Best Tips For Good Sleep Hygiene:ನಾವು ನಮ್ಮ ಜೀವನದ ಅರ್ಧದಷ್ಟು ಭಾಗವನ್ನು ನಿದ್ರೆ ಮಾಡುವುದರಲ್ಲಿ ಕಳೆಯುತ್ತೇವೆ. ಉತ್ತಮ ಆರೋಗ್ಯಕ್ಕೆ ನಿದ್ರೆ ಅತ್ಯಗತ್ಯವಾಗಿದೆ. ಸರಿಯಾಗಿ ನಿದ್ರೆ ಮಾಡದಿದ್ದರೆ ಶೀಘ್ರ ಕೋಪ ಬರುವುದು, ಸುಸ್ತು, ತಲೆನೋವು ಹಾಗೂ ಒತ್ತಡ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತವೆ. ನಿದ್ರೆ ಕೊರತೆಯಾದರೆ ದೈಹಿಕ ಪ್ರತಿಕ್ರಿಯೆಗಳ ವೇಗವೂ ಕೂಡ ನಿಧಾನವಾಗುತ್ತದೆ. ದೀರ್ಘಕಾಲದ ನಿದ್ರೆಯ ಕೊರತೆಯು ನಿದ್ರಾಹೀನತೆಗೆ ಮುಖ್ಯ ಕಾರಣವಾಗಬಹುದು. ನಿದ್ರಾಹೀನತೆಗೆ ಸರಿಯಾದ ಕಾರಣಗಳೇನು? ಅವುಗಳನ್ನು ಗುರುತಿಸಿದರೆ, ನಿದ್ರಾಹೀನತೆಯನ್ನು ಬೇಗನೇ ಸರಿಪಡಿಸಬಹುದು ಎಂದು ತಜ್ಞರು ತಿಳಿಸುತ್ತಾರೆ.
ಹಗಲಿನಲ್ಲಿ ನಿದ್ರೆ ಮಾಡುವುದು: ಹಗಲಿನಲ್ಲಿ ಅಲ್ಪ ನಿದ್ರೆ ಮಾಡಿದರೆ ತೊಂದರೆ ಇಲ್ಲ. ಆದರೆ, ಹೆಚ್ಚು ಹೊತ್ತು ಮಲಗುವುದರಿಂದ ರಾತ್ರಿ ಸಮಯದಲ್ಲಿ ನಿದ್ರೆ ಬರುವುದಿಲ್ಲ. ದೇಹದಲ್ಲಿ ಜೈವಿಕ ಗಡಿಯಾರ ಕೂಡ ತಪ್ಪಾಗುತ್ತದೆ. ಇದು ಹಗಲಿನಲ್ಲಿ ಸಕ್ರಿಯವಾಗಿರುವ ಹಾಗೂ ರಾತ್ರಿಯಲ್ಲಿ ಮಲಗುವ ಪ್ರಕ್ರಿಯೆಗೆ ಅಡ್ಡಿಪಡಿಸುತ್ತದೆ. ಆದ್ದರಿಂದ ನಿದ್ರೆಯ ಸಮಸ್ಯೆಯಿಂದ ಬಳಲುತ್ತಿರುವವರು ಹಗಲಿನ ನಿದ್ರೆಯಿಂದ ದೂರವಿರುವುದು ಒಳ್ಳೆಯದು.
ಇಡೀ ರಾತ್ರಿ ಕೆಲಸ:ನಾವು ಇಡೀ ರಾತ್ರಿ ಕೆಲಸ ಮಾಡುವ ಯಂತ್ರಗಳಲ್ಲ. ಕೆಲಸದಿಂದ ದಣಿದ ಮನಸ್ಸು ಹಾಗೂ ಸ್ನಾಯುಗಳಿಗೆ ವಿಶ್ರಾಂತಿ ಅಗತ್ಯವಾಗಿದೆ. ನಮ್ಮನ್ನು ಕ್ರಿಯಾಶೀಲವಾಗಿಟ್ಟಿರುವ ಅಡ್ರಿನಾಲಿನ್ ಹಾರ್ಮೋನ್ ಮಟ್ಟವು ಕಡಿಮೆಯಾಗುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಇದರರ್ಥ ಮಲಗುವ ಕೆಲವು ಗಂಟೆಗಳ ಮೊದಲು ದೇಹವನ್ನು ನಿದ್ರೆಗಾಗಿ ಸಿದ್ಧಪಡಿಸುವುದು. ಹಾಗಾಗಿ ಯಾವುದೇ ಕೆಲಸ ಮಾಡಬೇಡಿ. ಇಷ್ಟವಾದ ಪುಸ್ತಕವನ್ನು ಓದುವುದು, ಸುಮಧುರವಾದ ಸಂಗೀತವನ್ನು ಕೇಳುವುದು ಮತ್ತು ಧ್ಯಾನ ಮಾಡುವಂತಹ ಮನಸ್ಸನ್ನು ವಿಶ್ರಾಂತಿ ಮಾಡುವ ಕೆಲಸಗಳನ್ನು ಮಾಡಿ.
ವ್ಯಾಯಾಮ ಮಾಡದೇ ಇರುವುದು:ದೈಹಿಕ ಚಟುವಟಿಕೆಯು ನಿಮಗೆ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಆದ್ದರಿಂದ ಬೆಳಗ್ಗೆ ಬೇಗನೆ ವ್ಯಾಯಾಮ ಮಾಡುವುದು ಒಳ್ಳೆಯದು. ಹೊರಾಂಗಣದಲ್ಲಿ ವಾಕಿಂಗ್ ಮಾಡುವುದು, ಓಡುವುದು ಹಾಗೂ ಸೈಕ್ಲಿಂಗ್ ಮಾಡುವುದು ತಾಜಾ ಗಾಳಿಯಲ್ಲಿ ಮನಸ್ಸು ಮತ್ತು ದೇಹವನ್ನು ಚೈತನ್ಯಗೊಳಿಸುತ್ತದೆ. ರಾತ್ರಿಯಲ್ಲಿ ಉತ್ತಮ ನಿದ್ರೆ ಮಾಡಲು ಸಾಧ್ಯವಾಗುತ್ತದೆ. ವ್ಯಾಯಾಮ ಮಾಡದೇ ಇದ್ದರೆ ನಿದ್ರಾಹೀನತೆ ಸಮಸ್ಯೆ ಕಾಡುತ್ತದೆ.
ನಿಗದಿತ ಸಮಯಕ್ಕೆ ಮಲಗುವುದಿಲ್ಲ:ಪಾಳಿಯಲ್ಲಿ ಕೆಲಸ ಮಾಡುವವರಲ್ಲಿ ಹಾಗೂ ರಾತ್ರಿ ತಡವಾಗಿ ಮಲಗುವವರಲ್ಲಿ ನಿದ್ರೆಯ ಸಮಸ್ಯೆಗೆ ಮುಖ್ಯ ಕಾರಣವಾಗುತ್ತದೆ. ಅವರು ಸಾಕಷ್ಟು ನಿದ್ರೆ ಮಾಡುವುದಿಲ್ಲ. ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಹಾಗೂ ಏಳುವುದು ಬಹಳ ಮುಖ್ಯವಾಗಿ. ಇದು ನಿದ್ರೆಯ ಸಮಯವನ್ನು ಕ್ರಮಬದ್ಧಗೊಳಿಸುತ್ತದೆ. ಸಂಜೆ ವೇಳೆಯಲ್ಲಿ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ, ಒಂದು ಲೋಟ ಹಾಲು ಕುಡಿಯಿರಿ ಮತ್ತು ಮನೆಯಲ್ಲಿ ರಾತ್ರಿ ವಿದ್ಯುತ್ ದೀಪಗಳನ್ನು ಆಫ್ ಮಾಡಿ ಮಲಗಿದರೆ ಬೇಗನೆ ನಿದ್ರಿಸಲು ಸಾಧ್ಯವಿದೆ ಎಂದು ತಜ್ಞರು ತಿಳಿಸುತ್ತಾರೆ.
ತಡವಾಗಿ ಊಟ ಮಾಡುವುದು:ತಡರಾತ್ರಿ ಊಟ ಮಾಡವುದರಿಂದ ಹಾಗೂ ಜೀರ್ಣವಾಗದ ಆಹಾರವನ್ನು ಸೇವಿಸುವುದರಿಂದ ಹೃದಯ ಬಡಿತ ಹಾಗೂ ದೇಹದ ಉಷ್ಣತೆಯು ಹೆಚ್ಚಾಗುತ್ತದೆ. ಇವು ನಿದ್ರೆಗೆ ಭಂಗ ಉಂಟು ಮಾಡುತ್ತದೆ. ಹಾಗಾಗಿ ಮಲಗುವ ಮೂರು ಗಂಟೆ ಮೊದಲು ಊಟ ಮುಗಿಸಬೇಕು. ಕೊಬ್ಬಿನ ಆಹಾರಗಳ ಬದಲಿಗೆ ಸುಲಭವಾಗಿ ಜೀರ್ಣವಾಗುವಂತಹ ಆಹಾರ ಸೇವಿಸಿದರೆ ಒಳ್ಳೆಯದು ಎಂದು ತಜ್ಞರು ತಿಳಿಸುತ್ತಾರೆ.
ಹೆಚ್ಚು ಕಾಫಿ, ಚಹಾ ಸೇವನೆ:ಸಂಜೆ ಹೆಚ್ಚು ಕಾಫಿ, ಟೀ ಕುಡಿಯುವವರು ರಾತ್ರಿ ಮಲಗಲು ತುಂಬಾ ಕಷ್ಟಪಡುತ್ತಾರೆ. ಕೂಲ್ ಡ್ರಿಂಕ್ಸ್, ರೆಡ್ ವೈನ್, ಚಾಕಲೇಟ್, ಚೀಸ್ ಇತ್ಯಾದಿಗಳು ನಿದ್ರೆಗೆ ಸಹಾಯ ಮಾಡುತ್ತವೆ ಎಂದು ತಜ್ಞರು ಹೇಳುತ್ತಾರೆ.