ಅಸ್ತಾನಾ(ಕಝಾಕಿಸ್ತಾನ):ರಷ್ಯಾಗೆ ತೆರಳುತ್ತಿದ್ದ ಅಜರ್‌ಬೈಜಾನ್ ಏರ್‌ಲೈನ್ಸ್ ಪ್ಯಾಸೆಂಜರ್ ವಿಮಾನ ತಾಂತ್ರಿಕ ಸಮಸ್ಯೆಯಿಂದ ಕಝಾಕಿಸ್ತಾನದಲ್ಲಿ ಬುಧವಾರ ಪತನಗೊಂಡಿತು. ವಿಮಾನವನ್ನು ಪೈಲಟ್ ತುರ್ತು ಲ್ಯಾಂಡಿಂಗ್ ಮಾಡುವ ವೇಳೆ ನೆಲಕ್ಕೆ ರಭಸವಾಗಿ ಅಪ್ಪಳಿಸಿ ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿತು.
ನತದೃಷ್ಟ ವಿಮಾನ ಅಜರ್ಬೈಜಾನ್ನ ರಾಜಧಾನಿ ಬಾಕುವಿನಿಂದ ರಷ್ಯಾದ ಗ್ರೋಜ್ನಿಗೆ ತೆರಳುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ಸಮಸ್ಯೆಗೀಡಾಗಿದೆ. ಕಝಾಕಿಸ್ತಾನದ ಕ್ಯಾಸ್ಪಿಯನ್ ಸಮುದ್ರದ ಸಮೀಪ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ ಐವರು ಸಿಬ್ಬಂದಿ ಸೇರಿ 67 ಮಂದಿ ಇದ್ದರು ಎಂದು ತಿಳಿದು ಬಂದಿದೆ.
ತುರ್ತು ಲ್ಯಾಂಡಿಂಗ್ ವೇಳೆ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡರೂ, ಅಚ್ಚರಿ ರೀತಿಯಲ್ಲಿ 25 ಮಂದಿ ತೀವ್ರ ಗಾಯಗಳೊಂದಿಗೆ ಬದುಕುಳಿದಿದ್ದಾರೆ. ವಿಷಯ ತಿಳಿದ ರಕ್ಷಣಾ ಪಡೆಗಳು ಸ್ಥಳಕ್ಕೆ ಆಗಮಿಸಿ ದುರಂತದಲ್ಲಿ ಬದುಕುಳಿದವರನ್ನು ರಕ್ಷಿಸಿ, ಸ್ಥಳೀಯ ಆಸ್ಪತ್ರೆಗೆ ರವಾನಿಸಿವೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕಝಕ್ ಸಾರಿಗೆ ಸಚಿವಾಲಯ, "ಬಾಕುದಿಂದ ರಷ್ಯಾದ ಗ್ರೋಜ್ನಿಗೆ 67 ಜನರನ್ನು ಹೊತ್ತು ಸಾಗುತ್ತಿದ್ದ ಅಜರ್‌ಬೈಜಾನ್ ಏರ್‌ಲೈನ್ಸ್ ಪ್ಯಾಸೆಂಜರ್ ವಿಮಾನವು ಪಶ್ಚಿಮ ಕಝಾಕಿಸ್ತಾನದಲ್ಲಿ ಬುಧವಾರ ಪತನಗೊಂಡಿದೆ. ಅಪಘಾತದಲ್ಲಿ 25 ಜನರು ಬದುಕುಳಿದಿದ್ದಾರೆ" ಎಂದು ಮಾಹಿತಿ ನೀಡಿದೆ.