ಹುಬ್ಬಳ್ಳಿ (ಧಾರವಾಡ): ಹುಬ್ಬಳ್ಳಿಯ ಸ್ವಾತಂತ್ರ್ಯ ಹೋರಾಟಗಾರ, ಹುತಾತ್ಮ ನಾರಾಯಣ ಡೋಣಿ ಜೀವನಾಧಾರಿತ ಚಿತ್ರ 'ಸ್ವರಾಜ್ಯ' ಬಿಡುಗಡೆಗೆ ಸಜ್ಜಾಗಿದೆ. ವಿ.ವೈ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಚಿತ್ರದ ಧ್ವನಿಸುರುಳಿ ಹಾಗೂ ಟ್ರೇಲರ್ ಅನ್ನು ಮಾಜಿ ಡಿಸಿಎಂ ಹಾಲಿ ಸಂಸದ ಗೋವಿಂದ ಕಾರಜೋಳ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಹುಬ್ಬಳ್ಳಿಯ ಜಿಮಖಾನ್ ಕ್ಲಬ್ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಧ್ವನಿಸುರುಳಿ ಹಾಗೂ ಟ್ರೇಲರ್ ಬಿಡುಗಡೆ ಮಾಡಿದ ಗೋವಿಂದ ಕಾರಜೋಳ ಅವರು ಚಿತ್ರತಂಡಕ್ಕೆ ಶುಭ ಕೋರಿದರು. ಹುಬ್ಬಳ್ಳಿಯ ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ಮಹಾದೇವ ಡೋಣಿ ಅವರ ಜೀವನಗಾಥೆಯನ್ನು ತೆರೆಮೇಲೆ ತರುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ. ಡೋಣಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿ ಹುಬ್ಬಳ್ಳಿ ದುರ್ಗದ ಬೈಲಿನಲ್ಲಿ ಹುತಾತ್ಮರಾದರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರ ತಾಯಿ ಗಂಗಮ್ಮ ಅವರು ಬರೆದಿರುವ ಪುಸ್ತಕದಲ್ಲಿನ ಸಣ್ಣ ಕಥೆಯನ್ನು ಆಧರಿಸಿ ಹಾಗೂ 4ನೇ ತರಗತಿಯ ಗದ್ಯಭಾಗ ಹುತಾತ್ಮ ಬಾಲಕ ಕಥೆಯನ್ನು ಆಧರಿಸಿ ಈ ಚಿತ್ರ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಕಮರ್ಷಿಯಲ್ ಚಿತ್ರ ಮಾಡುವವರ ನಡುವೆ ಒಂದು ಉತ್ತಮ ಆದರ್ಶ ಹಾಗೂ ದೇಶ ಸೇವೆಯ ಚಿತ್ರ ಮಾಡಿದ್ದು, ಬಹಳ ಖುಷಿ ತಂದಿದೆ. ಈ ಚಿತ್ರ ಹುಬ್ಬಳ್ಳಿಯ ಕಥೆಯನ್ನು ಆಧರಿಸಿದರೂ ಕೂಡ ಸಂಪೂರ್ಣವಾಗಿ ನನ್ನ ಕ್ಷೇತ್ರದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು.