''ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್'' ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. ಸಿನಿಪ್ರಿಯರು, ಅಭಿಮಾನಿಗಳು ಮಾತ್ರವಲ್ಲದೇ ಸಿನಿ ಗಣ್ಯರು ಸಹ ಈ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವನ್ನಿಟ್ಟುಕೊಂಡಿದ್ದಾರೆ. ನಟನಾಗಿ ಗುರುತಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಈ ಚಿತ್ರದ ಮೂಲಕ ನಿರ್ಮಾಪಕನಾಗಿಯೂ ಹೊರಹೊಮ್ಮಲಿದ್ದಾರೆ. ಯಶ್ ನಿರ್ಮಾಣದ ಚೊಚ್ಚಲ ಚಿತ್ರವನ್ನು ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸಲಿದ್ದಾರೆ. ಈ ಮೂಲಕ ಕೆಜಿಎಫ್ ಸ್ಟಾರ್ ಹೊಸ ಪ್ರಯಾಣವನ್ನು ಆರಂಭಿಸಿದ್ದಾರೆ.
ಬ್ಲಾಕ್ಬಸ್ಟರ್ ಚಿತ್ರ 'ಕೆಜಿಎಫ್'ನಲ್ಲಿ ರಾಕಿ ಭಾಯ್ ಪಾತ್ರಕ್ಕೆ ಹೆಸರುವಾಸಿಯಾಗಿರುವ ಯಶ್ ತಮ್ಮ ಅಮೋಘ ಅಭಿನಯದಿಂದ ಪ್ರೇಕ್ಷಕರನ್ನು ಆಕರ್ಷಿಸಿದ್ದು ಮಾತ್ರವಲ್ಲದೇ, ಕನ್ನಡ ಚಿತ್ರರಂಗದ ಶಕ್ತಿಯಾಗಿದ್ದಾರೆ. ವೆಂಕಟ್ ಕೆ. ನಾರಾಯಣ ಅವರ ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಯಶ್ (ನಿರ್ಮಾಪಕನಾಗಿ) ಕೈಜೋಡಿಸಿದ್ದು, ಈ ಬಹುನಿರೀಕ್ಷಿತ ಪ್ರಾಜೆಕ್ಟ್ ಮೂಲಕ ಕರ್ನಾಟಕ ಚಿತ್ರೋದ್ಯಮದ ಸಾಮರ್ಥ್ಯ ಪ್ರದರ್ಶಿಸಲು ಯಶ್ ಮುಂದಾಗಿದ್ದಾರೆ.
'ಟಾಕ್ಸಿಕ್' ಅನ್ನು ಕರ್ನಾಟಕದಲ್ಲೇ ಚಿತ್ರೀಕರಿಸುವ ನಿರ್ಧಾರ ಚಿತ್ರತಂಡದ್ದು. ಕೆಲ ಸೌಲಭ್ಯಗಳ ಕೊರತೆ ಕಾರಣ, ಕೆಲ ಸಿನಿಮಾಗಳ ಪ್ರಮುಖ ದೃಶ್ಯಗಳ ಶೂಟಿಂಗ್ ರಾಜ್ಯದ ಹೊರಗೆ ನಡೆಯುತ್ತವೆ. ಈ ಸವಾಲನ್ನು ಗಮನದಲ್ಲಿಟ್ಟುಕೊಂಡ ಯಶ್ ಮತ್ತು ನಿರ್ಮಾಣ ತಂಡ ತಮ್ಮ ಈ ಕಥೆಯ ನಿರೂಪಣಾ ಶೈಲಿಯಲ್ಲಿ ಕೆಲ ಬದಲಾವಣೆ ತರಲು ನಿರ್ಧರಿಸಿದೆ. ಶೂಟಿಂಗ್ ಪ್ರಕ್ರಿಯೆ ಎದುರಿಸುವ ಸವಾಲುಗನ್ನು ಜಯಿಸುವುದು ಮಾತ್ರವಲ್ಲದೇ ಸ್ಥಳೀಯ ಪ್ರತಿಭೆಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಚಿತ್ರತಂಡದವರು ಹೊಂದಿದ್ದಾರೆ.
"ನಾವು ಈಗಾಗಲೇ ಬೃಹತ್ ಸೆಟ್‌ಗಳನ್ನು ನಿರ್ಮಿಸಿದ್ದೇವೆ. ಗ್ರೌಂಡ್ ಲೆವೆಲ್ನಲ್ಲಿರುವ ಜನಸಾಮಾನ್ಯರು, ತಂತ್ರಜ್ಞರು ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ಅನೇಕ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಿದ್ದೇವೆ. ನಾವು ಜಾಗತಿಕ ಮಟ್ಟದ ಚಿತ್ರವನ್ನು ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ" ಎಂದು ನಿರ್ಮಾಪಕರು ದೃಢಪಡಿಸಿದ್ದಾರೆ.