ನವದೆಹಲಿ: ಕೋವಿಡ್ 19 ಸಾಂಕ್ರಾಮಿಕತೆ ವೇಳೆ ಲಾಕ್ ಡೌನ್ ಸಮಯದಲ್ಲಿ ಉಂಟಾದ ಆಹಾರ ಸಮಸ್ಯೆಯು ಮಕ್ಕಳಲ್ಲಿ ಅಪೌಷ್ಠಿಕಾಂಶ ಬೆಳವಣಿಗೆಗೆ ಕಾರಣವಾಗಿದ್ದು, ಅವರಲ್ಲಿ ತೂಕ ನಷ್ಟವಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ನವದೆಹಲಿಯ ಟಾಟಾ ಕೊರ್ನೆಲ್ ಫಾರ್ ಅಗ್ರಿಕಲ್ಚರ್ ಅಂಡ್ ನ್ಯೂಟ್ರಿಷಿಯನ್ (ಟಿಸಿಐ) ಕೋವಿಡ್ ಮುಂಚೆ ಮತ್ತು ಕೋವಿಡ್ ನಂತರದಲ್ಲಿ ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕಾಂಶತೆಗೆ ಸಂಬಂಧಿಸಿದಂತೆ ವಿಶ್ಲೇಷಣೆ ನಡೆಸಿದೆ.
ಈ ಅಧ್ಯಯನವನ್ನು ಜರ್ನಲ್ ಎಕಾನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ ಪ್ರಕಟಿಸಲಾಗಿದೆ. ಸಾಂಕ್ರಾಮಿಕ ಕಾಲದಲ್ಲಿ ಉಂಟಾದ ಪರಿಣಾಮದಿಂದ ಶೇ 14ರಷ್ಟು ಮಕ್ಕಳಲ್ಲಿ ತೂಕ ಕಡಿಮೆಯಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಆಹಾರ ಪೂರೈಕೆಯಲ್ಲಿ ಉಂಟಾದ ಅಡಚಣೆ, ಹಣದುಬ್ಬರ, ಉದ್ಯೋಗ ನಷ್ಟ ಮತ್ತು ಸರ್ಕಾರದ ಆಹಾರ ಸುರಕ್ಷತಾ ನಿವ್ವಳ ಕಾರ್ಯಕ್ರಮದ ಅಡಚಣೆ ಉಂಟಾಗಿದೆ.
ಈ ಹಿಂದೆ ಟಿಸಿಐ ಸಂಶೋಧನೆಯಲ್ಲಿ, ಕೋವಿಡ್ 19 ಪೂರೈಕೆ ಸರಪಳಿಯಲ್ಲಿ ಉಂಟಾದ ಅಡಚಣೆಯು ಆಹಾರ ಬೆಲೆ ಹೆಚ್ಚಳ ಮತ್ತು ಮಹಿಳೆಯರ ಆಹಾರದ ವೈವಿಧ್ಯತೆಯ ಕಳಪೆಗೆ ಕಾರಣವಾಗಿದೆ. ಸಂಶೋಧಕರು ದೀರ್ಘಕಾಲ ಅಂದಾಜಿಸಿದಂತೆ ಸಾಂಕ್ರಾಮಿಕ ಸಂಬಂಧಿತ ಅಡಚಣೆಯು ಭಾರತದಲ್ಲಿ ಆಹಾರ ವ್ಯವಸ್ಥೆ ಆರೋಗ್ಯ ವ್ಯವಸ್ಥೆ, ಪೌಷ್ಟಿಕಾಂಶ ಆಹಾರ, ವಿಶೇಷವಾಗಿ ಸರ್ಕಾರದ ಕಾರ್ಯಕ್ರಮಗಳ ಮೇಲೆ ಅವಲಂಬಿತವಾಗಿರುವ ಜನರ ಮೇಲೆ ಹೆಚ್ಚಿನ ಪರಿಣಾಮ ಹೊಂದಿದೆ ಎಂದು ಟಿಸಿಐ ನಿರ್ದೇಶಿಕ ಪ್ರಭು ಪಿಂಗಳಿ ತಿಳಿಸಿದ್ದಾರೆ.
ಮಕ್ಕಳ ಪೋಷಕಾಂಶ ಮತ್ತು ಅಭಿವೃದ್ಧಿ ಮೇಲೆ ಇದು ಹೆಚ್ಚಿನ ಹಾನಿ ಮಾಡಿದೆ ಎಂದು ಅಧ್ಯಯನ ತಿಳಿಸಿದೆ. ಈ ಅಧ್ಯಯನಕ್ಕೆ ಬಿಹಾರ ಮತ್ತು ಒಡಿಶಾದ 511 ಮನೆಗಳನ್ನು ಜೂನ್ 2017ರಿಂದ ಜುಲೈ 2021ರವರೆಗೆ ಸಮೀಕ್ಷೆಗೆ ಒಳಪಡಿಸಲಾಗಿದೆ.