ಕರ್ನಾಟಕ

karnataka

ETV Bharat / international

ಮೃತ ಖಲಿಸ್ತಾನಿ ಉಗ್ರನಿಗೆ ಕೆನಡಾ ಸಂಸತ್ತಿನಲ್ಲಿ ಶ್ರದ್ಧಾಂಜಲಿ: ಭಾರತ ಕೆಂಡಾಮಂಡಲ - Tribute to Khalistani Terrorist

ಮೃತ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್​ನಿಗೆ ಕೆನಡಾ ಸಂಸತ್ತಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.

ಮೃತ ಖಲಿಸ್ತಾನಿ ಉಗ್ರನಿಗೆ ಕೆನಡಾ ಸಂಸತ್ತಿನಲ್ಲಿ ಶ್ರದ್ಧಾಂಜಲಿ
ಮೃತ ಖಲಿಸ್ತಾನಿ ಉಗ್ರನಿಗೆ ಕೆನಡಾ ಸಂಸತ್ತಿನಲ್ಲಿ ಶ್ರದ್ಧಾಂಜಲಿ (IANS)

By ETV Bharat Karnataka Team

Published : Jun 19, 2024, 12:40 PM IST

ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಅವರ ಸಾವಿನ ಮೊದಲ ವಾರ್ಷಿಕೋತ್ಸವದ ದಿನದಂದು ಕೆನಡಾದ ಸಂಸತ್ತು ಹೌಸ್ ಆಫ್ ಕಾಮನ್ಸ್​ನಲ್ಲಿ ಮೌನಾಚರಣೆಯ ಮೂಲಕ ಮೃತ ಉಗ್ರನಿಗೆ ಗೌರವ ಸಮರ್ಪಿಸಲಾಗಿದೆ.

ಭಾರತದೊಂದಿಗೆ ಹಲವಾರು ಮಹತ್ವದ ವಿಷಯಗಳ ಬಗ್ಗೆ ಕೆನಡಾ ಸಾಮ್ಯತೆ ಹೊಂದಿದೆ ಹಾಗೂ ಭಾರತದಲ್ಲಿ ಅಧಿಕಾರಕ್ಕೆ ಬಂದಿರುವ ಹೊಸ ಸರ್ಕಾರದೊಂದಿಗೆ ಉತ್ತಮವಾಗಿ ತೊಡಗಿಸಿಕೊಳ್ಳಲು ಕೆನಡಾ ಬಯಸುತ್ತದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಹೇಳಿದ ಕೆಲವೇ ದಿನಗಳ ನಂತರ ಮೃತ ಉಗ್ರವಾದಿಗೆ ಸರ್ಕಾರಿ ಗೌರವ ಸಲ್ಲಿಸಿದ ಘಟನೆ ನಡೆದಿದೆ.

ಕಳೆದ ವರ್ಷ ಜೂನ್ 18 ರಂದು ಕೆನಡಾದ ಸರ್ರೆಯಲ್ಲಿ ಪಾರ್ಕಿಂಗ್ ಸ್ಥಳವೊಂದರ ಬಳಿ ನಿಜ್ಜರ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿ ಭಾರತವು ನಿಜ್ಜರ್​ನನ್ನು 'ನಿಯೋಜಿತ ಭಯೋತ್ಪಾದಕರ' ಪಟ್ಟಿಯಲ್ಲಿ ಸೇರಿಸಿತ್ತು. ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಕೆನಡಾ ಈವರೆಗೆ ಮೂವರನ್ನು ಬಂಧಿಸಿದೆ.

ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಕೆನಡಾ ಆರೋಪಿಸಿದ್ದು, ಇದಕ್ಕೆ ಪುರಾವೆಗಳನ್ನು ಒದಗಿಸಲು ವಿಫಲವಾಗಿದೆ. ಇದು ಕೆನಡಾ ಮತ್ತು ಭಾರತದ ನಡುವಿನ ಸಂಬಂಧವನ್ನು ಹದಗೆಡಿಸಿದೆ.

ಭಾರತದ ಆಕ್ರೋಶ: ಖಲಿಸ್ತಾನಿ ಭಯೋತ್ಪಾದಕನಿಗೆ ಕೆನಡಾ ಸಂಸತ್ತು ಗೌರವ ಸಲ್ಲಿಸಿದ್ದಕ್ಕೆ ಭಾರತ ಕೆಂಡಾಮಂಡಲವಾಗಿದೆ. ಈ ಬಗ್ಗೆ ವ್ಯಾಂಕೋವರ್​ನಲ್ಲಿರುವ ಭಾರತೀಯ ದೂತಾವಾಸವು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದು, ಏರ್ ಇಂಡಿಯಾ ವಿಮಾನ 182 (ಕನಿಷ್ಕಾ) ಮೇಲೆ ನಡೆದ ಬಾಂಬ್ ದಾಳಿಯನ್ನು ಜಗತ್ತಿಗೆ ನೆನಪಿಸಿದೆ.

"ಭಯೋತ್ಪಾದನೆಯ ಪಿಡುಗನ್ನು ಎದುರಿಸುವಲ್ಲಿ ಭಾರತವು ಮುಂಚೂಣಿಯಲ್ಲಿ ನಿಂತಿದೆ ಮತ್ತು ಈ ಜಾಗತಿಕವಾಗಿ ಉಗ್ರಗಾಮಿಗಳ ಬೆದರಿಕೆಯನ್ನು ನಿಭಾಯಿಸಲು ಎಲ್ಲ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ" ಎಂದು ವ್ಯಾಂಕೋವರ್​ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್​ನ ಅಧಿಕೃತ ಎಕ್ಸ್​ ಹ್ಯಾಂಡಲ್​ 'ಇಂಡಿಯಾ ಇನ್ ವ್ಯಾಂಕೋವರ್' ಬುಧವಾರ ಪೋಸ್ಟ್​ ಮಾಡಿದೆ.

"ಜೂನ್ 23, 2024 ಏರ್ ಇಂಡಿಯಾ ಫ್ಲೈಟ್ 182 (ಕನಿಷ್ಕಾ) ಮೇಲೆ ಭಯೋತ್ಪಾದಕ ಬಾಂಬ್ ದಾಳಿ ನಡೆದು 39 ವರ್ಷಗಳಾಗುತ್ತವೆ. ಈ ಹೇಡಿತನದ ದಾಳಿಯಲ್ಲಿ 86 ಮಕ್ಕಳು ಸೇರಿದಂತೆ 329 ಮುಗ್ಧ ನಾಗರಿಕರು ಪ್ರಾಣ ಕಳೆದುಕೊಂಡರು" ಎಂದು ಪೋಸ್ಟ್​ನಲ್ಲಿ ಉಲ್ಲೇಖಿಸಲಾಗಿದೆ. ಕೆನಡಾದ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಖಲಿಸ್ತಾನ್ ಪರ ಉಗ್ರಗಾಮಿಗಳಿಗೆ ಕೆನಡಾ ಯಾವುದೇ ಅಡೆತಡೆಯಿಲ್ಲದೇ ಸ್ಥಳಾವಕಾಶ ನೀಡುತ್ತಿರುವುದು ಉಭಯ ದೇಶಗಳ ನಡುವಿನ ಪ್ರಮುಖ ಸಮಸ್ಯೆಯಾಗಿದೆ ಎಂದು ಭಾರತ ಹೇಳಿದೆ.

ಇದನ್ನೂ ಓದಿ :ಅಕ್ಟೋಬರ್ 7ರ ಹಮಾಸ್​ ದಾಳಿಯ ಬಗ್ಗೆ ಐಡಿಎಫ್​ಗೆ ಮೊದಲೇ ತಿಳಿದಿತ್ತು: ಇಸ್ರೇಲ್ ಮಾಧ್ಯಮ - Hamas Attack on Israel

ABOUT THE AUTHOR

...view details