ನವದೆಹಲಿ: ಹವಾಮಾನ ಬದಲಾವಣೆಯ ಕುರಿತು ವಿಶ್ವಸಂಸ್ಥೆ ರೆಡ್ ಆಲರ್ಟ್ ನೀಡಿದೆ. ಜಾಗತಿಕ ತಾಪಮಾನ ಏರಿಕೆ ಆರೋಗ್ಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಸಲಾಗಿದೆ.
ವಿಶ್ವ ಹವಾಮಾನ ಸಂಸ್ಥೆಯ ಇತ್ತೀಚಿನ ವರದಿಯಲ್ಲಿ, 2023ರಲ್ಲಿ ಹಸಿರು ಮನೆ ಅನಿಲ, ಭೂ ಮೇಲ್ಮೈ ತಾಪಮಾನ, ಸಾಗರದ ಶಾಖ, ಸಮುದ್ರ ಮಟ್ಟ ಏರಿಕೆ, ಹಿಮ ಕರಗುವಿಕೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. 2023 ಈಗಾಗಲೇ ಅತ್ಯಂತ ಶಾಖದ ವರ್ಷವಾಗಿ ದಾಖಲಾಗಿದ್ದು, 2024 ಮತ್ತೊಂದು ದಾಖಲೆಯ ಶಾಖದ ವರ್ಷವಾಗುವ ಸಂಭವ ಜಾಸ್ತಿ ಎಂದು ವರದಿ ಹೇಳಿದೆ.
ಹವಾಮಾನದ ಬದಲಾವಣೆಯು ವಿಶೇಷವಾಗಿ ಶ್ವಾಸಕೋಶದ ಮೇಲೆ ವಿಪರೀತ ಪರಿಣಾಮ ಉಂಟು ಮಾಡಲಿದೆ. ಅಸ್ತಮಾ, ನ್ಯುಮೋನಿಯಾ, ಶ್ವಾಸಕೋಶದ ಕ್ಯಾನ್ಸರ್ನಂತಹ ಉಸಿರಾಟದ ಸಮಸ್ಯೆಗಳನ್ನು ಹೊಂದಿರುವ ಜನರ ಆರೋಗ್ಯ ಮತ್ತಷ್ಟು ಹದಗೆಡುತ್ತದೆ ಎಂದು ಗುರುಗ್ರಾಮದ ಸಿ.ಕೆ.ಬಿರ್ಲಾ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ ಕುಲ್ದೀಪ್ ಕುಮಾರ್ ಗ್ರೋವರ್ ತಿಳಿಸಿದ್ದಾರೆ.
ಕಡಿಮೆ ಅವಧಿಯ ಚಳಿಗಾಲ ಮತ್ತು ಬೇಸಿಗೆಯ ಶೀಘ್ರ ಆಗಮನ ವೈರಸ್ಗಳ ನಡವಳಿಕೆಗಳ ಮಾದರಿ ಮೇಲೆ ಪರಿಣಾಮ ಬೀರಲಿದ್ದು, ಇದು ಸೋಂಕಿನ ರೋಗದ ಉಲ್ಬಣಕ್ಕೆ ಕಾರಣವಾಗುತ್ತದೆ ಎಂಬುದನ್ನು ಗಮನಿಸಬೇಕಾಗಿದೆ ಎಂದರು.