ಶ್ರೀನಗರ (ಜಮ್ಮು- ಕಾಶ್ಮೀರ) : ಇಲ್ಲಿನ ಸೋಪೋರ್ನಲ್ಲಿ ನಡೆಯುತ್ತಿರುವ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.
ಸೋಪೋರ್ ಪೊಲೀಸ್ ಜಿಲ್ಲೆಯ ಜಲೂರಾ ಗುಜ್ಜರ್ಪತಿಯಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ತಿಳಿದ ಭದ್ರತಾ ಪಡೆಗಳು ದಾಳಿ ನಡೆಸಿದ್ದರು. ಈ ವೇಳೆ ಭಯೋತ್ಪಾದಕರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಯೋಧ ಪಂಗಾಲ ಕಾರ್ತಿಕ್ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ರವಾನಿಸುತ್ತಿದ್ದಾಗ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.
ರಾತ್ರಿಯಿಡೀ ಕಾರ್ಯಾಚರಣೆ : ಜಲೂರಾ ಗುಜ್ಜರ್ಪತಿಯಲ್ಲಿ ಉಗ್ರರು ಅಡಗಿದ್ದಾರೆ ಎಂದು ಭಾನುವಾರ ಮಾಹಿತಿ ಲಭ್ಯವಾಗಿತ್ತು. ಉಗ್ರರ ಅಡಗುತಾಣವನ್ನು ಭೇದಿಸುವಾಗ ಗುಂಡಿನ ಚಕಮಕಿ ನಡೆಯಿತು. ಉಗ್ರರು ತಪ್ಪಿಸಿಕೊಳ್ಳದಂತೆ ರಾತ್ರಿಯಡೀ ಕಣ್ಗಾವಲು ಹಾಕಲಾಗಿತ್ತು. ಸೋಮವಾರ ಬೆಳಗ್ಗೆ ಮತ್ತೆ ದಾಳಿ ನಡೆಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಈ ಬಗ್ಗೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಚಿನಾರ್ ಕಾರ್ಪ್ಸ್ ಆಫ್ ಆರ್ಮಿ, ಕರ್ತವ್ಯದ ವೇಳೆ ಪಂಗಾಲ ಕಾರ್ತಿಕ್ ಅವರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಚಿನಾರ್ ವಾರಿಯರ್ಸ್ ಅವರ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸುತ್ತದೆ. ದುಃಖಿತ ಕುಟುಂಬದೊಂದಿಗೆ ಸೇನೆ ಇರಲಿದೆ ಎಂದು ಬರೆದುಕೊಂಡಿದೆ.
ಮಹಿಳಾ ನಕ್ಸಲರ ಸಾವು, ಕಮಾಂಡೋಗೆ ಗಾಯ : ಇತ್ತ, ಛತ್ತೀಸ್‌ಗಢದಲ್ಲಿ ನಕ್ಸಲ್ ಕಾರ್ಯಾಚರಣೆ ಮತ್ತಷ್ಟು ತೀವ್ರವಾಗಿದ್ದು, ಇಂದು ಗರಿಯಾಬಂದ್ ಜಿಲ್ಲೆಯಲ್ಲಿ ನಡೆದ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಹಿಳಾ ನಕ್ಸಲರು ಸಾವನ್ನಪ್ಪಿದ್ದಾರೆ. ಸಿಆರ್‌ಪಿಎಫ್‌ನ ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆ್ಯಕ್ಷನ್‌ನ ಒಬ್ಬ ಸಿಬ್ಬಂದಿ ಗಾಯಗೊಂಡಿದ್ದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಛತ್ತೀಸ್‌ಗಢ-ಒಡಿಶಾ ಗಡಿಯಲ್ಲಿರುವ ಮೈನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸಿತು. ಗುಂಡಿನ ಚಕಮಕಿಯಲ್ಲಿ ಇಬ್ಬರು ಮಹಿಳಾ ನಕ್ಸಲರು ಹತರಾಗಿದ್ದಾರೆ. ಅವರ ಮೃತದೇಹಗಳು ಪತ್ತೆಯಾಗಿವೆ. ಗಾಯಗೊಂಡ ಕೋಬ್ರಾ ಕಮಾಂಡೋ ಒಬ್ಬರನ್ನು ಚಿಕಿತ್ಸೆಗಾಗಿ ರಾಯ್‌ಪುರಕ್ಕೆ ವಿಮಾನದ ಮೂಲಕ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಛತ್ತೀಸ್‌ಗಢದಲ್ಲಿ ಜನವರಿಯಿಂದ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಇದುವರೆಗೆ 28 ನಕ್ಸಲರು ಹತರಾಗಿದ್ದಾರೆ. ಜನವರಿ 16 ರಂದು ಬಿಜಾಪುರ ಜಿಲ್ಲೆಯಲ್ಲಿ ನಡೆದಿದ್ದ ದಾಳಿಯಲ್ಲಿ 18 ಮಂದಿ ಹತರಾಗಿದ್ದರು. 2024 ರಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಒಟ್ಟು 219 ನಕ್ಸಲರನ್ನು ಭದ್ರತಾ ಪಡೆಗಳು ತಟಸ್ಥಗೊಳಿಸಿವೆ ಎಂದು ಅಧಿಕಾರಿಗಳು ಅಂಕಿ ಅಂಶ ನೀಡಿದ್ದಾರೆ.
ಇದನ್ನೂ ಓದಿ: ಸೋಪೋರ್ನಲ್ಲಿ ಎನ್ಕೌಂಟರ್: ಇಬ್ಬರು ಭಯೋತ್ಪಾದಕರು ಸಿಲುಕಿರುವ ಸಾಧ್ಯತೆ