ಖ್ಯಾತ ಕಿರುತೆರೆ ನಟ ಯೋಗೇಶ್ ಮಹಾಜನ್ ಜನವರಿ 19ರಂದು ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ. ಅವರು ತಮ್ಮ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಶಿವ್ ಶಕ್ತಿ ತಪ್ ತ್ಯಾಗ್ ತಾಂಡವ್ ಶೋನಲ್ಲಿ ನಟಿಸುತ್ತಿದ್ದರು. ಆದ್ರೆ ಶೂಟಿಂಗ್ಗೆ ಬಾರದ ಹಿನ್ನೆಲೆ ಸಹೋದ್ಯೋಗಿಗಳು ಆತಂಕಗೊಂಡರು. ನಂತರ ಅವರ ಮನೆಗೆ ಹೋಗಿ ನೋಡಿದಾಗ, ನಟ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅವರನ್ನು ಆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.
ನಂತರ ಅವರ ಕುಟುಂಬವು ನಟನ ನಿಧನದ ಸುದ್ದಿಯನ್ನು ದೃಢಪಡಿಸಿತು. ಅವರ ಸಹನಟಿ ಆಕಾಂಗ್ಶಾ ರಾವತ್, ನಟನ ನಿಧನಕ್ಕೆ ಸಂತಾಪ ಸೂಚಿಸಿದರು. ನಟ ಯೋಗೇಶ್ ಮಹಾಜನ್ ಅವರು ಉತ್ಸಾಹಿ, ಬುದ್ಧಿವಂತ ಮತ್ತು ಮೋಜಿನ ವ್ಯಕ್ತಿ ಎಂದು ಸ್ಮರಿಸಿದರು. ಈ ಸಾವು ಇಡೀ ತಂಡಕ್ಕೆ ಶಾಕ್ ನೀಡಿದೆ. ಎಲ್ಲರೂ 1 ವರ್ಷದಿಂದ ಅವರೊಂದಿಗೆ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ಉಗ್ರಂ ಮಂಜು - ರಜತ್ ಕಿಶನ್ ಬಿಗ್ ಫೈಟ್; ಅವಾಚ್ಯ ಪದ ಬಳಕೆ
ಮನರಂಜನಾ ಕ್ಷೇತ್ರದಲ್ಲಿ ಯೋಗೇಶ್ ಮಹಾಜನ್ ತಮ್ಮ ನೀಲಿ ಕಣ್ಣಿನಿಂದ ಹೆಚ್ಚಿನವರ ಗಮನ ಸೆಳೆದಿದ್ದರು. ಮುಂಬೈಚೆ ಶಹಾನೆ ಮತ್ತು ಸಂಸಾರಚಿ ಮಾಯಾ ಸೇರಿದಂತೆ ಮರಾಠಿ ಚಲನಚಿತ್ರಗಳಲ್ಲಿನ ತಮ್ಮ ಪಾತ್ರಗಳಿಂದಾಗಿ ಸಾಕಷ್ಟು ಜನಪ್ರಿಯರಾಗಿದ್ದರು. ಧಾರಾವಾಹಿಗಳು ಮತ್ತು ಚಲನಚಿತ್ರಗಳಿಂದಾಗಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದರು. ತಾರೆಯ ನಿಧನ ಚಿತ್ರರಂಗದ ಜೊತೆಗೆ ಅಭಿಮಾನಿ ಬಳಗಕ್ಕೆ ಆಘಾತ ನೀಡಿದೆ.
ಇದನ್ನೂ ಓದಿ: 'ಬಿಗ್ ಬಾಸ್ ಹಿಂದಿ 18'ರ ಟ್ರೋಫಿ ಗೆದ್ದುಕೊಂಡ ಕರಣ್ ವೀರ್ ಮೆಹ್ರಾ: ವಿವಿಯನ್ ಡಿಸೆನಾ ರನ್ನರ್ ಅಪ್
ನಟನ ಅಂತ್ಯಕ್ರಿಯೆ ಇಂದು ಮುಂಬೈನ ಬೋರಿವಲಿಯ ಪ್ರಗತಿ ಪ್ರೌಢಶಾಲೆ ಬಳಿಯ ಗೋರಾರಿ -2 ಸ್ಮಶಾನದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಯೋಗೇಶ್ ಮಹಾಜನ್ ಪತ್ನಿ ಮತ್ತು ಏಳು ವರ್ಷದ ಮಗನನ್ನು ಅಗಲಿದ್ದಾರೆ.