ನವದೆಹಲಿ: ಅಂಬೇಡ್ಕರ್ ಕುರಿತಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಹೇಳಿಕೆ ವಿರೋಧಿಸಿ, ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಇಂಡಿಯಾ ಒಕ್ಕೂಟದ ಸದಸ್ಯರು, ನೀಲಿ ಬಟ್ಟೆ ಧರಿಸಿ ಸಂಸತ್ ಭವನದ ಆವರಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ನಾಯಕರು ಸಂಸತ್ತಿನ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಯಿಂದ ಸಂಸತ್ ಭವನದವರೆಗೆ ಅಂಬೇಡ್ಕರ್ ಭಾವಚಿತ್ರ ಹಿಡಿದು 'ಜೈ ಭೀಮ್' ಘೋಷಣೆ ಕೂಗುತ್ತಾ ಮೆರವಣಿಗೆ ಕೈಗೊಂಡರು.
ಕೇಂದ್ರ ಗೃಹ ಸಚಿವರು ಕ್ಷಮೆ ಕೇಳಿ, ರಾಜೀನಾಮೆ ನೀಡಬೇಕು ಎಂದು ಇಂಡಿಯಾ ಒಕ್ಕೂಟದ ಸಂಸದ ಮಕರ್ ದ್ವಾರ್ ಒತ್ತಾಯಿಸಿದರು. ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಮಾತನಾಡಿ, ಅವರು ಬಾಯಿ ತಪ್ಪಿ ಅಂಬೇಡ್ಕರ್ ಕುರಿತು ಮಾತನಾಡಿದರೆ, ಅಮಿತ್ ಶಾ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ: ಇದೇ ವೇಳೆ, ಬಿಜೆಪಿ ಸಂಸದರು ಕೂಡ ಅಂಬೇಡ್ಕರ್ ಅವರನ್ನು ವಿಪಕ್ಷ ಕಾಂಗ್ರೆಸ್ ಅವಮಾನ ಮಾಡುತ್ತಿದ್ದು, ಕ್ಷಮೆ ಯಾಚಿಸಬೇಕು ಎಂದು ಘೋಷಣೆ ಕೂಗುತ್ತಾ ಸಂಸತ್ ಭವನದಲ್ಲಿ ಪ್ರತಿಭಟನೆ ನಡೆಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನವಾಗುವುದನ್ನು ನಾವು ಸಹಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರು ತಿಳಿಸಿದರು. ಬ್ಯಾನರ್ ಹಿಡಿದು ಅಂಬೇಡ್ಕರ್ ಕುರಿತು ಘೋಷಣೆ ಕೂಗಿದ ಬಿಜೆಪಿ ಸಂಸದರು, ಅಂಬೇಡ್ಕರ್ ನಮಗೆ ದಾರಿ ತೋರಿದರು. ಕಾಂಗ್ರೆಸ್ ದಾರಿ ತಪ್ಪಿಸುತ್ತಿದೆ ಎಂದರು.
ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಗಾಂಧಿ ಕುಟುಂಬವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು. ಅವರೆಲ್ಲರೂ ಭಾರತ ರತ್ನವನ್ನು ಪಡೆದರು, ಆದರೆ, ಅಂಬೇಡ್ಕರ್ ಅವರಿಗೆ ಮಾತ್ರ ನೀಡಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ನೀಡದೇ ಅಗೌರವ ತೋರಿದರು ಎಂದು ವಾಗ್ದಾಳಿ ನಡೆಸಿದರು.
ಜೆಡಿಯು ಎಂ ಮತ್ತು ಕೇಂದ್ರ ಸಚಿವ ರಾಜೀವ್ ರಾಜನ್ ಸಿಂಗ್ ಮಾತನಾಡಿ, ಕೇವಲ ಮಲ್ಲಿಕಾರ್ಜುನ ಖರ್ಗೆ ಮಾತ್ರವಲ್ಲ, ಇಡೀ ಕಾಂಗ್ರೆಸ್ ಪಕ್ಷ ಕೇಂದ್ರ ಗೃಹ ಸಚಿವರ ಭಾಷಣವನ್ನು ನಕರಾತ್ಮಕ ಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವರು ಆಡಿದ ಮಾತುಗಳು ಇದೀಗ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ಸದಸ್ಯರು ಅಂಬೇಡ್ಕರ್ ಅವರ ಬಗೆಗಿನ ಶಾ ಅವರ ಹೇಳಿಕೆಯನ್ನು ಟೀಕಿಸಿದ್ದು, ಈ ಕುರಿತು ಕ್ಷಮೆಯಾಚಿಸುವಂತೆ ಒತ್ತಾಯಿಸಿದೆ. ಪ್ರಧಾನಿ ಸೇರಿದಂತೆ ಬಿಜೆಪಿ ನಾಯಕರು ಅಮಿತ್ ಶಾ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಕಾಂಗ್ರೆಸ್ನ ಅಂಬೇಡ್ಕರ್ ವಿರೋಧಿ ನೀತಿಯನ್ನು ಬಯಲಿಗೆಳೆದಿದೆ ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಅಂಬೇಡ್ಕರ್ ಕುರಿತ ಹೇಳಿಕೆ ವಿವಾದ: ರಾಜೀನಾಮೆ ನೀಡಿ, ಕ್ಷಮೆ ಕೇಳಿ - ಖರ್ಗೆ; 15 ವರ್ಷ ವಿಪಕ್ಷದಲ್ಲೇ ಕಾಂಗ್ರೆಸ್- ಅಮಿತ್ ಶಾ