ಶಿರಡಿ, ಮಹಾರಾಷ್ಟ್ರ: ಶಿರಡಿಯ ಸಾಯಿ ಬಾಬಾ ದೇಗುಲದ ಭದ್ರತಾ ಪಡೆಗೆ ಸಿಂಬಾ ಎಂಬ ಹೊಸ ಶ್ವಾನವೊಂದು ಸೇರ್ಪಡೆಗೊಂಡಿದೆ. ಇದುವರೆಗೂ ವರ್ಧನ್ ಎಂಬ ಶ್ವಾನ ದೇಗುಲದ ಭದ್ರತೆಯಲ್ಲಿ ತನ್ನದೇ ಸೇವೆಯನ್ನು ಸಲ್ಲಿಕೆ ಮಾಡುತ್ತಿತ್ತು. ಕಳೆದ 10 ವರ್ಷಗಳ ಕಾಲ ಸತತವಾಗಿ ಇಲ್ಲಿನ ಭದ್ರತೆಯಲ್ಲಿ ಕಾರ್ಯ ನಿರ್ವಹಿಸಿದ್ದು, ಈಗ ನಿವೃತ್ತಿಯಾಗಿದೆ. ಹೀಗಾಗಿ ವರ್ಧನ್ ಸ್ಥಾನಕ್ಕೆ ಇದೀಗ 3 ತಿಂಗಳ ಸಿಂಬಾ ಹೊಸ ಸೇರ್ಪಡೆಯಾಗಿದೆ.
ಇನ್ಮುಂದೆ ಸಿಂಬಾ ಹೆಗಲಿಗೆ ಇಲ್ಲಿನ ಹೊಣೆ: ಸಿಂಬಾ ಬಾಂಬ್ ಪತ್ತೆ ಮತ್ತು ನಿಷ್ಕ್ರೀಯ ತಂಡದಲ್ಲಿ ಕಾರ್ಯ ನಿರ್ವಹಿಸಲಿದೆ. ಸದ್ಯ ಸಿಂಬಾ ಬಿಡಿಡಿಎಸ್ ತಂಡ ಸೇರಿದ್ದು, ತರಬೇತಿ ಪಡೆದ ಬಳಿಕ, ಶೀಘ್ರದಲ್ಲೇ ಸಾಯಿ ದೇಗುಲದ ಭದ್ರತಾ ತಂಡದಲ್ಲಿ ಸೇರ್ಪಡೆಯಾಗಿ ತನ್ನ ಕೆಲಸ ಆರಂಭಿಸಲಿದೆ.
ದೇಶದ ಪ್ರಮುಖ ಧಾರ್ಮಿಕ ಕೇಂದ್ರದಲ್ಲಿ ಒಂದಾಗಿರುವ ಶಿರಡಿಗೆ, ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಇದರ ಜೊತೆಗೆ ವಿವಿಐಪಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸಾಯಿಬಾಬಾ ದರ್ಶನಕ್ಕೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಸಾಯಿ ದೇಗುಲದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವನ್ನು ವಿಶೇಷ ಬಿಡಿಡಿಎಸ್ ತಂಡ ವಹಿಸಿದೆ. ಸಾಯಿ ಬಾಬಾ ದೇಗುಲದ ಪೊಲೀಸ್ ಆಡಳಿತ ಮುನ್ನೆಚ್ಚರಿಕೆ ನೀಡಲು ಹಾಗೂ ಆಗಬಹುದಾದದ ಅನಾಹುತ ತಡೆಯಲು ವರ್ಧನ್ ಜಾಗದಲ್ಲಿ ಸಿಂಬಾ ನೇಮಕ ಮಾಡಿಕೊಂಡಿದೆ.
ಬಿಡಿಡಿಎಸ್ ತಂಡದಿಂದ ಪರಿಶೀಲನೆ: ದೇಗುಲದ ಕಕಡ್ ಆರತಿ, ಮಧ್ಯಾಹ್ನದ ಆರತಿ, ದುಪ ಆರತಿ ಹಾಗೇ ರಾತ್ರಿ ಶೆಜಾ ಆರತಿ ಸಮಯದಲ್ಲಿ ಬಿಡಿಡಿಎಸ್ ತಂಡ ದೇಗುಲದ ಮೂಲೆ ಮೂಲೆ ಸೇರಿದಂತೆ ಸಾಯಿ ಸಮಾಧಿ ಸುತ್ತ ಕಟ್ಟುನಿಟ್ಟಿನ ಪರಿಶೀಲನೆ ಮಾಡಲಾಗುತ್ತದೆ. ಈ ಮೊದಲು ಬಿಡಿಡಿಎಸ್ ತಂಡ ವರ್ಧನ್ ಎಂಬ ಶ್ವಾನದ ಸೇವೆಯನ್ನು ಪಡೆದುಕೊಳ್ಳುತ್ತಿತ್ತು. ಇದು ನಿವೃತ್ತಿಯಾದ ಬಳಿಕ ಸಿಂಬಾ ಈ ತಂಡವನ್ನು ಸೇರ್ಪಡೆಗೊಂಡಿದೆ. ಸಿಂಬಾ ಶೀಘ್ರದಲ್ಲೇ ಪುಣೆ ಸಿಐಡಿ ತರಬೇತಿ ನೀಡಲಿದೆ ಎಂದು ಸಾಯಿ ದೇಗುಲದ ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಘೋಟೆಕರ್ ತಿಳಿಸಿದ್ದಾರೆ.
ವರ್ಧನ್ಗೆ ಗೌರವಾನ್ವಿತ ಬೀಳ್ಕೊಡುಗೆ: ಕಳೆದ 10 ವರ್ಷಗಳಿಂದ ವರ್ಧನ್ ಇಂದು ಸೇವೆಯಿಂದ ನಿವೃತ್ತಿಗೊಂಡಿದ್ದಾನೆ. ಅದಕ್ಕೆ ಬಿಡಿಡಿಎಸ್ ತಂಡ ಭಾವಪೂರ್ವಕ ಬೀಳ್ಕೊಡುಗೆ ನೀಡಿದೆ. ಅದಕ್ಕೆ ಶಾಲು ಮತ್ತು ಹೂವಿನ ಹಾರ ಹಾಕಿ ಅದರ ಸೇವೆಯನ್ನು ಭದ್ರತಾ ಪಡೆ ಸಿಬ್ಬಂದಿ ಸ್ಮರಿಸಿಕೊಂಡರು.
ಇದನ್ನೂ ಓದಿ: ಫೋನ್ ಮಾಡೆಲ್ ಆಧರಿಸಿ ಪ್ರಯಾಣ ದರ ನಿಗದಿ ಆರೋಪ: ಓಲಾ, ಉಬರ್ಗೆ ಸಿಸಿಪಿಎ ನೋಟಿಸ್
ಇದನ್ನೂ ಓದಿ: ಮಹಾಕುಂಭಮೇಳದಲ್ಲಿ 10 ದಿನದಲ್ಲಿ 10 ಕೋಟಿ ಜನರಿಂದ ಪವಿತ್ರ ಸ್ನಾನ: ಉತ್ತರಪ್ರದೇಶ ಸರ್ಕಾರ