ಕನ್ನಡ ಚಿತ್ರರಂಗದ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ನಿರ್ಮಾಣದ ಮುಂದಿನ ಬಹುನಿರೀಕ್ಷಿತ ಚಿತ್ರ 'ವಿದ್ಯಾಪತಿ'. ಸಿನಿಮಾ ಅಭಿಮಾನಿಗಳಲ್ಲಿ ಕುತೂಹಲ, ನಿರೀಕ್ಷೆ ಹೆಚ್ಚಿಸಿದೆ. ಟೀಸರ್, ಮೇಕಿಂಗ್ನಿಂದಲೇ ಗಮನ ಸೆಳೆದಿರುವ ಚಿತ್ರದ ಮೊದಲ ಹಾಡು ಅನಾವರಣಗೊಂಡಿದೆ.
ಕರಾಟೆ ತರಗತಿಯಲ್ಲಿ ವಿದ್ಯಾಪತಿಯ ತಲೆಹರಟೆಯ ಹಾಡಿಗೆ ಚಂದನವನದ ನವರಸನಾಯಕ ಜಗ್ಗೇಶ್ ಧ್ವನಿಯಾಗಿದ್ದಾರೆ. ಅಯ್ಯೋ ವಿಧಿಯೇ ಎಂದು ಶುರುವಾಗುವ ಹಾಡಿಗೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ ಒದಗಿಸಿದ್ದು, ಡಾಸ್ಮೋಡ್ ಸಂಗೀತ ನೀಡಿದ್ದಾರೆ. ಸಖತ್ ಫನ್ ಆಗಿ ಮೂಡಿ ಬಂದಿರುವ ಗೀತೆಯಲ್ಲಿ ರಂಗಾಯಣ ರಘು ಅವರೂ ಕೂಡಾ ಹೆಜ್ಜೆ ಹಾಕಿರುವುದು ವಿಶೇಷ.
ಟಗರು ಪಲ್ಯ ಸಿನಿಮಾ ಮೂಲಕ ಮಸ್ತ್ ಮನರಂಜನೆ ನೀಡಿದ್ದ ನಟ ನಾಗಭೂಷಣ್ ಈ ಚಿತ್ರದಲ್ಲಿಯೂ ನಾಯಕ ನಟನಾಗಿ ನಟಿಸಿದ್ದು, ಉಪಾಧ್ಯಕ್ಷನ ಬೆಡಗಿ ಮಲೈಕಾ ವಸೂಪಾಲ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಕರಾಟೆ ಕಿಂಗ್ ಗೆಟಪ್ನಲ್ಲಿ ನಾಗಭೂಷಣ್ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ಮಾಸ್ಟರ್ ಆಗಿ ಹಿರಿಯ ನಟ ರಂಗಾಯಣ ರಘು ಅಭಿನಯಿಸಿದ್ದಾರೆ.
ಈ ಹಿಂದೆ ಇಕ್ಕಟ್ ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ''ವಿದ್ಯಾಪತಿ'' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ, ಸಿನಿಮಾವನ್ನು ಇವರೇ ಬರೆದು, ಸಂಕಲನದ ಜವಾಬ್ದಾರಿಯನ್ನೂ ತಾವೇ ಹೊತ್ತುಕೊಂಡಿದ್ದಾರೆ. ಚಿತ್ರಕ್ಕೆ ಲವಿತ್ ಅವರ ಛಾಯಾಗ್ರಹಣ ಇದೆ. ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ಅವರ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯರ ಸಾಹಿತ್ಯ ಮತ್ತು ಅರ್ಜುನ್ ಮಾಸ್ಟರ್ ಅವರ ಆ್ಯಕ್ಷನ್ 'ವಿದ್ಯಾಪತಿ' ಸಿನಿಮಾಗಿದೆ. ಟಗರು ಪಲ್ಯ ಸಿನಿಮಾ ನಿರ್ಮಾಣ ಮಾಡಿದ್ದ ಡಾಲಿ ಧನಂಜಯ್ ಇದೀಗ 'ವಿದ್ಯಾಪತಿ' ಪ್ರೊಡ್ಯೂಸ್ ಮಾಡುತ್ತಿದ್ದು, ಚಿತ್ರದಲ್ಲಿ ಆ್ಯಕ್ಷನ್ ಜೊತೆಗೆ ಹಾಸ್ಯವೂ ಇರಲಿದೆ.
ಇದನ್ನೂ ಓದಿ: ವಿಡಿಯೋ: ಮೊದಲ ಬಾರಿ ಮಗುವಿನೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ
2023ರಲ್ಲಿ ಟಗರು ಪಲ್ಯ ಸಿನಿಮಾ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಿತ್ತು. ಹೊಸ ಹೊಸ ಕಲಾವಿದರು, ನಿರ್ದೇಶಕರಿಗೆ ಅವಕಾಶ ಮಾಡಿಕೊಡುವ ನಟ ಧನಂಜಯ್ ಅವರ ಡಾಲಿ ಪಿಕ್ಚರ್ಸ್ನ ಮತ್ತೊಂದು ಕೊಡುಗೆಯೇ 'ವಿದ್ಯಾಪತಿ'. ಡಾಲಿ ಪಿಕ್ಚರ್ಸ್ನ ನಾಲ್ಕನೇ ಚಿತ್ರ ಇದಾಗಿದ್ದು, ನಾಗಭೂಷಣ್ ಅವರಿಗಿದು ನಾಯಕ ನಟನಾಗಿ ಎರಡನೇ ಸಿನಿಮಾ. ಸದಭಿರುಚಿ ಸಿನಿಮಾಗಳನ್ನು ಮನರಂಜನಾ ಕ್ಷೇತ್ರಕ್ಕೆ ಕೊಡುವ ಮೂಲಕ ಹೆಸರುವಾಸಿಯಾಗಿರುವ ನಟ - ನಿರ್ಮಾಪಕ ಧನಂಜಯ್ ಅವರ ಡಾಲಿ ಪಿಕ್ಚರ್ಸ್ನ ವಿದ್ಯಾಪತಿ ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದೆ ಅನ್ನೋದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆಎಲ್ ರಾಹುಲ್ - ಅಥಿಯಾ ಶೆಟ್ಟಿ