ನವದೆಹಲಿ: ದೇಶದಲ್ಲಿ ಸ್ಥೂಲಕಾಯ, ಮಧುಮೇಹ ಮತ್ತು ಹೃದಯ ರಕ್ತನಾಳದಂತಹ ಸಾಂಕ್ರಾಮಿಕೇತರ ರೋಗದ ಅಪಾಯವು ಹೆಚ್ಚಳ ಕಾಣುತ್ತಿದೆ. ದೇಶದ ಆರೋಗ್ಯ ವ್ಯವಸ್ಥೆ ಮೇಲೆ ಹೊರೆಯಾಗುತ್ತಿರುವ ಇವುಗಳ ನಿಯಂತ್ರಣಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ಪೋಷಕಾಂಶ ಸಂಸ್ಥೆ 17 ಆಹಾರದ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಈ ಆಹಾರಗಳು ಪುರಾವೆ ಆಧಾರಿತ ಮತ್ತು ಜೀವನಶೈಲಿ ಬಂಧಿತ ಶಿಫಾರಸುಗಳನ್ನು ಒಳಗೊಂಡಿರುವ ಹೊಸ ಮಾರ್ಗಸೂಚಿ ಆಗಿದೆ. ಜೊತೆಗೆ ಕಠಿಣ ಶೈಕ್ಷಣಿಕ ಮತ್ತು ವೈಜ್ಞಾನಿಕ ಪರಿಶೀಲನೆಗೆ ಒಳಪಟ್ಟಿದೆ ಎಂದು ಸಂಸ್ಥೆ ತಿಳಿಸಿವೆ.
ಸಮತೋಲಿತ ಆಹಾರ ಸೇವನೆ:ತರಕಾರಿ, ಪೋಷಕಾಂಶ, ಸಮೃದ್ಧ ಪೋಷಕಾಂಶಯುಕ್ತ ಕಾಳುಗಳನ್ನು ಹೊಂದಿರುವ ಆಹಾರ ಸೇವಿಸಿ. ಸುರಕ್ಷಿತ, ಶುಚಿತ್ವ ಆಹಾರ ಸೇವನೆ ಜೊತೆಗೆ ಸಾಕಷ್ಟು ನೀರು ಸೇವನೆ ಕೂಡ ಅಗತ್ಯವಾಗಿದೆ.
ಈ ಆಹಾರ ಸೇವನೆ ಬೇಡ: ಬಾಡಿ ಮಾಸ್ ಅಭಿವೃದ್ಧಿಗೆ ಅನುಕೂಲಕರವಾಗುವ ಪ್ರೋಟಿನ್ ಪೂರಕ ಆಹಾರ ಸೇವನೆ ತಪ್ಪಿಸಿ. ಉಪ್ಪಿನ ಸೇವನೆ ಬಗ್ಗೆ ಕಡಿವಾಣ ಇರಲಿ. ಎಣ್ಣೆ ಮತ್ತು ಕೊಬ್ಬಿನ ಅಂಶಗಳು ಸುಧಾರಿತ ಪ್ರಮಾಣದಲ್ಲಿರಲಿ. ಅಲ್ಟ್ರಾ ಸಂಸ್ಕರಿಸಿದ ಆಹಾರಗಳನ್ನು ಕಡಿಮೆ ಮಾಡಿ. ಆಹಾರ ಕೊಳ್ಳುವ ಮುನ್ನ ಅದರ ಲೇಬಲ್ನ ಮಾಹಿತಿ ಗಮನಿಸುವ ಮೂಲಕ ಆರೋಗ್ಯಯುತ ಆಹಾರದ ಆಯ್ಕೆ ಮಾಡಿ.
ಕಳೆದೊಂದು ದಶಕದಿಂದ ಭಾರತೀಯ ಆಹಾರದ ಅಭ್ಯಾಸಗಳು ಗಮನಾರ್ಹ ಪ್ರಮಾಣವಾಗಿ ಬದಲಾಗಿದೆ. ಇದು ಪೋಷಕಾಂಶ ಕೊರತೆ ಸಮಸ್ಯೆ ಮತ್ತು ಸಾಂಕ್ರಾಮಿಕೇತರ ರೋಗದ ಅಪಾಯವನ್ನು ಹೆಚ್ಚಿಸುತ್ತಿದೆ ಎಂದು ಐಸಿಎಂಆರ್ನ ಪ್ರಧಾನ ನಿರ್ದೇಶಕ ರಾಜೀವ್ ಬಹ್ಲ್ ತಿಳಿಸಿದ್ದಾರೆ.
ಈ ಮಾರ್ಗಸೂಚಿಗಳನ್ನು ಭಾರತದಲ್ಲಿ ಬದಲಾಗುತ್ತಿರುವ ಆಹಾರ ಸನ್ನಿವೇಶಕ್ಕೆ ಪ್ರಸ್ತುತವಾಗಿ ಸಿದ್ಧಪಡಿಸಲಾಗಿದೆ. ಜನರು ಆಹಾರ ಸುರಕ್ಷತೆಯನ್ನು ನಿರ್ವಹಿಸುವುದು, ಕನಿಷ್ಠ ಸಂಸ್ಕರಿಸಿದ ಆಹಾರಗಳನ್ನು ಆರಿಸುವುದು, ಆಹಾರ ಲೇಬಲ್‌ಗಳ ಪ್ರಾಮುಖ್ಯತೆ ಮತ್ತು ದೈಹಿಕ ಚಟುವಟಿಕೆಯ ಕುರಿತು ಅರಿವು ಹೊಂದುವುದು ಅಗತ್ಯವಾಗಿದೆ.
ಈ ಆಹಾರದ ಮಾರ್ಗಸೂಚಿಗಳ ಮೂಲಕ ಎಲ್ಲಾ ರೀತಿಯ ಅಪೌಷ್ಠಿಕಾಂಶದ ಕುರಿತು ನಾವು ತಾತ್ವಿಕ, ಸುಸ್ಥಿರ ಮತ್ತು ದೀರ್ಘಕಾಲದ ಪರಿಹಾರವನ್ನು ನೀಡುತ್ತಿದ್ದೇವೆ. ಲಭ್ಯ ಮತ್ತು ಕೈಗೆಟುಕುವ ದರದ ವೈವಿಧ್ಯಮಯ ಆಹಾರಗಳ ಬಳಕೆಯನ್ನು ಉತ್ತೇಜಿಸುವಾಗ ಪೌಷ್ಟಿಕಾಂಶಭರಿತ ಆಹಾರಗಳನ್ನು ಉತ್ತೇಜಿಸುತ್ತಿದ್ದೇವೆ ಎಂದು ಐಸಿಎಂಆರ್-ಎನ್ಐಎನ್ ನಿರ್ದೇಶರಾದ ಹೇಮಲತಾ ಆರ್ ತಿಳಿಸಿದ್ದಾರೆ.
ಹೈದರಾಬಾದ್ ಮೂಲದ ಐಸಿಎಂಆರ್-ಎನ್ಐಎನ್ ಬದಲಾಗುತ್ತಿರುವ ಆಹಾರ ಪದ್ಧತಿ ಅನುಸಾರವಾಗಿ ಕಾಲಕಾಲಕ್ಕೆ ಭಾರತೀಯರಿಗೆ ಆಹಾರ ಮಾರ್ಗಸೂಚಿಗಳನ್ನು ಪರಿಷ್ಕರಿಸುತ್ತದೆ. ಭಾರತೀಯರಿಗೆ ಇತ್ತೀಚಿನ ಪೌಷ್ಟಿಕಾಂಶದ ಅವಶ್ಯಕತೆಗಳ ಕುರಿತ ವರದಿಯನ್ನು 2020 ರಲ್ಲಿ ಬಿಡುಗಡೆ ಮಾಡಿತ್ತು. (ಐಎಎನ್ಎಸ್)
ಇದನ್ನೂ ಓದಿ: ಡಯಟ್ನಿಂದಲೇ ಶೇ.56.4 ರಷ್ಟು ಜನರಿಗೆ ಅನಾರೋಗ್ಯ: ಭಯಾನಕ ಸತ್ಯ ಬಿಚ್ಚಿಟ್ಟ ಐಸಿಎಂಆರ್ ಅಧ್ಯಯನ