ಬಳ್ಳಾರಿ : ಕಾಂಗ್ರೆಸ್ ಮುಳುಗುತ್ತಿರೋ ಹಡಗು. ಸಿಎಂ ಅವರ ಚೇರ್ ಯಾವಾಗ ಖಾಲಿಯಾಗುತ್ತೋ ಗೊತ್ತಿಲ್ಲ. ಬಂಗಾರು ಹನುಮಂತು ಅವರಿಗೆ ಮತ ನೀಡಿ. ಮೋದಿ ಅವರ ಗುರುತು, ಬಂಗಾರು ಹನುಮಂತು ಅವರ ಗುರುತು, ಬಿಜೆಪಿ ಗುರುತು ಕಮಲ, ಈ ಗುರುತಿಗೆ ನಿಮ್ಮ ಮತ ನೀಡಿ ಎಂದು ಬಿಜೆಪಿ ಹಿರಿಯ ಮುಖಂಡ ಬಿ. ಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಸಂಡೂರು ಬಿಜೆಪಿ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ನವರು ಹಣ, ಹೆಂಡ, ಅಧಿಕಾರ, ತೋಳ್ಬಲದಿಂದ ಅಧಿಕಾರ ಪಡೆಯಲು ಪ್ರಯತ್ನ ಮಾಡ್ತಿದ್ದಾರೆ. ಯಡಿಯೂರಪ್ಪ ಜನಪರ ಕೆಲಸ ಮಾಡಿದ್ದಾರೆ. ಸಂಡೂರಿನಲ್ಲಿ ಇನಾಮ್ ಜಮೀನು ಸರಿ ಮಾಡೋ ಕೆಲಸ ಮಾಡುತ್ತೇವೆ. ಬಂಗಾರು ಹನುಮಂತು ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.
ಸಂಡೂರು ತಾಲೂಕಿನ ಬೊಮ್ಮಘಟ್ಟ, ಚೋರನೂರು ಗ್ರಾಮದಲ್ಲಿ ಅವರು ಅಬ್ಬರದ ಪ್ರಚಾರ ನಡೆಸಿದರು. ಈ ವೇಳೆ ಗಾಲಿ ಜನಾರ್ದನ ರೆಡ್ಡಿ, ಛಲವಾದಿ ನಾರಾಯಣ ಸ್ವಾಮಿ, ರೇಣುಕಾಚಾರ್ಯ ಸಾಥ್ ನೀಡಿದರು.
ಮೋದಿಯವರ ವರ್ಚಸ್ಸು ನಮಗೆ ಅನುಕೂಲವಾಗಲಿದೆ: ಮೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಚಾರ ಮಾಡ್ತಿದ್ದೇನೆ. ಸಂಡೂರಿನಲ್ಲಿ ನಿರೀಕ್ಷೆ ಮೀರಿ ಬೆಂಬಲ ಸಿಗ್ತಿದೆ. ಜನಾರ್ದನ ರೆಡ್ಡಿ- ಶ್ರೀರಾಮುಲು ಜೋಡಿ ಅಭ್ಯರ್ಥಿಗೆ ಹೆಚ್ಚು ಶಕ್ತಿ ನೀಡಿದೆ. ಮೂರು ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ, ನಾಳೆಯೂ ನಾನು ಇಲ್ಲೇ ಇರ್ತಿನಿ. ಮೋದಿ ಅವರ ವರ್ಚಸ್ಸು ನಮಗೆ ಅನುಕೂಲವಾಗಲಿದೆ ಎಂದಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಅವರ ಮೇಲೆ FIR ಆಗಿದೆ, ಆಗಲಿ ಬಿಡಿ ಎದುರಿಸೋಣ ಎಂದರು. ಸಿಎಂ ಸೇರಿ, ಕ್ಯಾಬಿನೆಟ್ ಇಲ್ಲೇ ಇದೆ ಎಂಬ ವಿಚಾರವಾಗಿ ಮಾತನಾಡಿ, ಅದನ್ನು ನೀವೇ ಅರ್ಥ ಮಾಡಿಕೊಳ್ಳಿ, ಮುಡಾ ಹಗರಣದಲ್ಲಿ ಸಿಲುಕಿ ಒದ್ದಾಡ್ತಿದ್ದಾರೆ. 15-20 ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರೆ. ಮುಡಾ ಹಗರಣ ಆರೋಪ ಸಾಬಿತಾಗುತ್ತದೆ ಎಂದು ED, CBI ಮೇಲೆ ಸಿಎಂ ಸಿದ್ದರಾಮಯ್ಯ ಅಪಪ್ರಚಾರ ಮಾಡ್ತಿದ್ದಾರೆ ಎಂದು ಆರೋಪಿಸಿದರು.
CBI ಎಫ್ಐಆರ್ ಮಾಡಬೇಕು, ಲೋಕಾಯುಕ್ತ ತನಿಖೆ ಮೇಲೆ ನಂಬಿಕೆ ಇಲ್ಲ. ವಕ್ಪ್ ಬೋರ್ಡ್ ವಿಚಾರದಲ್ಲಿ ಜಂಟಿ ಸದನ ಸಮಿತಿ ತನ್ನ ಕೆಲಸ ಮಾಡ್ತಿದೆ. ವಕ್ಫ್, ಮುಡಾ ವಿಚಾರದಲ್ಲಿ ಅವರ ಆರೋಪ ಸಾಬೀತಾಗುತ್ತದೆ, ಅವರಿಗೆ ಭಯ ಶುರುವಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಕೊಡುಗೆ ಏನೂ ಇಲ್ಲ : ಈ ರಾಜ್ಯದ ದುರ್ದೈವ, ಸಿಎಂ ಸಿದ್ದರಾಮಯ್ಯ ಬಂದು ಇಲ್ಲಿ ಪ್ರಚಾರ ಮಾಡ್ತಾರೆ. ಕಳೆದ ಬಾರಿ 5 ವರ್ಷ ಸಿಎಂ ಆಗಿದ್ರು, ಈಗ ಒಂದೂವರೇ ವರ್ಷ ಸಿಎಂ ಆಗಿದ್ದಾರೆ. ಸಂಡೂರು ವಿಧಾನ ಸಭೆ ಕ್ಷೇತ್ರ, ಬಳ್ಳಾರಿಗೆ ಅವರ ಕೊಡುಗೆ ಏನೂ ಇಲ್ಲ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.
ಈ ಹಿಂದೆ ಅಖಂಡ ಬಳ್ಳಾರಿ ಜಿಲ್ಲೆ ಅಭಿವೃದ್ಧಿ ಮಾಡಿದ್ದು ಬಿಜೆಪಿ ಮತ್ತು ಜನಾರ್ದನ ರೆಡ್ಡಿ. ಬಳ್ಳಾರಿ ನಗರ ಮುಂಚೆ ಹೇಗಿತ್ತು?. ನಂತರ ಹೇಗಾಯ್ತು?. ಸಂಡೂರು ಕ್ಷೇತ್ರದಲ್ಲಿ ಉತ್ತಮ ರಸ್ತೆಗಳು ಮಾಡಿದ್ದೀವಿ. 250 ಕೋಟಿ ವೆಚ್ಚದಲ್ಲಿ ಮಾಡಿದ್ದು ಬಿಜೆಪಿ. ಅಭಿವೃದ್ಧಿ ಬಗ್ಗೆ ಮಾತನಾಡೋ ಮಾತೇ ಇಲ್ಲ. ಜನಾರ್ದನ ರೆಡ್ಡಿ ಬಗ್ಗೆನೇ ಸಿಎಂ ಮಾತನಾಡ್ತಿದ್ದಾರೆ. ರಾಮಾಯಣ, ಮಹಾಭಾರತದಲ್ಲಿ 14 ವರ್ಷ ಅನ್ನೋದು ಮಹತ್ವವಿದೆ. ನಾನು 14 ವರ್ಷಗಳ ಬಳಿಕ ನನ್ನ ತವರೂರಿಗೆ ಬಂದಿದ್ದೇನೆ ಎಂದರು.
ಒಂದು ಕೋಮಿನ ತುಷ್ಟಿಕರಣ ಮಾಡುತ್ತಿದೆ: ಲ್ಯಾಂಡ್ ಜಿಹಾದ್ ಮೂಲಕ ಕಾಂಗ್ರೆಸ್ ಸರ್ಕಾರ ಒಂದು ಕೋಮಿನ ತುಷ್ಟಿಕರಣ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.
ತೋರಣಗಲ್‌ನಲ್ಲಿ ಖಾಸಗಿ ಹೋಟೆಲ್‌ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಹಿಂದಿನ ಮಠ ಮಾನ್ಯಗಳ, ರೈತರು ಉಳುಮೆ ಮಾಡುತ್ತಿರುವ ಜಮೀನುಗಳನ್ನು ವಕ್ಫ್ ಹೆಸರಿಗೆ ಮಾಡಿ ಮುಸ್ಮಿಂ ಸಮುದಾಯದ ಒಲೈಕೆ ಮಾಡುತ್ತಿದೆ. ಹಿಂದೂಗಳ ವಿರೋಧಿ ಆಗಿರುವ ಸಿದ್ದರಾಮಯ್ಯ ಸರ್ಕಾರ ರೈತರ ಬದುಕನ್ನು ಬೀದಿಗೆ ತರುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ಮೂರು ಕಡೆ ಉಪ ಚುನಾವಣೆ ನಡೆಯುತ್ತಿದೆ. ಶಿಗ್ಗಾಂವಿ ಓಡಾಡಿದ್ದೆ, ನಿನ್ನೆಯಿಂದ ಸಂಡೂರು ಪ್ರಚಾರ ಮಾಡ್ತಾ ಇದ್ದೇನೆ. ಮೂರು ಕಡೆ ಎನ್‌ಡಿಎಗೆ ವಿಜಯ ಸಿಗಲಿದೆ. ಎರಡು ರಾಜ್ಯದಲ್ಲಿಯೂ ಬಿಜೆಪಿ ಗೆಲ್ಲಲಿದೆ. ಹಿಂದೆ ಸಚಿವನಾಗಿ ಜಾರ್ಖಂಡ್ ಜತೆ ನಿಕಟ ಸಂಪರ್ಕವಿದೆ. ಮಹಾರಾಷ್ಟ್ರ, ಜಾರ್ಖಂಡ್ ಎರಡೂ ಕಡೆ ಅಭೂತಪೂರ್ವ ಜಯ ಸಿಗಲಿದೆ ಎಂದರು.
ಇದನ್ನೂ ಓದಿ : ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು: ಯಡಿಯೂರಪ್ಪ