ಅಯೋಧ್ಯೆ, ಉತ್ತರಪ್ರದೇಶ:ಅಯೋಧ್ಯೆಯಲ್ಲಿ ಹೊಸ ಅಪೋಲೋ ಆಸ್ಪತ್ರೆಯನ್ನು ಉದ್ಘಾಟಿಸಲಾಗಿದೆ. ಆಸ್ಪತ್ರೆಯನ್ನು ಅಪೋಲೋ ಗ್ರೂಪ್ ಸಂಸ್ಥಾಪಕ ಪ್ರತಾಪ್ ಸಿ. ರೆಡ್ಡಿ ಅವರ ಮೊಮ್ಮಗಳು ಮತ್ತು ಟಾಲಿವುಡ್ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕಾಮಿನೇನಿ ಕೊನಿಡೇಲಾ ಉದ್ಘಾಟಿಸಿದರು. ಇದೇ ವೇಳೆ ಉಪಾಸನಾ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದಾರೆ. ಉಪಾಸನಾ ಅವರು ಈ ವಿಶೇಷ ಸಭೆಯ ಒಂದು ನೋಟವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ಸೋಮವಾರ ಉಪಾಸನಾ ಕಾಮಿನೇನಿ ಕೊನಿಡೇಲಾ ಅವರು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಆಸ್ಪತ್ರೆಯ ಉದ್ಘಾಟನೆಯ ಕರಪತ್ರವನ್ನು ನೀಡಿದರು. ಈ ಪ್ರದೇಶದಲ್ಲಿ ಉನ್ನತ ಮಟ್ಟದ ವೈದ್ಯಕೀಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಅಯೋಧ್ಯೆಯಲ್ಲಿ ಅಪೋಲೋ ಆಸ್ಪತ್ರೆಯನ್ನು ಆರಂಭಿಸಿರುವುದಕ್ಕೆ ಸಿಎಂ ಸಂತಸ ವ್ಯಕ್ತಪಡಿಸಿದ್ದು, ಉಪಾಸನಾ ಮತ್ತು ಪ್ರತಾಪ್ ಸಿ.ರೆಡ್ಡಿ ಅವರನ್ನು ಅಭಿನಂದಿಸಿದ್ದಾರೆ.
ಉಪಾಸನಾ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಇತರರೊಂದಿಗೆ ತಮ್ಮ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು ಶೀರ್ಷಿಕೆಯಲ್ಲಿ ಆಸ್ಪತ್ರೆಯ ಬಗ್ಗೆ ಮಾಹಿತಿ ನೀಡುವ ದೀರ್ಘ ಟಿಪ್ಪಣಿಯನ್ನು ಬರೆದಿದ್ದಾರೆ. ರಾಮ್ ಲಲ್ಲಾ ಆಶೀರ್ವಾದದೊಂದಿಗೆ ಅಪೋಲೋ ಫೌಂಡೇಶನ್ ಅಯೋಧ್ಯೆಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸೇವೆಗಾಗಿ ಉಚಿತ ತುರ್ತು ನಿಗಾ ಕೇಂದ್ರವನ್ನು ಉದ್ಘಾಟಿಸಲು ಸಂತೋಷವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.