶ್ಚರ್ಯವಿಲ್ಲ. ಒಟ್ಟಾರೆ ಒಟ್ಟು 538 ಎಲೆಕ್ಟೋರಲ್ ಕಾಲೇಜು ಮತಗಳು ಅಧ್ಯಕ್ಷರ ಹಣೆಬರಹ ಬರೆಯಲಿವೆ.

ರಸ್ಟ್ ಬೆಲ್ಟ್‌ನ ಭಾಗವೆಂದು ಕರೆಯಲ್ಪಡುವ ಪೆನ್ಸಿಲ್ವೇನಿಯಾ, ಮಿಚಿಗನ್ ಮತ್ತು ವಿಸ್ಕಾನ್ಸಿನ್‌ನ ಸ್ವಿಂಗ್ ರಾಜ್ಯಗಳು ಸಾಂಪ್ರದಾಯಿಕವಾಗಿ ಡೆಮಾಕ್ರಟಿಕ್ ಪಕ್ಷದ ಭದ್ರಕೋಟೆಗಳಾಗಿವೆ.

ಈ ಬಾರಿಯ ಚುನಾವಣೆ ವಿಚಾರಗಳು ಇವಾಗಿದ್ದವು:ಹಿಂದಿನ, ಎಕ್ಸಿಟ್ ಪೋಲ್‌ಗಳು ಪ್ರಜಾಪ್ರಭುತ್ವದ ಸ್ಥಿತಿ, ಆರ್ಥಿಕತೆ ಮತ್ತು ಗರ್ಭಪಾತದ ವಿಚಾರದ ಮೇಲೆ ಈ ಬಾರಿಯ ಅಮೆರಿಕದ ಚುನಾವಣಾ ವಿಷಯಗಳಾಗಿವೆ ಎಂದು ಹೇಳಿವೆ.

ಸಿಬಿಎಸ್ ನ್ಯೂಸ್ ಬಿಡುಗಡೆ ಮಾಡಿದ ಎಕ್ಸಿಟ್ ಪೋಲ್‌ಗಳ ಪ್ರಕಾರ, 10 ಜನರಲ್ಲಿ ಆರು ಜನರು ಪ್ರಜಾಪ್ರಭುತ್ವದ ಉಳಿವು ತಮ್ಮ ಮೊದಲ ಆದ್ಯತೆ ಎಂದು ಪರಿಗಣಿಸಿದ್ದಾರೆ.

ಇದನ್ನು ಓದಿ:ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶ: ಐತಿಹಾಸಿಕ ಗೆಲುವಿನತ್ತ ಡೊನಾಲ್ಡ್‌ ಟ್ರಂಪ್‌!

ABOUT THE AUTHOR

...view details