ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ತಮ್ಮ ಅಭಿಮಾನಿಗಳು, ಚಿತ್ರತಂಡ, ಸಿನಿಗಣ್ಯರು ಮಾತ್ರವಲ್ಲದೇ ಬಹುಭಾಷಾ ಸೆಲೆಬ್ರಿಟಿಗಳೊಟ್ಟಿಗೂ ಆತ್ಮೀಯ ಸಂಬಂಧ ಹೊಂದಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ತೆಲುಗು ಮತ್ತು ತಮಿಳು ಚಿತ್ರರಂಗದ ಹೆಸರಾಂತರು ಬೆಂಗಳೂರಿಗೆ ಬಂದಾಗ ಒಮ್ಮೆ ನಟ ಶಿವರಾಜ್ಕುಮಾರ್ ಅವರ ನಿವಾಸಕ್ಕೆ ಭೇಟಿ ಕೊಡುತ್ತಾರೆ. ಅದರಂತೆ ಇತ್ತೀಚೆಗೆ ಟಾಲಿವುಡ್ ನ್ಯಾಚುರಲ್ ಸ್ಟಾರ್ ನಾನಿ ಅವರು ಶಿವಣ್ಣನನ್ನು ಭೇಟಿಯಾಗಿದ್ದರು.
ತೆಲುಗಿನ ನಾನಿ ಅವರು ಹ್ಯಾಟ್ರಿಕ್ ಹೀರೋನ ಅಚ್ಚುಮೆಚ್ಚಿನ ಯೂತ್ ಸ್ಟಾರ್. ನಿನ್ನೆ ನಾನಿ ಅಭಿನಯದ 'ಸರಿಪೋದಾ ಶನಿವಾರಂ' ಸಿನಿಮಾ ಬಿಡುಗಡೆ ಆಗಿದೆ. 'Surya's ಸಾಟರ್ಡೆ' ಶೀರ್ಷಿಕೆಯಡಿ ಕನ್ನಡದಲ್ಲೂ ಈ ಚಿತ್ರ ತೆರೆಕಂಡಿದೆ.
ಸೂರ್ಯನ ಸಾಟರ್ಡೆ ಸಿನಿಮಾದ ಪ್ರಮೋಷನ್ಗಾಗಿ ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದಿದ್ದ ನಾನಿ ಅವರು ಇದೇ ಮೊದಲ ಬಾರಿಗೆ ಶಿವರಾಜ್ಕುಮಾರ್ ಅವರನ್ನು ಸಂದರ್ಶನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಶಿವಣ್ಣ ತಮ್ಮ ಭೈರತಿ ರಣಗಲ್ ಚಿತ್ರದ ಬಗ್ಗೆ ಮಾತನಾಡಿದ್ರೆ ನಾನಿ ತಮ್ಮ ಸೂರ್ಯನ ಸಾಟರ್ಡೆ ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.
ಶಿವಣ್ಣ ಮಾತನಾಡಿ, ''ನಾನಿ ಅಂದಾಕ್ಷಣ ನನಗೆ 'ಈಗ' ಸಿನಿಮಾ ನೆನಪಾಗುತ್ತದೆ. ನಾನಿ ನಟನೆ ಉತ್ತಮವಾಗಿದೆ. ಆ ಸಿನಿಮಾ ಅಲ್ಲದೇ ನಿಮ್ಮ ಎಲ್ಲಾ ಚಿತ್ರಗಳನ್ನು ವೀಕ್ಷಿಸಿದ್ದೇನೆ. ನಿಮ್ಮ ಬೆಳವಣಿಗೆ ನನಗೆ ಬಹಳ ಹಿಡಿಸಿದೆ ಎಂದು ಮೆಚ್ಚುಗೆ'' ವ್ಯಕ್ತಪಡಿಸಿದರು.
ನಾನಿ ಮಾತನಾಡಿ, ''ನೀವು ನಮ್ಮಂಥ ನಟರಿಗೆ ಸ್ಫೂರ್ತಿ. ಹಾಗಾಗಿಯೇ ನೀವು ಈ ವಯಸ್ಸಿನಲ್ಲೂ 10ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡುತ್ತಿರೋದು'' ಎಂದು ಶ್ಲಾಘಿಸಿದರು.
ಮಾತು ಮುಂದುವರಿಸಿದ ಶಿವಣ್ಣ, ''ಅವಕಾಶಗಳು, ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಬೇಸರ ಮಾಡಬಾರದು ಎಂಬ ಕಾರಣಕ್ಕೆ ನಾನು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತೇನೆ. ಹಾಗೇ ಒಳ್ಳೆ ಕಥೆಗಳ ಸಿನಿಮಾ ಮಾಡುತ್ತೇನೆ'' ಎಂದು ತಿಳಿಸಿದರು.
ಬಳಿಕ ಮಾತನಾಡಿದ ನಾನಿ, ಕಳೆದ ಬಾರಿ ಹಾಯ್ ನಾನ್ನ ಸಿನಿಮಾವನ್ನು ನೀವು ಮಾಲ್ನಲ್ಲಿ ವೀಕ್ಷಿಸಿದ ಫೋಟೋಗಳನ್ನು ನೋಡಿದ್ದೀನಿ ಎಂದು ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸೆಂಚುರಿ ಸ್ಟಾರ್, ನಾನಿ ಸೆಲೆಕ್ಟ್ ಮಾಡುವ ಕಥೆಗಳು ಅದ್ಭುತವಾಗಿರುತ್ತವೆ. ಅದಕ್ಕೆ ನಿಮ್ಮನ್ನು ಪಕ್ಕಾ ಫ್ಯಾಮಿಲಿ ಹೀರೋ ಅನ್ನೋದೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಾನಿ ರಿಯಾಕ್ಟ್ ಮಾಡಿ, ಒಬ್ಬ ನಟ ಫ್ಯಾಮಿಲಿ ಹೀರೋ ಎಂದು ಕರೆಸಿಕೊಳ್ಳೋದು ತುಂಬಾನೇ ಕಷ್ಟ. ಅದಕ್ಕೆ ನಾನು ಆ್ಯಕ್ಷನ್ ಜೊತೆಗೆ ಕುಟುಂಬಸ್ಥರು ಒಟ್ಟಿಗೆ ಕುಳಿತು ನೋಡುವ ಕಥೆಗಳನ್ನು ಮಾಡುತ್ತಿದ್ದೇನೆ. 'ದಸರಾ' ಸಿನಿಮಾ ಆ್ಯಕ್ಷನ್ ಆದ್ರೆ, 'ಸೂರ್ಯನ ಸಾಟರ್ಡೆ' ಬೇರೆ ಜಾನರ್ನ ಸಿನಿಮಾವೆಂದು ತಿಳಿಸಿದರು. ಜೊತೆಗೆ, ನಿಮ್ಮನ್ನು ಸೈಮಾ ಅವಾರ್ಡ್ ಪ್ರೋಗ್ರಾಂನಲ್ಲಿ ಮೀಟ್ ಮಾಡಿದ್ದೆ. ಅಂದಿನಿಂದ ಇಲ್ಲಿವರೆಗೂ ನಿಮ್ಮನ್ನು ಭೇಟಿಯಾಗೋದು, ಉತ್ತಮ ಸಮಯ ಕಳೆಯೋದು ತುಂಬಾನೇ ಖುಷಿ ಕೊಡುತ್ತೆ ಎಂದರು.
ಭೈರತಿ ರಣಗಲ್ ಅಂಡರ್ ಕವರ್ ಕಥೆಯನ್ನೊಳಗೊಂಡಿದೆ. ಈ ಚಿತ್ರದಲ್ಲಿ ಎರಡು ಶೇಡ್ ಇದೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ಬ್ಲಾಕ್ ಕಲರ್ ಅನ್ನು ಥೀಮ್ ಆಗಿ ನಾವು ಬಳಸಿದ್ದೇವೆಂದು ಸೆಂಚುರಿ ಸ್ಟಾರ್ ತಿಳಿಸಿದರು.
ಆಗ ನಾನಿ ಪ್ರತಿಕ್ರಿಯಿಸಿ, ನಾನು ಸಿನಿಮಾ ಸಿಕ್ವೇಲ್ಗಳನ್ನು ನೋಡಿದ್ದೇನೆ. ಪ್ರೀಕ್ವೇಲ್ ಅಂದಾಗ ಸಹಜವಾಗಿ ಒಂದು ನಿರೀಕ್ಷೆ ಮೂಡುತ್ತದೆ. ನನಗೂ ಅದೇ ವಿಭಿನ್ನ ರೀತಿಯ ಫೀಲ್ ಆಗುತ್ತಿದೆ. ಜೊತೆಗೆ ಕೆಲ ವಿಡಿಯೋಗಳಲ್ಲಿ ನಿಮ್ಮ ಕಣ್ಣುಗಳು ತುಂಬಾ ಪವರ್ ಫುಲ್ ಆಗಿವೆ ಎಂದರು. ಈ ಮಾತಿಗೆ ಪ್ರತಿಕ್ರಿಯಿಸಿದ ಶಿವಣ್ಣ, ಹೌದು ನನ್ನ ಕಣ್ಣುಗಳು ಅಭಿಮಾನಿಗಳಿಗೆ ಇಷ್ಟ ಆಗಿವೆ. ಓಂ ಸಿನಿಮಾದಲ್ಲಿ ಉಪೇಂದ್ರ ಅವರು ಕಣ್ಣುಗಳಿಂದಲೇ ಅಭಿನಯ ಮಾಡಿಸಿದ್ದರು. ಉಪೇಂದ್ರ ಅವರು ಕೂಡಾ ನನ್ನ ಕಣ್ಣುಗಳನ್ನು ಇಷ್ಟ ಪಡುತ್ತಾರೆ. ನನ್ನ ತಂದೆ ತಾಯಿ ಸಹ ನನ್ನ ಕಣ್ಣುಗಳು ಬಹಳ ಚೆನ್ನಾಗಿವೆಯೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದು ಹೇಳಿದರು.
ಮಾತು ಮುಂದುವರಿಸಿದ ನಾನಿ, ಒಬ್ಬ ನಟನಿಗೆ ಕಣ್ಣುಗಳಲ್ಲಿ ನಟಿಸೋದು ತುಂಬಾನೇ ಮುಖ್ಯ ಆಗುತ್ತದೆ. ಅದರಲ್ಲಿ ಬಚ್ಚನ್ ಸರ್ ಕಣ್ಣುಗಳು ಬಹಳ ಚೆನ್ನಾಗಿವೆ. ಕಣ್ಣುಗಳು ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಮಲಯಾಳಂನಲ್ಲಿ ಫಹಾದ್ ಫಾಸಿಲ್, ತೆಲುಗಿನಲ್ಲಿ ಚಿರಂಜೀವಿ ಸರ್ ಕಣ್ಣುಗಳು ಕ್ಲೋಸ್ ಅಪ್ ಲುಕ್ನಲ್ಲಿ ತುಂಬಾನೇ ಚೆನ್ನಾಗಿ ಕಾಣುತ್ತವೆಯೆಂದು ಪ್ರಶಂಸಿದರು. ಜೊತೆಗೆ, ನನ್ನ ಸಿನಿ ಕೆರಿಯರ್ನಲ್ಲಿ 30 ಸಿನಿಮಾಗಳಾಗಿವೆ. ಪ್ರತಿ ಸಿನಿಮಾ ಮಾಡುವಾಗ ಅದೇ ಎನರ್ಜಿ ಇರುತ್ತದೆ. ಪ್ರತಿ ಸಿನಿಮಾ ಶುರುವಾದಾಗ ಅಷ್ಟೇ ಇಷ್ಟಪಟ್ಟು, ಅದೇ ಎನರ್ಜಿಯಿಂದ ಸಿನಿಮಾ ಮಾಡುತ್ತೇನೆ. ಸಮಯ ವ್ಯರ್ಥ ಮಾಡೋಲ್ಲವೆಂದು ತಿಳಿಸಿದರು.
ಇದನ್ನೂ ಓದಿ:ಶಿವಣ್ಣ, ಸುದೀಪ್ ನಿವಾಸಕ್ಕೆ ಟಾಲಿವುಡ್ ನ್ಯಾಚುರಲ್ ಸ್ಟಾರ್ ನಾನಿ ಭೇಟಿ - Nani met Sandalwood stars
ಈ ಮಾತಿಗೆ ಪ್ರತಿಕ್ರಿಯಿಸಿದ ಶಿವಣ್ಣ, ನಾವು ಸಿನಿಮಾವನ್ನು ಪ್ರೀತಿಸಿದಾಗ ಮಾತ್ರ ಖುಷಿ ಜೊತೆಗೆ ಒಂದು ನೆಮ್ಮದಿಯಿರುತ್ತದೆ. ನಾವು ಯಾವಾಗಲೂ ಹಣಕ್ಕಾಗಿ ಸಿನಿಮಾ ಮಾಡಿದ್ರೆ ಅಷ್ಟೊಂದು ತೃಪ್ತಿ ಇರೋದಿಲ್ಲವೆಂದು ತಿಳಿಸಿದರು.
9 ನಾನಿ ಅವರ ಲಕ್ಕಿ ನಂಬರ್. ಈ ಬಗ್ಗೆ ಮಾತನಾಡಿದ ಅವರು, ನನ್ನ ಕಾರ್ ನಂಬರ್ ಪ್ಲೇಟ್ನಲ್ಲಿ 9 ಇರುತ್ತದೆ. ಹಾಗೇ ಬಹುತೇಕ ನನ್ನ ಸಿನಿಮಾಗಳು 9 ನಂಬರ್ ಇರುವ ಡೇಟ್ನಲ್ಲಿ ಬಿಡುಗಡೆ ಆಗುತ್ತವೆ. ಎನ್ಟಿಆರ್ ಸರ್ ಕಾರ್ ನಂಬರ್ ಕೂಡಾ 9. ನನ್ನ ಸಿನಿಮಾ ನಿರ್ಮಾಪಕರು ಕೂಡಾ ಈ 9 ಅಂಕಿ ಮೇಲೆ ನಂಬಿಕೆ ಇಟ್ಟಿರುತ್ತಾರೆ. ಅವರು ಅಂದುಕೊಂಡಂತೆ ಸಕ್ಸಸ್ ಕೂಡ ಆಗಿದೆ. ಈ ಚಿತ್ರದಲ್ಲಿ ನನ್ನದು ಆ್ಯಂಗ್ರೀ ಮ್ಯಾನ್ ಪಾತ್ರ. ಸೂರ್ಯ ಅನ್ನೋ ರಗಡ್ ಪಾತ್ರವನ್ನು ನಿರ್ವಹಿಸಿದ್ದೇನೆಂದು ತಿಳಿಸಿದರು.
ಇದನ್ನೂ ಓದಿ:ಕರಿಯಾ ರೀ ರಿಲೀಸ್: ಉದ್ಧಟತನ ತೋರಿದ ಅಭಿಮಾನಿಗಳ ಮೇಲೆ ಪೊಲೀಸರಿಂದ ಲಘು ಲಾಠಿ ಪ್ರಹಾರ - Darshan Fans On Media
ಒಟ್ಟಾರೆ ಇದೇ ಮೊದಲ ಬಾರಿಗೆ ತೆಲುಗು ನಟ ನಾನಿ ಅವರು ಶಿವರಾಜ್ಕುಮಾರ್ ಅವರ ಸಂದರ್ಶನ ಮಾಡೋ ಜೊತೆಗೆ ತಮ್ಮ ಸಿನಿಮಾದ ಅನುಭವ ಹಂಚಿಕೊಂಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.