ನವದೆಹಲಿ: ವಿವಾಹ ಮಹೋತ್ಸವಗಳ ಸರಣಿ ಆರಂಭವಾಗಿದೆ. ಸ್ಥಳೀಯ ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳ ಬಳಿ ಖರೀದಿ ಭರಾಟೆ ಆರಂಭವಾಗಿದೆ. ಕಳೆದೆರಡು ದಿನಗಳಿಂದ ಕುಸಿತದ ಹಾದಿ ಹಿಡಿದಿದ್ದ ಬಂಗಾರದ ಬೆಲೆಯಲ್ಲಿ ಶುಕ್ರವಾರ 500 ರೂದಷ್ಟು ಏರಿಕೆ ಆಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪರಿಶುದ್ಧ 24 ಕ್ಯಾರೆಟ್ ಬಂಗಾರಕ್ಕೆ 80,000 ರೂ.ಗಳ ಗಡಿಯಲ್ಲಿ ಮಾರಾಟವಾಗುತ್ತಿದೆ.
ನವದೆಹಲಿಯಲ್ಲಿ ಹಳದಿ ಲೋಹದ ಬೆಲೆ: 99.9 ರಷ್ಟು ಶುದ್ಧತೆಯ ಬೆಲೆಬಾಳುವ ಲೋಹವು ಗುರುವಾರ 10 ಗ್ರಾಂಗೆ 79,500 ರೂಗೆ ವಹಿವಾಟು ನಡೆಸಿತು. ಬೆಳ್ಳಿ ಕೂಡ ಪ್ರತಿ ಕೆಜಿಗೆ ನಿನ್ನೆ ದರ 93,800 ರೂ.ಗೆ ಹೋಲಿಸಿದರೆ, ಇಂದು 800 ರೂ. ಏರಿಕೆ ಕಂಡು 94,600 ರೂ.ದಲ್ಲಿ ವ್ಯವಹಾರ ನಡೆಸಿತು.
ಇನ್ನು 99.5 ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ 500 ರೂ. ಏರಿಕೆ ಕಂಡು 79,600ಕ್ಕೆ ಜಿಗಿತ ಕಂಡಿತು. ಗುರುವಾರ 10 ಗ್ರಾಂಗೆ 79,100 ರೂ. ದರ ಇತ್ತು.
ಬೆಂಗಳೂರಿನಲ್ಲಿ ಎಷ್ಟಿದೆ ಬಂಗಾರದ ಬೆಲೆ: ಸಿಲಿಕಾನ್ ಸಿಟಿಯಲ್ಲಿ ನಿನ್ನೆ 22 ಕ್ಯಾರೆಟ್ನ 10 ಗ್ರಾಂನ ಬಂಗಾರದ ಬೆಲೆ 72 ಸಾವಿರ ಇತ್ತು. ಅದು ಇಂದು 850 ರೂ ಏರಿಕೆ ಕಂಡು 72850 ರೂಗೆ ಏರಿಕೆ ಕಂಡಿದೆ.
ಅದೇ ರೀತಿ 24 ಕ್ಯಾರೆಟ್ ಬಂಗಾರ ಬೆಲೆ 910 ರೂ ಏರಿಕೆ ಕಂಡಿದೆ. ನಿನ್ನೆ 78560 ರೂಗೆ ಮಾರಾಟ ವಾಗುತ್ತಿದ್ದ ಹಳದಿ ಲೋಹ ಇಂದು 910 ರೂ ಏರಿಕೆ ದಾಖಲಿಸಿ 79,470 ರೂಗೆ ವಹಿವಾಟು ನಡೆಸಿತು.
ಮಾರುಕಟ್ಟೆ ತಜ್ಞರು ಹೇಳುವುದಿಷ್ಟು: ಮದುವೆ ಸೀಸನ್‌ಗೆ ಸ್ಥಳೀಯ ಆಭರಣ ವ್ಯಾಪಾರದಿಂದ ಬೇಡಿಕೆ ಹೆಚ್ಚಾಗಿರುವುದರಿಂದ ಈ ಏರಿಕೆ ಅಂತಾರೆ ವ್ಯಾಪಾರಿಗಳು. ಅದಲ್ಲದೇ ಅಮೆರಿಕದ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿದಿದ್ದರಿಂದ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆ ಹೆಚ್ಚಳ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಗಾರ ಮತ್ತೆ ಏರಿಕೆಯತ್ತ ಸಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್ (MCX)ನ ಭವಿಷ್ಯದ ವಹಿವಾಟಿನಲ್ಲಿ ಡಿಸೆಂಬರ್ ವಿತರಣೆಗಾಗಿ ಚಿನ್ನದ ಒಪ್ಪಂದಗಳು ರೂ 198 ಅಥವಾ ಶೇಕಡಾ 0.26 ರಷ್ಟು ಕುಸಿದು 10 ಗ್ರಾಂಗೆ ರೂ 77,213 ಕ್ಕೆ ವ್ಯವಹಾರ ನಡೆಸಿದವು.
ಸರಕುಗಳ ತಜ್ಞರ ಪ್ರಕಾರ, ಶುಕ್ರವಾರದಂದು ಅಮೆರಿಕ ಡಾಲರ್‌ನಲ್ಲಿನ ಬಲವರ್ಧನೆಯಿಂದಾಗಿ ಚಿನ್ನದ ಬೆಲೆ USD 2,700 ಮಟ್ಟಕ್ಕಿಂತ ಕಡಿಮೆಯಾಗಿದೆ. ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಅಡಿ ಬರುವ ಆರ್ಥಿಕ ನೀತಿಗಳು, ಆರ್ಥಿಕ ಬೆಳವಣಿಗೆ ಮತ್ತು ಹಣದುಬ್ಬರವನ್ನು ಹೆಚ್ಚಿಸಬಹುದು ಎಂಬ ಹೂಡಿಕೆದಾರರ ನಿರೀಕ್ಷೆಗಳಿಂದ ಬಂಗಾರದ ಮಾರುಕಟ್ಟೆ ಉತ್ತೇಜಿತವಾಗಿದೆ.
ಅಮೆರಿಕ ಕೇಂದ್ರ ಬ್ಯಾಂಕ್ನ ಪ್ರಭಾವ: ಗುರುವಾರ ಅಮೆರಿಕ ಫೆಡ್ ಬಡ್ಡಿದರ ಕಡಿತವನ್ನು ಘೋಷಿಸಿದೆ. ನಿರೀಕ್ಷಿತ 25 ಬೇಸಿಸ್ ಪಾಯಿಂಟ್ ಬಡ್ಡಿದರವನ್ನು ಇಳಿಕೆ ಮಾಡಿದೆ. ಇದು ಚಿನ್ನದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ, ಏಕೆಂದರೆ ಕಡಿಮೆ ಬಡ್ಡಿದರದ ವಾತಾವರಣವು ಹಳದಿ ಲೋಹದ ಖರೀದಿಯನ್ನು ಹೆಚ್ಚಿಸುತ್ತದೆ.
FOMC ಸಭೆಯಲ್ಲಿ ಫೆಡ್ ಚೇರ್ಮನ್ ಜೆರೋಮ್ ಪೊವೆಲ್ ಅವರು ಹೆಚ್ಚಿನ ಸುಂಕಗಳು, ತೆರಿಗೆ ಕಡಿತಗಳು ಮತ್ತು ವಲಸೆ ಬದಲಾವಣೆಗಳಂತಹ ನೀತಿಗಳ ಹೊರತಾಗಿಯೂ ಚುನಾವಣಾ ಫಲಿತಾಂಶವು, ಬ್ಯಾಂಕ್ನ ನೀತಿಯಲ್ಲಿ ಯಾವುದೇ ಬದಲಾವಣೆ ತರುವುದಿಲ್ಲ ಎಂದು ಹೇಳಿದರು.
ಚಿನ್ನದ ಮಾರುಕಟ್ಟೆ ದೃಷ್ಟಿಕೋನದ ಕುರಿತು ಅಬಾನ್ಸ್ ಹೋಲ್ಡಿಂಗ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಿಂತನ್ ಮೆಹ್ತಾ ಅವರು ಮಾತನಾಡಿದ್ದು, ಚಿನ್ನದ ಬೆಲೆಗಳು ತಮ್ಮ ಪ್ರಸ್ತುತ ಮಟ್ಟದಿಂದ ಮತ್ತಷ್ಟು ಏರಿಕೆಯಾಗುತ್ತವೆ ಹೇಳಿದ್ದಾರೆ.
ಆದಾಗ್ಯೂ, ಹೆಚ್ಚುವರಿ ಬಡ್ಡಿದರ ಕಡಿತದಲ್ಲಿನ ವಿಳಂಬದ ಸಾಧ್ಯತೆಯು ಹತ್ತಿರದ ಅವಧಿಯಲ್ಲಿ ಬೆಲೆಗಳನ್ನು ತಗ್ಗಿಸಬಹುದು. ಆದರೂ ಅಂತಹ ಕುಸಿತಗಳು ಚಿನ್ನದ ಸಂಗ್ರಹ ಮಾಡುವ ಅವಕಾಶವನ್ನು ನೀಡಬಹುದು ಎಂದು ಮೆಹ್ತಾ ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ: ಅಮೆರಿಕದಲ್ಲಿ ಹಣದುಬ್ಬರ ಇಳಿಕೆ: 25 ಬೇಸಿಸ್ ಪಾಯಿಂಟ್ ಬಡ್ಡಿದರ ಕಡಿತಗೊಳಿಸಿದ ಫೆಡ್ ರಿಸರ್ವ್