ನವದೆಹಲಿ:ಭಾರತದಲ್ಲಿ ರಾತ್ರಿ ಸಮಯದಲ್ಲಿ ಕೂಡಾ ತಾಪಮಾನದಲ್ಲಿ ಬದಲಾವಣೆ ಕಾಣುತ್ತಿದ್ದು, ದೇಶ ತೀವ್ರತರನಾದ ಶಾಖದ ಅಲೆಯಿಂದ ಬಳಲುತ್ತಿದೆ ಎಂದು ಹೊಸ ಅಧ್ಯಯನವೊಂದು ವಿಶ್ಲೇಷಿಸಿದೆ. ವರ್ಷದಲ್ಲಿ 50 ರಿಂದ 80 ರಾತ್ರಿಗಳಲ್ಲಿ ತಾಪಮಾನ 25 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಾಗಿದ್ದು, ಇದು ನಿದ್ರೆ ಮತ್ತು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಹವಾಮಾನ ಬದಲಾವಣೆಯಿಂದಾಗಿ ರಾತ್ರಿ ಸಮಯವೂ ಬೆಚ್ಚಗಾಗುತ್ತಿದ್ದು, ಇದು ಭಾರತ ದೇಶ ಮಾತ್ರವಲ್ಲದೇ, ವಿಶ್ವದೆಲ್ಲೆಡೆ ಜನರ ನಿದ್ರೆ ಗುಣಮಟ್ಟದ ಮೇಲೆ ಪರಿಣಾಮ ಬೀರಲಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.
ಹವಾಮಾನ ಬದಲಾವಣೆಯಿಂದ ಭೂಮಿಯಲ್ಲಿ ರಾತ್ರಿ ಸಮಯದ ತಾಪಮಾನವೂ ಬೆಳಗಿನ ಹವಾಮಾನಕ್ಕಿಂತ ವೇಗವಾಗಿ ಬದಲಾವಣೆ ಆಗುತ್ತಿದೆ. ಇದಕ್ಕೆ ಪ್ರಮುಖ ಪ್ರಾಥಮಿಕ ಕಾರಣ ಕಲ್ಲಿದ್ಧಲು, ಎಣ್ಣೆ ಮತ್ತು ಅನಿಲದಂತಹ ಪಳೆಯುಳಿಕೆಯ ಇಂಧನವನ್ನು ಹೆಚ್ಚು ಹೆಚ್ಚು ಬಳಕೆ ಮಾಡುತ್ತಿರುವುದು ಮತ್ತು ಸುಡುತ್ತಿರುವುದು. ಹವಾಮಾನ ಬಿಕ್ಕಟ್ಟಿನ ದುರ್ಬಲ ಪರಿಣಾಮಕ್ಕೆ ಭಾರತ ಒಳಗಾಗುತ್ತಿದ್ದು, ದೇಶದಲ್ಲಿ ಕಳೆದೊಂದು ದಶಕದಿಂದ ರಾತ್ರಿ ತಾಪಮಾನದಲ್ಲಿ ಗಮನಾರ್ಹ ಏರಿಕೆ ಕಾಣುತ್ತಿದೆ.
ಕಳೆದ 12 ವರ್ಷದಲ್ಲಿ ಜೂನ್ 18ರ ರಾತ್ರಿ ನವದೆಹಲಿಯಲ್ಲಿ ಅತಿ ಹೆಚ್ಚಿನ ತಾಪಮಾನ ಅಂದರೆ 35.2 ಡಿಗ್ರಿಯಷ್ಟು ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 2018 ಮತ್ತು 2023 ರ ನಡುವೆ ಕೇರಳ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಮತ್ತು ಆಂಧ್ರಪ್ರದೇಶದ ಹಲವು ನಗರಗಳಲ್ಲಿ ಹವಾಮಾನ ಬದಲಾವಣೆಯಿಂದ ಪ್ರತಿ ವರ್ಷ ಸುಮಾರು 50 ರಿಂದ 80 ದಿನಗಳು ಮಿತಿ ಹೆಚ್ಚಿಸಿದೆ. ಅದರಲ್ಲೂ ಮೆಟ್ರೋ ನಗರಗಳು, ಮುಂಬೈನಲ್ಲಿ ಈ ಬಿಸಿ ರಾತ್ರಿ ಸಂಖ್ಯೆಗೆ ಮತ್ತೆ 65 ದಿನ ಸೇರ್ಪಡಯಾಗಿದೆ
ಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವ ಬಂಗಾಳ - ಅಸ್ಸಾಂ:ಇದರಲ್ಲಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಬಹಳ ಪರಿಣಾಮಕ್ಕೆ ಒಳಗಾಗಿವೆ. ಜಲ್ಪೈಗುರಿ, ಗುವಾಹಟಿ, ಸಿಲ್ಚಾರ್, ದಿಬ್ರುಗಢ್ ಮತ್ತು ಸಿಲಿಗುರಿಯಂತಹ ನಗರಗಳು ಹವಾಮಾನ ಬದಲಾವಣೆಯಿಂದಾಗಿ ರಾತ್ರಿ ತಾಪಮಾನ 25 ಡಿಗ್ರಿ ಮಿತಿಗಿಂತ ಹೆಚ್ಚಾಗಿದೆ, ಇಲ್ಲಿ ವರ್ಷಕ್ಕೆ 80 ರಿಂದ 86 ಹೆಚ್ಚುವರಿ ಬಿಸಿ ರಾತ್ರಿಗಳು ಜನರನ್ನು ಭಾದಿಸಿವೆ. ಅನೇಕ ನಗರಗಳು ಕೂಡ ಹವಾಮಾನ ಬದಲಾವಣೆಯಿಂದ 15 ರಿಂದ 50ರವರೆಗೆ ಹೆಚ್ಚುವರಿ ಬಿಸಿ ತಾಪಮಾನದ ರಾತ್ರಿಗಳನ್ನು ಅನುಭವಿಸುತ್ತಿದ್ದಾರೆ.