ನವದೆಹಲಿ: ಯಾವುದೇ ವಯಸ್ಸಿನಲ್ಲಿಯೂ ವ್ಯಕ್ತಿ ಖಿನ್ನತೆ, ಒತ್ತಡದಂತಹ ಸಮಸ್ಯೆಯಿಂದ ಬಳಲುತ್ತಿರಬಹುದು. ಇಂತಹ ಸಮಯದಲ್ಲಿ ಕಾಡುವ ಒಂದು ಯೋಚನೆ ದೊಡ್ಡ ದುರ್ಘಟನೆಗೂ ದಾರಿ ಮಾಡಿಕೊಡಬಹುದು. ಇಂತಹ ಜನರಿಗೆ ಆ ಕ್ಷಣದಲ್ಲಿ ಸಿಗುವ ಒಂದು ಸಾಂತ್ವನ ಅವರ ಬದುಕು ಬದಲಾಯಿಸುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಇಲಾಖೆ ದೇಶದಲ್ಲಿ ರಾಷ್ಟ್ರೀಯ ಟೆಲಿ-ಮೆಂಟಲ್ ಹೆಲ್ತ್ ಪ್ರೋಗ್ರಾಂ (ಟೆಲಿ ಮಾನಸ್) ಎಂಬ ಟೋಲ್ ಫ್ರಿ ಸಹಾಯವಾಣಿ ಆರಂಭಿಸಿತು. ಇದೀಗ ಈ ಸಹಾಯವಾಣಿಗೆ ದಿನಕ್ಕೆ ಸರಾಸರಿ 3,500 ಕರೆಗಳು ಬರುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
2022ರ ಅಕ್ಟೋಬರ್ನಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು 51 ಟೆಲಿ ಮಾನಸ್ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಈ ಟೆಲಿ ಮಾನಸ್ ಟೋಲ್ ಫ್ರೀ ಸಂಖ್ಯೆ ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಕರೆಯನ್ನು ಸ್ವೀಕರಿಸಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ದೇಶದೆಲ್ಲೆಡೆ ಮಾನಸಿಕ ಆರೋಗ್ಯ ಸೇವೆ ನೀಡಲು 14416 ಅಥವಾ 1-800-891-4416 ಎಂಬ ಟೋಲ್ ಫ್ರೀ ಸಂಖ್ಯೆ ನೀಡಲಾಗಿದೆ. ಬಹುಭಾಷೆಯ ಸೌಲಭ್ಯ ಇದರಲ್ಲಿದೆ. ಈ ಮೂಲಕ ಕರೆ ಮಾಡುವವರ ಭಾಷೆಯಲ್ಲಿ ಮಾನಸಿಕ ಆರೋಗ್ಯ ವೃತ್ತಿಪರರು ಸಂವಹನ ನಡೆಸಿ, ಸಮಸ್ಯೆ ಬಗೆಹರಿಸಲಾಗುತ್ತಿದೆ.
ಸಚಿವಾಲಯದ ಪ್ರಕಾರ, 2022ರಲ್ಲಿ 12 ಸಾವಿರ ಕರೆಯನ್ನು ಈ ಟೆಲಿ ಮಾನಸ್ ಮೂಲಕ ಸ್ವೀಕರಿಸಲಾಗಿದೆ. 2024ರಲ್ಲಿ ಈ ಸಂಖ್ಯೆ 90 ಸಾವಿರಕ್ಕೇರಿದೆ. ಈ ಮೂಲಕ ಸಹಾಯವಾಣಿಗೆ ಕರೆಗಳ ಸಂಖ್ಯೆಯಲ್ಲಿ ಸ್ಥಿರವಾದ ಹೆಚ್ಚಳ ಕಂಡುಬಂದಿದೆ. ಇದರ ಜೊತೆಗೆ ಕರೆ ಮಾಡಿದವರಿಗೆ ಆಗ ಮಾತ್ರ ಸಾಂತ್ವನ ನೀಡಿ ಸುಮ್ಮನಾಗದ ಆರೋಗ್ಯ ವೃತ್ತಿಪರರು ಅವರಿಗೆ ಮರು ಕರೆ ಮಾಡಿ, ಫಾಲೋ ಅಪ್ ಮಾಡುವುದರಿಂದ ಅವರ ಸಂಪೂರ್ಣ ಮಾನಸಿಕ ಆರೋಗ್ಯ ಸುಧಾರಣೆಗೆ ನೆರವಾಗುತ್ತಾರೆ.