ಚಂಡೀಗಢ/ಅಮೃತಸರ: ಜೈಲಿನಲ್ಲಿರುವ ಖಲಿಸ್ತಾನಿ ಬೆಂಬಲಿಗ, ಸಂಸದ ಅಮೃತ್‌ಪಾಲ್ ಸಿಂಗ್, ತಾವು ಸಂಸತ್ ಅಧಿವೇಶನ ಮತ್ತು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಬೇಕು ಎಂದು ಕೋರಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾನೆ.
ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ದಾಖಲೆಯ ಮತಗಳೊಂದಿಗೆ ಗೆಲುವು ಸಾಧಿಸಿದ್ದ ಖಲಿಸ್ತಾನಿ ಹೋರಾಟಗಾರ, ಇತ್ತೀಚೆಗಷ್ಟೇ ಅಕಾಲಿ ದಳ (ಪಂಜಾಬ್ನ ಉತ್ತರಾಧಿಕಾರಿ) ಎಂಬ ಪಕ್ಷವನ್ನು ಸ್ಥಾಪಿಸಿದ್ದಾರೆ. ಇದರ ಬೆನ್ನಲ್ಲೇ, ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ನನಗೂ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಡಿ: ಸಂಸದ ಅಮೃತ್‌ಪಾಲ್ ಸಿಂಗ್ ಅವರ ಪರ ವಕೀಲ ಹಕಮ್ ಸಿಂಗ್ ಮೂಲಕ ಅರ್ಜಿ ಸಲ್ಲಿಸಿದ್ದು, ಸಂಸದನಾಗಿ ತಾವು ಸಂಸತ್ತಿನ ಅಧಿವೇಶನ ಮತ್ತು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನನ್ನ ಕರ್ತವ್ಯ ಮತ್ತು ಹಕ್ಕಾಗಿದೆ. ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೂಲ ತತ್ವಗಳ ಸಂಕೇತವೂ ಹೌದು. ರಾಷ್ಟ್ರೀಯ ಪ್ರಾಮುಖ್ಯತೆಯ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸಾರ್ವಜನಿಕ ಹಿತಾಸಕ್ತಿ ವಿಷಯವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಸಿಂಗ್ ಅರ್ಜಿ ಪರಿಗಣಿಸಿದ ಹೈಕೋರ್ಟ್: ಹೀಗಾಗಿ, ತಮಗೆ ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಅವಕಾಶ ನೀಡಬೇಕು ಎಂದು ಕೋರಿದ್ದಾರೆ. ಸಿಂಗ್ ಅವರ ಈ ಅರ್ಜಿಯನ್ನು ಹೈಕೋರ್ಟ್ ಪರಿಗಣಿಸಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ವಿಚಾರಣೆಗೆ ಪಟ್ಟಿ ಮಾಡಲಿದೆ ಎಂದು ತಿಳಿದುಬಂದಿದೆ. ಅಮೃತ್‌ಪಾಲ್ ಅವರು ತಮ್ಮ ಪ್ರತಿವಾದಿಯಾಗಿ ಭಾರತ ಸರ್ಕಾರ, ಪಂಜಾಬ್ ಸರ್ಕಾರ ಮತ್ತು ಇತರರನ್ನು ನಮೂದಿಸಿದ್ದಾರೆ.
ನೂತನ ಪಕ್ಷ ಆರಂಭ: ಜೈಲಿನಲ್ಲಿದ್ದುಕೊಂಡೇ, 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಖಾದೂರ್ ಸಾಹಿಬ್ ಲೋಕಸಭೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದರು. ಒಂದೇ ಒಂದು ಪ್ರಚಾರ ಸಭೆಯಲ್ಲಿ ಭಾಗವಹಿಸದೇ ದಾಖಲೆಯ ಪ್ರಮಾಣದಲ್ಲಿ ಮತ ಗಳಿಸಿ ಆಯ್ಕೆಯಾಗಿದ್ದರು. ಈ ಮೂಲಕ ಅವರು ತಮ್ಮ ಜನಪ್ರೀಯತೆಯನ್ನು ತೋರಿಸಿದ್ದಾರೆ.
ದೇಶ ವಿರೋಧಿ ಕೃತ್ಯದಲ್ಲಿ ಭಾಗಿಯಾದ ಆರೋಪದಲ್ಲಿ ಜೈಲುಪಾಲು: ಖಲಿಸ್ತಾನಿ ಹೋರಾಟದಲ್ಲಿ ಭಾಗಿಯಾಗಿ ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡ ಆರೋಪದಲ್ಲಿ ಅಮೃತ್‌ಪಾಲ್ ಸಿಂಗ್ ಅವರನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಎರಡು ವರ್ಷಗಳ ಹಿಂದೆ ಬಂಧಿಸಿದೆ. ಸದ್ಯ ಅವರನ್ನು ಅಸ್ಸಾಂನ ದಿಬ್ರುಗಢ ಜೈಲಿನಲ್ಲಿ ಇರಿಸಲಾಗಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್ಎಸ್ಎ) ಅವರು ಕ್ರಮ ಎದುರಿಸುತ್ತಿದ್ದಾರೆ.
ಇದನ್ನೂ ಓದಿ: ಖಲಿಸ್ತಾನ್ ಪ್ರತ್ಯೇಕತಾವಾದಿ ಅಮೃತ್‌ಪಾಲ್ ಸಿಂಗ್ ಬಂಧನ: ಅಸ್ಸೋಂ ಜೈಲಿಗೆ ಶಿಫ್ಟ್