ಬೆಳಗಾವಿ: "ಮಂಗಳವಾರ ಬೆಳಗಾವಿಯಲ್ಲಿ ನಡೆಯಲಿರುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶಕ್ಕೆ ಎರಡು ಲಕ್ಷಕ್ಕೂ ಹೆಚ್ಚು ಜನ ಸೇರಲಿದ್ದು, ಯಶಸ್ವಿಯಾಗಿ ನೆರವೇರಲಿದೆ. ಇದೊಂದು ಐತಿಹಾಸಿಕ ಸಮಾವೇಶ ಆಗಲಿದೆ" ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸಮಾವೇಶ ನಡೆಯಲಿರುವ ಬೆಳಗಾವಿ ನಗರದ ಸಿಪಿಎಡ್ ಮೈದಾನ ಮೈದಾನದಲ್ಲಿ ಸಿದ್ಧತೆ ಪರಿಶೀಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ನಡೆಯಲಿದೆ. ಕಳೆದ ತಿಂಗಳು 27 ರಂದು ಈ ಸಮಾವೇಶ ನಡೆಯಬೇಕಿತ್ತು. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನದಿಂದ ರದ್ದಾಗಿತ್ತು. ಇದೀಗ ಸಮಾವೇಶ ನಡೆಯುತ್ತಿದೆ. ಮಹಾತ್ಮ ಗಾಂಧಿ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಇಂದು ಎಷ್ಟು ಪ್ರಸ್ತುತ ಎಂಬುದನ್ನು ಜನರಿಗೆ ತಿಳಿಸುವ ಉದ್ದೇಶ ನಮ್ಮದಾಗಿದೆ. ನಮ್ಮ ಸಂವಿಧಾನವನ್ನು ರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರಿಗೂ ಗೊತ್ತಾಗಬೇಕಿದೆ. ಸಂವಿಧಾನ ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಇಡೀ ಭಾರತೀಯರನ್ನು ರಕ್ಷಣೆ ಮಾಡುತ್ತದೆ" ಎಂದರು.
ಡಿಕೆಶಿ ಅಚ್ಚುಕಟ್ಟಾಗಿ ಸಿದ್ಧತೆ ಮಾಡಿದ್ದಾರೆ : "1924ರ ಡಿಸೆಂಬರ್ 26ರಂದು ಗಾಂಧೀಜಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಆ ಅಧಿವೇಶನ ನಡೆದು ಒಂದು ಶತಮಾನ ಆಗಿದೆ. ಅದರ ಪ್ರಯುಕ್ತ ಈ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ. ಸಮಾವೇಶದ ಸಿದ್ಧತೆಯನ್ನು ಡಿ.ಕೆ. ಶಿವಕುಮಾರ್ ಅಚ್ಚುಕಟ್ಟಾಗಿ ಮಾಡಿದ್ದಾರೆ. ನಾಲ್ಕೈದು ದಿನ ಇಲ್ಲಿಯೇ ಇದ್ದು ಡಿಕೆಶಿ ಮತ್ತು ಸುರ್ಜೇವಾಲ ಅವರು ಎಲ್ಲ ಸಿದ್ಧತೆ ನೋಡಿಕೊಂಡಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
"ನೂರು ವರ್ಷಗಳ ಹಿಂದೆ ನಡೆದ ಕಾಂಗ್ರೆಸ್ ಅಧಿವೇಶನದ ನೆನಪಿಗೋಸ್ಕರ ಶತಮಾನೋತ್ಸವ ಆಚರಿಸುತ್ತಿದ್ದೇವೆ. ಹಾಗಾಗಿ, ಸಮಾವೇಶದಲ್ಲಿ ಯಾವುದೇ ವಿಶೇಷ ಕೊಡುಗೆ ಘೋಷಣೆ ಮಾಡಲ್ಲ. ಇಲ್ಲಿ ಆಚರಣೆ ಮಾಡುತ್ತಿರುವುದೇ ದೊಡ್ಡ ಕೊಡುಗೆ" ಎಂದು ಸಿದ್ದರಾಮಯ್ಯ ಹೇಳಿದರು.
"ಅಂಬೇಡ್ಕರ್ಗೆ ಅಪಮಾನ ಮಾಡಿದ ಕಾಂಗ್ರೆಸ್ ಅವರ ಹೆಸರಿನಲ್ಲಿ ಸಮಾವೇಶ ಮಾಡುವುದಕ್ಕೆ ಯಾವುದೇ ಹಕ್ಕಿಲ್ಲ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಪಾಪ ಪ್ರಲ್ಹಾದ್ ಜೋಶಿ ಅವರಿಗೆ ಇತಿಹಾಸ ಗೊತ್ತಿಲ್ಲ. ಸಂವಿಧಾನ ಜಾರಿಯಾದ ಸಂದರ್ಭದಲ್ಲಿ ಗೋಳವಾಲ್ಕರ್ ಮತ್ತು ಸಾವರ್ಕರ್ ಏನು ಮಾತಾಡಿದ್ದರು ಅಂತಾ ಅವರಿಗೆ ಗೊತ್ತಿಲ್ಲ. ಇದು ಅವರಿಗೂ ಗೊತ್ತಿಲ್ಲ, ನಿಮಗೂ ಗೊತ್ತಿಲ್ಲ. ಹಾಗಾಗಿ, ಗಾಂಧೀಜಿ ಪ್ರತಿಮೆ ಅನಾವರಣ ಸರ್ಕಾರಿ ಕಾರ್ಯಕ್ರಮ. ಸಮಾವೇಶವನ್ನು ಪಕ್ಷದಿಂದ ಮಾಡುತ್ತಿದ್ದೇವೆ" ಎಂದು ತಿರುಗೇಟು ಕೊಟ್ಟರು.
ಗೋಡ್ಸೆ ಹತ್ಯೆಯಲ್ಲಿ ನೆಹರು ಪಾತ್ರವಿದೆ ಎಂಬ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, "ಇತಿಹಾಸ ಯತ್ನಾಳ್ಗೂ ಗೊತ್ತಿಲ್ಲ, ನಿಮಗೂ ಗೊತ್ತಿಲ್ಲ. ಯತ್ನಾಳ್ ಇತಿಹಾಸವನ್ನ ಓದಿಕೊಂಡಿಲ್ಲ. ಅಂಬೇಡ್ಕರ್ ಏನೂ ಹೇಳಿದ್ದಾರೆ ಗೊತ್ತಾ. ಇತಿಹಾಸ ಗೊತ್ತಿಲ್ಲದವರು ಭವಿಷ್ಯ ರೂಪಿಸಲು ಆಗುವುದಿಲ್ಲ ಅಂತಾ ಹೇಳಿದ್ದಾರೆ. ಗೋಡ್ಸೆ ಮಹಾತ್ಮ ಗಾಂಧಿ ಹತ್ಯೆ ಮಾಡಿದ್ದು, ಅವರೊಂದಿಗೆ ಯಾರಿದ್ದರು ಗೊತ್ತಾ ನಿಮಗೆ. ಸಾವರ್ಕರ್ ಮೇಲೆ ಕೇಸ್ ಇದ್ದಿದ್ದು ಗೊತ್ತಾ ನಿಮಗೆ" ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಮಂಗಳವಾರ ಗಾಂಧೀಜಿ ಪ್ರತಿಮೆ ಉದ್ಘಾಟನೆ; ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮಕ್ಕೆ ಭರದ ಸಿದ್ಧತೆ