Symptoms of liver disease on the face: ಒತ್ತಡದ ಜೀವನಶೈಲಿಯಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಕಳಪೆ ಆಹಾರ ಪದ್ಧತಿ, ಬಿಡುವಿಲ್ಲದ ಜೀವನಶೈಲಿಯಿಂದ ಯಕೃತ್ತಿನ ಹಾನಿಯಾಗುವ ಸಮಸ್ಯೆಯು ಜನರಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಯಕೃತ್ತಿನ ಹಾನಿಯು ಯಾವುದೇ ವಯಸ್ಸಿನವರಲ್ಲಿ ಕಂಡುಬರುತ್ತದೆ. ಬೇಗ ಬೇಗ ಆಹಾರ ಸೇವನೆ ಮಾಡುವುದು, ಮಸಾಲೆಯುಕ್ತ ಆಹಾರ ತಿನ್ನುವುದು ಮತ್ತು ದೈಹಿಕ ವ್ಯಾಯಾಮ ಕಡಿಮೆ ಮಾಡುವುದು ಕೂಡ ಇದಕ್ಕೆ ದೊಡ್ಡ ಕಾರಣವಾಗಿದೆ. ಯಕೃತ್ತು ನಮ್ಮ ದೇಹದ ಒಂದು ಪ್ರಮುಖ ಭಾಗವಾಗಿದೆ. ಉತ್ತಮ ಕಾರ್ಯನಿರ್ವಹಣೆಗಾಗಿ ನಿಮ್ಮ ಯಕೃತ್ತು ಆರೋಗ್ಯಕರವಾಗಿರುವುದು ತುಂಬಾ ಅವಶ್ಯವಾಗಿದೆ. ಯಕೃತ್ತಿನ ಆರೋಗ್ಯವನ್ನು ಕಾಪಾಡುವುದು ಒಟ್ಟಾರೆ ಆರೋಗ್ಯ ಚೆನ್ನಾಗಿರಲು ಸಾಧ್ಯವಾಗುತ್ತದೆ.
ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದುಹಾಕಲು ಯಕೃತ್ತು ತುಂಬಾ ಮಹತ್ವದ ಅಂಗವಾಗಿದೆ. ಯಕೃತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ದೇಹದಲ್ಲಿ ಹಾರ್ಮೋನ್ ಸಮತೋಲನ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಯಕೃತ್ತು ಆರೋಗ್ಯಕರವಾಗಿರಲು, ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ಮುಖ್ಯ. ಯಕೃತ್ತು ಸರಿಯಾಗಿ ಇಲ್ಲದೆ ಒಬ್ಬ ವ್ಯಕ್ತಿಯು ದೀರ್ಘಕಾಲದವರೆಗೆ ಬದುಕಲು ಸಾಧ್ಯವಿಲ್ಲ ಎಂದು ವೈದ್ಯಕೀಯ ತಜ್ಞರು ತಿಳಿಸಿತ್ತಾರೆ.
ಯಕೃತ್ತು ಆರೋಗ್ಯಕರವಾಗಿಬೇಕಾದರೆ, ಆಹಾರ ಕ್ರಮದ ಬಗ್ಗೆ ವಿಶೇಷ ಕಾಳಜಿವಹಿಸಬೇಕಾಗುತ್ತದೆ. ಯಕೃತ್ತು ಆರೋಗ್ಯಕರವಾಗಿರಲು ಸಮತೋಲಿತ ಆಹಾರ ಸೇವಿಸಬೇಕು ಹಾಗೂ ಆಲ್ಕೊಹಾಲ್ ಸೇವನೆ ಮಾಡಬಾರದು. ಇಲ್ಲದೇ ಇದ್ದರೆ, ಯಕೃತ್ತಿನ ವೈಫಲ್ಯವು ಉಂಟಾಗುತ್ತದೆ. ಯಕೃತ್ತಿನ ಹಾನಿಯ ಹಲವು ರೋಗಲಕ್ಷಣಗಳು, ವೈದ್ಯರೊಂದಿಗೆ ಪರೀಕ್ಷೆ ಮಾಡಿಸದೇ ಪತ್ತೆ ಹಚ್ಚಲಾಗುವುದಿಲ್ಲ. ರೋಗಿಗೆ ಯಕೃತ್ತಿನ ಹಾನಿಯಿಂದಾಗಿ ಕೆಲವೊಮ್ಮೆ ಯಾವುದೇ ರೋಗಲಕ್ಷಣಗಳನ್ನು ಕಾಣಿಸುವುದಿಲ್ಲ. ಆದರೆ, ಕೆಲವು ಜನರ ಯಕೃತ್ತಿನಲ್ಲಿ ಸಮಸ್ಯೆಯಿದ್ದರೆ, ಮುಖ ಮತ್ತು ದೇಹದ ಮೇಲೆ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಆರಂಭಿಸುತ್ತವೆ.
ಮುಖ & ದೇಹದ ಮೇಲೆ ಕಾಣಿಸುವ ಚಿಹ್ನೆಗಳೇನು?: NIHನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಯಕೃತ್ತಿನಲ್ಲಿ ಸಮಸ್ಯೆಯಿದ್ದರೆ ಮುಖ ಅಥವಾ ದೇಹದ ಮೇಲೆ ರೋಗಲಕ್ಷಣಗಳನ್ನು ಕಾಣಿಸಿದರೆ, ಅವರು ತಕ್ಷಣವೇ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ. ಕಾಮಾಲೆ, ಆಯಾಸ, ದೌರ್ಬಲ್ಯ, ಹೊಟ್ಟೆ ನೋವು, ಊತ, ಹಸಿವು ಕಡಿಮೆಯಾಗುವುದು, ವಾಕರಿಕೆ, ಕಪ್ಪು ಅಥವಾ ಗಾಢ ಬಣ್ಣ ಮೂತ್ರದ ಲಕ್ಷಣಗಳು ಒಳಗೊಂಡಿರುತ್ತವೆ. ನೀವು ನಿರ್ದಿಷ್ಟವಾಗಿ ಈ ರೋಗಲಕ್ಷಣಗಳನ್ನು ಅನುಭವಿಸಿದರೆ, ತಕ್ಷಣವೇ ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಜ್ಞರು ತಿಳಿಸುತ್ತಾರೆ.
ಕಾಮಾಲೆ: ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವ ಸಾಮಾನ್ಯ ಲಕ್ಷಣವೇ ಕಾಮಾಲೆಯಾಗಿದೆ. ಮುಖದ ಮೇಲೆ ಮೊಡವೆಗಳು ಬೆಳೆಯುತ್ತವೆ. ಮುಖದ ಹೊಳಪು ಕೂಡ ಕಡಿಮೆಯಾಗುತ್ತದೆ. ಯಕೃತ್ತು ವಿಷಕಾರಿ ಅಂಶಗಳನ್ನು ಸರಿಯಾಗಿ ಹೊರಹಾಕಲು ಸಾಧ್ಯವಾಗದಿದ್ದಾಗ ಈ ಸಮಸ್ಯೆಯು ಸಂಭವಿಸುತ್ತದೆ.
ಚರ್ಮದ ತುರಿಕೆ ಹಾಗೂ ಆಲಸ್ಯ: ಯಕೃತ್ತಿನ ವೈಫಲ್ಯವು ಚರ್ಮದಲ್ಲಿ ತುರಿಕೆಗೆ ಕಾರಣವಾಗುತ್ತದೆ. ರಕ್ತದಲ್ಲಿ ಕಲ್ಮಶಗಳು ಸಂಗ್ರಹವಾಗುವುದರಿಂದ ತುರಿಕೆ ಸಮಸ್ಯೆ ಹೆಚ್ಚಾಗುತ್ತದೆ. ಯಾವಾಗಲೂ ನಿಸ್ತೇಜವಾಗಿರುವುದು ಹಾಗೂ ಯಕೃತ್ತಿನ ಸಮಸ್ಯೆಗಳಿಂದ ಬಳಲುತ್ತಿರುವ ಭಾವನೆ ಉಂಟಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ ನಂತರ, ಪಿತ್ತರಸದ ಕಂದು-ಹಳದಿ ವರ್ಣದ್ರವ್ಯ ಸರಿಯಾಗಿ ಬಿಡುಗಡೆಯಾಗುವುದಿಲ್ಲ. ದೇಹದಲ್ಲಿ ಇವುಗಳು ಹೆಚ್ಚುವುದರಿಂದ ಚರ್ಮ ಮತ್ತು ಕಣ್ಣುಗಳಿಗೆ ಹಾನಿಯಾಗಬಹುದು. ಇದನ್ನು ಜಾಂಡೀಸ್ ಎಂದೂ ಹೇಳುತ್ತಾರೆ.
ಚರ್ಮ, ಮುಖದ ಮೇಲಿನ ಕಲೆಗಳು: ಪಿತ್ತಜನಕಾಂಗದ ವೈಫಲ್ಯದಿಂದಾಗಿ, ಚರ್ಮದ ಮೇಲೆ ಬೆಳಿ ಹಾಗೂ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಲಿವರ್ ಸ್ಪಾಟ್ಸ್ ಎಂದು ಹೇಳಲಾಗುತ್ತದೆ.
ಕಪ್ಪು ಕಲೆಗಳು: ಯಕೃತ್ತಿನ ವೈಫಲ್ಯದಿಂದ ದೇಹದಲ್ಲಿ ಹಾರ್ಮೋನ್ ಬದಲಾವಣೆಗಳು ಆಗುತ್ತವೆ. ಇದು ಚರ್ಮದ ಬಣ್ಣದ ಮೇಲೆ ಪರಿಣಾಮ ಬೀರುತ್ತದೆ. ಕಪ್ಪು ಕಲೆಗಳು ಕಾಣಿಸಿಕೊಳ್ಳಲು ಆರಂಭಿಸುತ್ತವೆ.
ಚರ್ಮದ ಸಮಸ್ಯೆ: ಯಕೃತ್ತಿನ ಹಾನಿಯಿಂದ ಉಗುರುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಚರ್ಮವು ಒಣಗಬಹುದು ಅಥವಾ ಬಿರುಕು ಬಿಡಬಹುದು.
ಹೊಟ್ಟೆಯ ಊತ: ಯಕೃತ್ತಿನ ಸಮಸ್ಯೆಗಳಿಂದ ಹೊಟ್ಟೆ ಊತ ಸಂಭವಿಸಬಹುದು. ಇದನ್ನು ಅಸ್ಸೈಟ್ಸ್ ಎಂದು ಹೇಳಲಾಗುತ್ತದೆ. ಪಿತ್ತಜನಕಾಂಗದಲ್ಲಿ ಯಾವುದೇ ಸಮಸ್ಯೆಯಿದ್ದರೆ ನಿಮ್ಮನ್ನು ಅನೇಕ ರೋಗಗಳು ಕಾಡುತ್ತವೆ. ಲಿವರ್ ಸಿರೋಸಿಸ್, ಹೆಪಟೈಟಿಸ್, ಫ್ಯಾಟಿ ಲಿವರ್, ಲಿವರ್ ಕ್ಯಾನ್ಸರ್, ಲಿವರ್ ವೈಫಲ್ಯದಂತಹ ಹಲವು ಗಂಭೀರ ಕಾಯಿಲೆಗಳು ಬರುವ ಸಾಧ್ಯತೆಯಿರುತ್ತದೆ. ಕೆಲವು ಲಕ್ಷಣಗಳು ಕಂಡಬಂದರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ವೀಕ್ಷಿಸಬಹುದು:
- https://www.niddk.nih.gov/health-information/liver-disease/cirrhosis/symptoms-causes
- https://britishlivertrust.org.uk/information-and-support/liver-health-2/symptoms-of-liver-disease/
ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.