ಹೈದರಾಬಾದ್: ತಮಿಳಿನ ಜನಪ್ರಿಯ ನಟ ಜಯಂ ರವಿ ಅವರು ಇಂದು ತಮ್ಮ ವೈವಾಹಿಕ ವಿಚ್ಛೇದನ ಘೋಷಿಸಿದ್ದಾರೆ. 15 ವರ್ಷಗಳ ದಾಂಪತ್ಯ ಜೀವನಕ್ಕೆ ಜಯಂ ರವಿ ಮತ್ತು ಪತ್ನಿ ಆರತಿ ಅಂತ್ಯ ವಿರಾಮ ಇಟ್ಟಿದ್ದಾರೆ. ಜಯಂ ರವಿ ಅವರು ತಮಿಳು ಮತ್ತು ಇಂಗ್ಲಿಷ್ ಎರಡರಲ್ಲೂ ತಮ್ಮ ಹೇಳಿಕೆಯನ್ನು ಪ್ರಕಟಿಸಿದ್ದಾರೆ.
ತಮ್ಮ ಅಧಿಕೃತ ಸೋಷಿಯಲ್ ಮಿಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಡಿವೋರ್ಸ್ ಪೋಸ್ಟ್ ಶೇರ್ ಮಾಡಿದ್ದಾರೆ. ಆಳವಾಗಿ ಯೋಚಿಸಿ ನಂತರ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನಟ ತಮ್ಮ ಪೋಸ್ಟ್ನಲ್ಲಿ ವಿವರಿಸಿದ್ದಾರೆ. ಇದೊಂದು ಸವಾಲಿನ ಸಮಯವಾಗಿದ್ದು ಸಾರ್ವಜನಿಕರು ತಮ್ಮ ಗೌಪ್ಯತೆ ಗೌರವಿಸುವಂತೆ ವಿನಂತಿಸಿದ್ದಾರೆ.
2009ರ ಜೂನ್ನಲ್ಲಿ ಜಯಂ ರವಿ ಹಾಗೂ ಆರತಿ ದಾಂಪತ್ಯ ಜೀವನ ಆರಂಭಿಸಿದ್ದರು. ಇವರಿಗೆ ಆರವ್ ಮತ್ತು ಅಯಾನ್ ಎಂಬಿಬ್ಬರು ಗಂಡು ಮಕ್ಕಳಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ದಂಪತಿಯ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಊಹಾಪೋಹಗಳೆದಿದ್ದವು. ಅದರಲ್ಲೂ, ಆರತಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಿಂದ ಜಯಂ ರವಿ ಜೊತೆಗಿನ ಫೋಟೋಗಳನ್ನು ಡಿಲೀಟ್ ಮಾಡಿದ ನಂತರ ಅಂತೆಕಂತೆಗಳು ಜೋರಾಗಿದ್ದವು.
ಇಂದು ಶೇರ್ ಮಾಡಿರುವ ತಮ್ಮ 'ಎಕ್ಸ್' ಪೋಸ್ಟ್ನಲ್ಲಿ ನಟ, ಈವರೆಗೆ ತಾವು ಸ್ವೀಕರಿಸಿರುವ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಜೊತೆಗೆ, ತಮ್ಮ ಕುಟುಂಬ ಮತ್ತು ವಿಶೇಷವಾಗಿ ಮಕ್ಕಳ ಗೌರವ ಮತ್ತು ಗೌಪ್ಯತೆ ಬಗ್ಗೆ ಒತ್ತಿ ಹೇಳಿದ್ದಾರೆ.
ಈ ನಿರ್ಧಾರವನ್ನು ಪ್ರತಿಯೊಬ್ಬರ ಹಿತದೃಷ್ಟಿಯಿಂದ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರಾದರೂ, ವಿಚ್ಛೇದನದ ಹಿಂದಿರುವ ಕಾರಣಗಳನ್ನು ಬಹಿರಂಗಪಡಿಸಿಲ್ಲ. ನಮ್ಮ ಈ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಂಡಿಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ. ಈ ಸವಾಲಿನ ಸಮಯದಲ್ಲಿ ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಮಾಧ್ಯಮಗಳಿಂದ ಗೌಪ್ಯತೆ ವಿನಂತಿಸಿರುವ ಅವರು ಊಹಾಪೋಹಗಳು ಅಥವಾ ವದಂತಿಗಳಿಗೆ ಅವಕಾಶ ಕೊಡಬೇಡಿ ಎಂದು ಸಹ ತಿಳಿಸಿದ್ದಾರೆ.