ಬೆಂಗಳೂರು: ಭೋಗ್ಯಕ್ಕೆ ಕೊಡುವುದಾಗಿ ಒಂದೇ ಮನೆಯನ್ನು 22 ಜನರಿಗೆ ತೋರಿಸಿ ಕೋಟ್ಯಂತರ ರೂ. ವಂಚಿಸಿದ ಆರೋಪದಡಿ ನಗರದ ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮನೆ ಹುಡುಕಾಟ ಆ್ಯಪ್‌ವೊಂದರಲ್ಲಿ ಜಾಹೀರಾತು ನೀಡಿದ್ದ ಗಿರೀಶ್ ಎಂಬಾತ ಬಳಿಕ ಹಲವರಿಂದ 2 ಕೋಟಿ ರೂ.ಗಳಷ್ಟು ಹಣ ಪಡೆದು ವಂಚಿಸಿದ್ದ ಆರೋಪದ ಮೇಲೆ ದೂರು ದಾಖಲಾಗಿದ್ದವು.
ದೂರಿನ ವಿವರ: ಹೆಬ್ಬಾಳ ಸಮೀಪದ ಚೋಳನಗರದಲ್ಲಿರುವ ತನ್ನ ಮನೆಯನ್ನು ಭೋಗ್ಯಕ್ಕೆ ನೀಡುವುದಾಗಿ ಕಳೆದ ವರ್ಷಾಂತ್ಯದಲ್ಲಿ ಆರೋಪಿ ಗಿರೀಶ್ ಆ್ಯಪ್‌ವೊಂದರಲ್ಲಿ ಜಾಹೀರಾತು ನೀಡಿದ್ದರು. ಅದನ್ನು ಗಮನಿಸಿದ್ದ ಕೆಲವರು ಮನೆ ಪಡೆಯಲು ಗಿರೀಶನಿಗೆ ಕರೆ ಮಾಡಿ ವಿಚಾರಿಸಿದ್ದರು. ಹೀಗೆ ಕರೆ ಮಾಡಿದ ಎಲ್ಲರಿಗೂ ಮನೆ ಭೋಗ್ಯಕ್ಕೆ ನೀಡುವುದಾಗಿ ನಂಬಿಸಿದ್ದ ಆರೋಪಿ, ಒಬ್ಬೊಬ್ಬರಿಂದ 8 ರಿಂದ 13 ಲಕ್ಷದವರೆಗೂ ಹಣ ಪಡೆದುಕೊಂಡಿದ್ದಾಗಿ ಹಲವರು ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಹಣ ಕೊಟ್ಟವರು ಮನೆ ಕೊಡಿ ಎಂದಾಗ 'ಮನೆ ರಿನೋವೇಶನ್ ಆಗುತ್ತಿದೆ. ಈಗಿರುವ ಬಾಡಿಗೆದಾರರ ಜೊತೆ ಹಣದ ವಿಚಾರವಾಗಿ ಸಮಸ್ಯೆಯಾಗಿದೆ. ತಂದೆ ತೀರಿಕೊಂಡಿದ್ದಾರೆ' ಎಂದು ಕಾರಣ ನೀಡುತ್ತಿದ್ದ ಎಂದು ದೂರಲಾಗಿದೆ.
ಹಣ ವಾಪಸ್ ಆಗಿಲ್ಲವೆಂದು ದೂರು: ಆರೋಪಿಯ ಕಾರಣಗಳನ್ನ ಕೇಳಿ ಬೇಸತ್ತ ಬಳಿಕ ಅನೇಕರು ತಮ್ಮ ಹಣ ವಾಪಸ್ ಕೇಳಿದ್ದರು. ಅಂಥವರಿಗೆ ಹಣ ವಾಪಸ್ ನೀಡುವುದಾಗಿ ನಂಬಿಸುತ್ತಿದ್ದ ಗಿರೀಶ್, ತನ್ನ ಪತ್ನಿ ದೀಪಾ, ನಾದಿನಿ ರೂಪಾ, ಸರಿತಾ ಹೆಸರಿನಲ್ಲಿ ನಕಲಿ ಸಹಿ, ತಪ್ಪಾದ ಹೆಸರಿನ ಚೆಕ್ ನೀಡುತ್ತಿದ್ದ. ಇದರ ನಡುವೆ ವಂಚನೆಗೊಳಗಾದವರಿಗೆ ಹಣ ವಾಪಸ್ ನೀಡುವುದಾಗಿ ಆರೋಪಿಯ ನಾದಿನಿ ಸರಿತಾ ಪತ್ರ ಬರೆದುಕೊಟ್ಟಿದ್ದಾರೆ. ಆದರೆ ಇದುವರೆಗೂ ಹಣ ಮಾತ್ರ ವಾಪಸ್ ಆಗಿಲ್ಲ ಎಂದು ದೂರು ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯಿಂದ ವಂಚನೆಗೊಳಗಾದ ಅನೇಕರು ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ಆದರೆ ಆರೋಪಿ ಗಿರೀಶ್ ಹಾಗೂ ಆತನ ಕುಟುಂಬದವರ ಸಂಚಿನಿಂದ ಕಳೆದುಕೊಂಡ ಹಣ ಮಾತ್ರ ಇನ್ನೂ ತಮ್ಮ ಕೈಸೇರಿಲ್ಲ. ಹಣ ವಾಪಸ್ ಕೊಡಿಸಿ ಎಂದು ನೊಂದವರು ಸದ್ಯ ಸಿಸಿಬಿಗೆ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ತುಮಕೂರು: ಪ್ರಿಯಕರನ ಜೊತೆ ಸೇರಿ ಗಂಡನಿಗೆ ಬೆಂಕಿ ಹಚ್ಚಿ ಕೊಂದ ಪತ್ನಿಗೆ ಜೀವಾವಧಿ ಶಿಕ್ಷೆ