ಬೆಳಗಾವಿ: "ಅಮಿತ್ ಶಾ ಅವರು ಏನು ತಪ್ಪು ಮಾಡಿದ್ದಾರೆಂದು ಕಾಂಗ್ರೆಸ್ ಹೇಳಬೇಕು. ಅಮಿತ್ ಶಾ ಅವರು ಕಾಂಗ್ರೆಸ್ ದಲಿತ ವಿರೋಧಿ, ಸಂವಿಧಾನ ವಿರೋಧಿ, ಅಂಬೇಡ್ಕರ್ ಅವರ ವಿರೋಧಿ ಎನ್ನುವಂತದನ್ನು ಹೇಳಿದ್ದಾರೆ" ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಳಗಾವಿ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಕಾಂಗ್ರೆಸ್ನವರು ವೋಟ್ ಬ್ಯಾಂಕ್ ಮಾಡಲು ಅಂಬೇಡ್ಕರ್ ಅವರ ಹೆಸರನ್ನು ಒಂದು ರೀತಿಯ ಪ್ಯಾಶನ್ ಆಗಿ ಬಳಸುತ್ತಿದ್ದಾರೆ. ಮಾತಿನಲ್ಲಿ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಹೇಳುತ್ತಾರೆ. ಆದರೆ ಅವರಿಗೆ ಮೋಸ ಮಾಡಿದ್ದು, ಅನ್ಯಾಯ ಮಾಡಿದ್ದು, ಅವರಿಗೆ ನೋವುಂಟು ಮಾಡಿದ್ದು ಕಾಂಗ್ರೆಸ್ ಅಂತ ಅಮಿತ್ ಶಾ ಹೇಳಿದ್ದಾರೆ".
"ಅವರು ಹೇಳಿರುವಂತ ಮಾತುಗಳು ಏನೆಂದರೆ, 'ನೀವು(ಕಾಂಗ್ರೆಸ್) ಅವರಿಗೆ (ಅಂಬೇಡ್ಕರ್) ಅಷ್ಟೊಂದು ಮೋಸ, ಅನ್ಯಾಯ ಮಾಡಿದಕ್ಕೆ, ನೋಯಿಸಿದಕ್ಕೆ ಅದರ ಫಲವಾಗಿ ನೀವು ದೇವರಲ್ಲಿ 7 ಬಾರಿ ಪ್ರಾರ್ಥನೆ ಮಾಡಿಕೊಂಡಿದ್ದರೆ ನಿಮಗೆ ಸ್ವರ್ಗ ಸಿಗುತ್ತಿತ್ತು. ಅಂದರೆ ಅದರ ಅರ್ಥ ನೋವು ಮಾಡಿದರ ಪ್ರತಿಫಲ ನೀವು ಪಶ್ಚಾತ್ತಾಪ ಪಟ್ಟು ಈ ರೀತಿ ಹೇಳಿದಿದ್ದರೆ ನಿಮಗೆ ಸ್ವರ್ಗ ಸಿಗುತ್ತಿತ್ತು 'ಎಂದು ಅಮಿತ್ ಶಾ ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಅವರ ಪ್ರತಿಯೊಂದು ಹೆಜ್ಜೆಯಲ್ಲೂ ವಿರೋಧಿಸಿದೆ, ತಿರಸ್ಕರಿಸಿದೆ" ಎಂದು ಹೇಳುತ್ತಾ ಛಲವಾದಿ ನಾರಾಯಣಸ್ವಾಮಿ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಬೆಳಗಾವಿ ಚಳಿಗಾಲದ ಅಧಿವೇಶನದ ವಿಚಾರವಾಗಿ ಮಾತನಾಡಿ, "ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕದ ಸಮಸ್ಯೆಗೆ ಪರಿಹಾರ ನೀಡಬೇಕಾಗಿತ್ತು.
ಬರಿ ಬಿಲ್ಪಾಸ್ ಮಾಡುವುದರಲ್ಲೇ ಈ ಸರ್ಕಾರ ಮುಂದಾಗಿದೆ. ಇದನ್ನು ಬೆಂಗಳೂರಿನಲ್ಲೇ ಮಾಡಬಹುದಿತ್ತು. ಬರಿ ಲೂಟಿ ಮಾಡುವುದೇ ಕೆಲಸ ಆಗಿದೆ. ಜನಗಳ ಜಾತ್ರೆಯನ್ನು ಮಾಡಿಸಿದ್ದಾರೆ. ಅಧಿವೇಶನವನ್ನು ಪಿಕ್ನಿಕ್ ರೀತಿ ಮಾಡಿಸಿದ್ದಾರೆ. ಸರ್ಕಾರ ಜನರ ಸಮಸ್ಯೆ ಬಗೆಹರಿಸಿಲ್ಲ. ಯಾವುದೇ ಸಮಸ್ಯೆಗೆ ಪರಿಹಾರ ಕೊಟ್ಟಿಲ್ಲ" ಎಂದು ತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹರಿಹಾಯ್ದರು.
ಅಂಬೇಡ್ಕರ್ ಬಗ್ಗೆ ಬಿಜೆಪಿಗೆ ಅಪಾರ ಗೌರವವಿದೆ - ಆರ್. ಅಶೋಕ್: "ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರ ಸಲುವಾಗಿ ಅಮಿತ್ ಶಾ ಅವರ ಬಗ್ಗೆ ಕಾಂಗ್ರೆಸ್ ಅವರು ಇಲ್ಲಸಲ್ಲದ ಆರೋಪ, ಟೀಕೆಗಳನ್ನು ಮಾಡಿದ್ದಾರೆ. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ನವರು ಮಹಾರಾಷ್ಟ್ರದಲ್ಲಿ 2 ಬಾರಿ ಸೋಲಿಸಿದ್ದಾರೆ. ಸ್ವತಃ ನೆಹರೂ ಅವರೇ ಬಂದು ಅಂಬೇಡ್ಕರ್ ಅವರನ್ನು ಸೋಲಿಸುವಂತೆ ಪ್ರಚಾರ ಮಾಡಿರುವುದನ್ನು ನಾವು ನೋಡಿದ್ದೀವಿ. ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡಲು ಇವರ ಕೈಯಲ್ಲಿ ಸಾಧ್ಯವೇ ಆಗಲಿಲ್ಲ. ಇಂದಿರಾ ಗಾಂಧಿಗೆ, ರಾಜೀವ್ ಗಾಂಧಿಗೆ.. ಹೀಗೆ ಅವರವರಿಗೆ ಕೊಟ್ಟುಕೊಂಡರು".
"ಅಂಬೇಡ್ಕರ್ ಅವರಿಗೆ ಅಗೌರವ ತೋರಿರೋದು ಕಾಂಗ್ರೆಸ್ನವರು. ಅವರ ಸ್ಮಾರಕಗಳನ್ನು ಅಭಿವೃದ್ಧಿ ಮಾಡಿ ವಿಶ್ವಕ್ಕೆ ತಿಳಿಸಿಕೊಟ್ಟದ್ದು ನರೇಂದ್ರ ಮೋದಿ ಅವರು. ಇವತ್ತು ಅಮಿತ್ ಶಾ ಅವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುವ ಮುಖಾಂತರ ಒಂದು ಕೀಳು ಮಟ್ಟದ ರಾಜಕಾರಣವನ್ನು ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರ ಬಗ್ಗೆ ಬಿಜೆಪಿ ಸದಾ ಗೌರವವನ್ನು ಇಟ್ಟುಕೊಂಡಿದೆ. ಅವರ ಸ್ಮಾರಕಗಳನ್ನು ಅಭಿವೃದ್ಧಿ ಮಾಡಿದ್ದೀರಿ. ಇದು ಒಂದು ರೀತಿ ಕಾಂಗ್ರೆಸ್ ವೋಟಿನ ಪಾಲಿಟಿಕ್ಸ್ಗೋಸ್ಕರ ಈ ತರಹ ನಾಟಕಗಳನ್ನು ಮಾಡುತ್ತಿದ್ದಾರೆ" ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಅಂಬೇಡ್ಕರ್ ಕುರಿತ ಹೇಳಿಕೆ ವಿವಾದ: ರಾಜೀನಾಮೆ ನೀಡಿ, ಕ್ಷಮೆ ಕೇಳಿ - ಖರ್ಗೆ; 15 ವರ್ಷ ವಿಪಕ್ಷದಲ್ಲೇ ಕಾಂಗ್ರೆಸ್- ಅಮಿತ್ ಶಾ