ಹೈದರಾಬಾದ್: ಆರೋಗ್ಯಯುತ ಜೀವನಶೈಲಿಗೆ ಸಮತೋಲಿತ ಆಹಾರ ಸೇವನೆ ಮತ್ತು ನೀರು ಕುಡಿಯುವುದು ಅತಿ ಅವಶ್ಯಕ. ಇಷ್ಟೇ ಪ್ರಮುಖವಾದ ಇನ್ನೊಂದು ಕೆಲಸ ಇದೆ. ಅದೆಂದರೆ ಮೂತ್ರ ವಿಸರ್ಜನೆ. ಅನೇಕ ಮಂದಿ ನೀರು ಕುಡಿಯಲು ಹಿಂಜರಿಕೆಗೆ ಕಾರಣ ಪದೇ ಪದೇ ಶೌಚಕ್ಕೆ ಒಳಗಾಗಬೇಕು ಎಂಬುದೇ ಆಗಿರುತ್ತದೆ. ಅತಿಯಾಗಿ ಮೂತ್ರ ವಿಸರ್ಜನೆಗೆ ಒಳಗಾಗುವುದು ಕೂಡ ಅನಾರೋಗ್ಯದ ಲಕ್ಷಣವಾಗಿದೆ. ಹಾಗಾದರೆ ಆರೋಗ್ಯವಂತ ವ್ಯಕ್ತಿ ದಿನಕ್ಕೆ ಎಷ್ಟು ಬಾರಿ ಮೂತ್ರ ವಿಸರ್ಜನೆ ಮಾಡಬೇಕು. ಯಾವಾಗ ಇದು ಸಮಸ್ಯೆಯಾಗುತ್ತದೆ ಎಂಬ ಮಾಹಿತಿ ಹೀಗಿದೆ.
ತಜ್ಞರ ಪ್ರಕಾರ, ಪದೇ ಪದೆ ಮೂತ್ರ ವಿಸರ್ಜನೆಗೆ ಒಳಗಾಗುವುದರ ಹಿಂದೆ ಅನೇಕ ಕಾರಣಗಳಿರುತ್ತವೆ. ಅದರಲ್ಲಿ ವಯಸ್ಸು, ಮಧುಮೇಹ ಮತ್ತು ಅತಿಯಾದ ನೀರು ಸೇವನೆ ಕೂಡ ಒಂದಾಗಿದೆ. ಜೊತೆಗೆ ಚಳಿ ಹೆಚ್ಚಿದಾಗ ಕೂಡ ಪದೇ ಪದೆ ಮೂತ್ರ ವಿಸರ್ಜನೆಗೆ ಒಳಗಾಗುವುದು ಸಹಜ. ಇದರ ಹೊರತಾಗಿ ಟೈಪ್ 1 ಮತ್ತು ಟೈಪ್ 2 ಮಧುಮೇಹಿಗಳು ಪದೇ ಪದೆ ಮೂತ್ರ ವಿಸರ್ಜನೆಗೆ ಒಳಗಾಗುವುದು ಕಾಣಬಹುದು.
ದಿನಕ್ಕೆ ಎಷ್ಟು ಬಾರಿ ಯೂರಿನೇಟ್ ಮಾಡಬೇಕು: ಆರೋಗ್ಯಯುತ ವ್ಯಕ್ತಿ ಹಾಗೂ ದಿನಕ್ಕೆ ಎರಡರಿಂದ ಮೂರು ಲೀಟರ್ ನೀರು ಕುಡಿಯುವವರು ದಿನದಲ್ಲಿ ಆರರಿಂದ ಏಳು ಬಾರಿ ಮೂತ್ರ ವಿಸರ್ಜನೆ ಮಾಡಬೇಕು. ಆದಾಗ್ಯೂ ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ದೈಹಿಕವಾಗಿ ಚಟುವಟಿಕೆಯಿಂದ ಇರುವ ವ್ಯಕ್ತಿ ಹೆಚ್ಚು ನೀರು ಸೇವಿಸಿದರೂ ಶೌಚಕ್ಕೆ ಹೋಗುವ ಸಮಯ ಕಡಿಮೆಯಾಗಬಹುದು. ಕಾರಣ ಬೆವರಿನ ಮೂಲಕ ನೀರು ನಷ್ಟ ಉಂಟಾಗುತ್ತದೆ. ಅಲ್ಲದೇ ಆರೋಗ್ಯಯುತ ವ್ಯಕ್ತಿ ದಿನಕ್ಕೆ 10 ಬಾರಿ ಕೂಡ ಹೋಗಬಹುದು. ಆದರೆ, ಗಂಟೆಗೆ ನಾಲ್ಕು ಸಲ ಶೌಚಾಲಯಕ್ಕೆ ಹೋಗುತ್ತಿದ್ದರೆ, ಕಾಳಜಿ ವಹಿಸಬೇಕಾಗುತ್ತದೆ. ಆಗ ನೀವು ಯಾವುದಾದರೂ ಸಮಸ್ಯೆಯಿಂದ ಬಳಲುತ್ತಿದ್ದೀರಾ ಎಂಬ ಬಗ್ಗೆ ಅರ್ಥೈಸಿಕೊಳ್ಳಬೇಕು.