ಲಾಹೋರ್ (ಪಾಕಿಸ್ತಾನ) :ಭಾರತದ ವಿರುದ್ಧ ಕುಕೃತ್ಯಗಳಿಗೆ ತನ್ನ ನೆಲದಲ್ಲಿ ಪಾಕಿಸ್ತಾನಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದ ಬಾಂಗ್ಲಾದೇಶ, ಇದೀಗ ಆ ದೇಶದ ನಿವಾಸಿಗಳಿಗೆ ತನ್ನ ರಾಷ್ಟ್ರಕ್ಕೆ ಬರಲು ವೀಸಾ ಸೇವೆಯನ್ನು ಮತ್ತಷ್ಟು ಸರಳೀಕರಿಸಿದೆ. ನೆರೆಯ ಮುಸ್ಲಿಂ ರಾಷ್ಟ್ರಗಳ ಈ ನಡೆಯು ಭಾರತಕ್ಕೆ ಆತಂಕದ ವಿಚಾರವಾಗಿದೆ.
ಪಾಕಿಸ್ತಾನದೊಂದಿಗಿನ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಉತ್ಸುಕವಾಗಿದೆ. ಹೀಗಾಗಿ, ಆ ದೇಶದ ಜನರಿಗೆ ವೀಸಾ ನೀಡುವ ಪ್ರಕ್ರಿಯೆ ಸರಳಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಪಾಕಿಸ್ತಾನದ ರಾಯಭಾರ ಕಚೇರಿಗಳ ಮುಖ್ಯಸ್ಥರಿಗೆ ವೀಸಾ ನೀಡುವಾಗ ಸರ್ಕಾರದ ಅನುಮತಿ ಪಡೆಯುವ ಅಗತ್ಯವನ್ನು ತೆಗೆದುಹಾಕಲಾಗಿದೆ ಎಂದು ಪಾಕಿಸ್ತಾನಕ್ಕೆ ಬಾಂಗ್ಲಾದೇಶದ ಹೈಕಮಿಷನರ್ ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ.