ನವದೆಹಲಿ: ವೈದ್ಯರು ರೋಗಿಗಳಿಗೆ ಔಷಧಗಳನ್ನು ಸೂಚಿಸುವಾಗ, ಈ ಔಷಧಗಳಿಂದ ಆಗುವ ಅಡ್ಡ ಪರಿಣಾಮಗಳ ಕುರಿತು ವಿವರಣೆ ನೀಡುವ ಮತ್ತೊಂದು ಸ್ಲಿಪ್ ಅನ್ನು ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾ ಮಾಡಿದೆ.
ಅರ್ಜಿ ಕುರಿತು ಆದೇಶ ನೀಡಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ನೇತೃತ್ವದ ಪೀಠ, ಔಷಧ ತಯಾರಕರು ಸುಂಕ ವಿಧಿಸುವ ಆಯ್ಕೆಯನ್ನು ಶಾಸಕಾಂಗ ಹೊಂದಿದೆ. ಈಗಾಗಲೇ ಈ ಸಂಬಂಧ ಶಾಸಕಾಂಗ ಕೆಲವು ರಕ್ಷಣಾ ಕ್ರಮವನ್ನು ಹೊಂದಿದೆ. ಈ ಹಿನ್ನೆಲೆ ಈ ಕುರಿತು ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಅರ್ಜಿ ವಜಾಗೊಳಿಸಿದೆ.
ರೋಗಿಯು ಔಷಧಗಳ ತಿಳುವಳಿಕೆ ಪಡೆಯುವ ಆಯ್ಕೆಯ ಹಕ್ಕನ್ನು ಹೊಂದಿದ್ದಾನೆ. ಈ ಹಿನ್ನೆಲೆ ವೈದ್ಯರು ತಾವು ಶಿಫಾರಸು ಮಾಡಿದ ಔಷಧಿಗಳ ಅಡ್ಡಪರಿಣಾಮಗಳು ಮತ್ತು ಸಂಭವನೀಯ ಅಪಾಯಗಳನ್ನು ಕಡ್ಡಾಯವಾಗಿ ವಿವರಿಸಬೇಕು. ಈ ಸಂಬಂಧ ಮತ್ತೊಂದು ಸ್ಲಿಪ್ ಅನ್ನು ನೀಡುವಂತೆ ವೈದ್ಯರಿಗೆ ನ್ಯಾಯಾಲಯ ನಿರ್ದೇಶನ ನೀಡಬೇಕು.
ಇದರಿಂದ ವೈದ್ಯರು ಶಿಫಾರಸು ಮಾಡಿದ ಔಷಧಿಯ ಅಡ್ಡಪರಿಣಾಮಗಳ ಬಗ್ಗೆ ಅರಿವು ಪಡೆದ ಬಳಿಕ, ರೋಗಿಯು ಅದನ್ನು ಸೇವಿಸಬೇಕೇ ಅಥವಾ ಬೇಡವೇ ಎಂಬ ತಿಳುವಳಿಕೆಯುಕ್ತ ಆಯ್ಕೆ ಮಾಡಲು ಸಾಧ್ಯವಾಗುತ್ತದೆ ಎಂದು ಪಿಐಎಲ್ನಲ್ಲಿ ಮನವಿ ಮಾಡಲಾಗಿದೆ.
ಅರ್ಜಿ ವಿಚಾರಣೆ ನಡೆಸಿದ ಪೀಠ, ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್, 1945 ರ ಪ್ರಕಾರ, ಔಷಧಿ ತಯಾರಕರು ಅಥವಾ ಅವರ ಏಜೆಂಟ್ಗಳು ಔಷಧಿಗಳ ಅಡ್ಡ ಪರಿಣಾಮಗಳ ಕುರಿತ ವಿವರಗಳನ್ನು ಪ್ಯಾಕೇಜ್ ಮಾಹಿತಿಯಲ್ಲಿ ಒದಗಿಸುತ್ತಾರೆ. ಹೆಚ್ಚುವರಿಯಾಗಿ, ಫಾರ್ಮಸಿ ಪ್ರಾಕ್ಟೀಸ್ ರೆಗ್ಯುಲೇಷನ್ಸ್, 2015 ರ ಪ್ರಕಾರ ನೋಂದಾಯಿತ ಔಷಧಿಕಾರರು ಔಷಧಿಗಳ ಸಂಭವನೀಯ ಅಡ್ಡ ಪರಿಣಾಮಗಳ ಬಗ್ಗೆ ರೋಗಿಗಳಿಗೆ ತಿಳಿಸುತ್ತಾರೆ.
ತಯಾರಕರು ಮತ್ತು ಔಷಧಿಕಾರರ ಮೇಲೆ ರೋಗಿಗಳಿಗೆ ಔಷಧದ ಅಡ್ಡಪರಿಣಾಮಗಳ ಬಗ್ಗೆ ತಿಳಿಸುವ ಕರ್ತವ್ಯವನ್ನು ಶಾಸಕಾಂಗ ಹೊಂದಿರುವ ಹಿನ್ನೆಲೆ ನ್ಯಾಯಾಲಯವು ಈ ಸಂಬಂಧ ಹೆಚ್ಚಿನ ನಿರ್ದೇಶನಗಳನ್ನು ನೀಡುವ ಅಗತ್ಯವಿಲ್ಲ. ಹಾಗೆ ಮಾಡುವುದು ತನ್ನ ವ್ಯಾಪ್ತಿಯಲ್ಲಿಲ್ಲ. ಇದು ಶಾಸಕಾಂಗದ ಅತಿಕ್ರಮವಾಗುತ್ತದೆ. ಈ ಹಿನ್ನೆಲೆ ಈ ಅರ್ಜಿಯಲ್ಲಿ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ಎಚ್ಐವಿ ಸೋಂಕಿತ ತಾಯಂದಿರು ಮಗುವಿಗೆ ನೀಡಬಹುದು ಸ್ತನ್ಯಪಾನ; ಅಮೆರಿಕ ಮಕ್ಕಳ ತಜ್ಞರ ಗುಂಪಿನ ಶಿಫಾರಸು