ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್ ಮುಖ್ಯಭೂಮಿಕೆಯ ಮ್ಯಾಕ್ಸ್ ಸಿನಿಮಾ ಕ್ರಿಸ್ಮಸ್ನ ಶುಭ ದಿನದಂದು ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿತು. ಎರಡೂವರೆ ವರ್ಷದಿಂದ ಅಪಾರ ಸಂಖ್ಯೆಯ ಅಭಿಮಾನಿಗಳು ಕಿಚ್ಚನ ಮುಂದಿನ ಚಿತ್ರಕ್ಕಾಗಿ ಬಹಳ ಕಾತರದಿಂದ ಕಾಯುತ್ತಿದ್ದರು. ಫೈನಲಿ ಸಿನಿಮಾ ಡಿಸೆಂಬರ್ 25, ಬುಧವಾರದಂದು ಗ್ರ್ಯಾಂಡ್ ರಿಲೀಸ್ ಆಯಿತು. ಬಹುತೇಕ ಮೆಚ್ಚುಗೆಯನ್ನೇ ಸ್ವೀಕರಿಸಿರುವ ಸಿನಿಮಾ ಬಾಕ್ಸ್ ಆಫೀಸ್ನಲ್ಲೂ ಅದ್ಭುತ ಅಂಕಿ ಅಂಶಗಳೊಂದಿಗೆ ಧೂಳೆಬ್ಬಿಸಿದೆ. ಫೈನಲಿ, ಸಿನಿಮಾ ಹಿಟ್ ಎಂದು ಸಾಬೀತಾಗಿದೆ.
ಚಂದನವನದಲ್ಲಿ ಬಹುಬೇಡಿಕೆ ಹೊಂದಿರುವ ಸೂಪರ್ ಸ್ಟಾರ್ ಸುದೀಪ್ ಅವರ ಕೊನೆಯ ಸಿನಿಮಾ 'ವಿಕಾಂತ್ ರೋಣ' 2022ರ ಜುಲೈ 28ರಂದು ತೆರೆಕಂಡು ಭರ್ಜರಿ ಯಶಸ್ವಿ ಆಗಿತ್ತು. ಹಾಗಾಗಿ ನಟನ ಮುಂದಿನ ಸಿನಿಮಾ ಮೇಲೆ ಅಪಾರ ಸಂಖ್ಯೆಯ ಅಭಿಮಾನಿಗಳೂ ಸೇರಿದಂತೆ ಸಿನಿಪ್ರಿಯರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದರು. ಒಂದೊಳ್ಳೆ ಸಿನಿಮಾ ಕೊಡಬೇಕೆನ್ನುವ ನಿಟ್ಟಿನಲ್ಲಿ ಸುದೀಪ್ ಮತ್ತು ಅವರ ತಂಡ ಚಿತ್ರಕ್ಕೆ ತಮ್ಮ ಸಂಪೂರ್ಣ ಶ್ರಮ ಹಾಕಿದ್ದರು. ಹಾಗಾಗಿ ನಟನ ಹೊಸ ಚಿತ್ರ ತೆರೆಕಾಣಲು ಎರಡೂವರೆ ವರ್ಷ ಹಿಡಿಯಿತು. ಕೊನೆಗೂ ಕಳೆದ ದಿನ ಬಹುನಿರೀಕ್ಷಿತ ಚಿತ್ರ ಮ್ಯಾಕ್ಸ್ ಬಹಳ ಅದ್ಧೂರಿಯಾಗಿ ಚಿತ್ರಮಂದಿರಗಳನ್ನು ಪ್ರವೇಶಿಸಿತು. ಮಾಸ್ ಅವತಾರದಲ್ಲಿ ಸುದೀಪ್ ತೆರೆಮೇಲೆ ಅಬ್ಬರಿಸಿದ್ದು, ಸಿನಿಮಾ ತನ್ನ ವಿಮರ್ಷೆ ಪೈಕಿ ಬಹುತೇಕ ಮೆಚ್ಚುಗೆಯನ್ನೇ ಸ್ವೀಕರಿಸಿದೆ.
ಕಲೆಕ್ಷನ್ ಅಂದಾಜು ಎಷ್ಟಿತ್ತು?ಸಾಮಾಜಿಕ ಜಾಲತಾಣಗಳಲ್ಲಿ 'ಮ್ಯಾಕ್ಸ್'ನದ್ದೇ ಹವಾ. ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತಾದರೂ, ನಂತರ ಬಂದಿದ್ದು ಮ್ಯಾಕ್ಸಿಮಮ್ ಪಾಸಿಟಿವ್ ರೆಸ್ಪಾನ್ಸೇ. ಸಿನಿಮಾ ನೋಡಿದವರ ಪೈಕಿ ಬಹುತೇಕ ಉತ್ತಮ ಪ್ರತಿಕ್ರಿಯೆಯನ್ನೇ ಪಡೆದುಕೊಂಡಿರುವ ಸಿನಿಮಾ ಬಾಕ್ಸ್ ಆಫೀಸ್ ವಿಚಾರದಲ್ಲೂ ಧೂಳೆಬ್ಬಿಸಿದೆ. ತನ್ನ ಮೊದಲ ದಿನ ಭಾರತದಲ್ಲಿ 2.67 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂದು ಸಿನಿಮಾ ಇಂಡಸ್ಟ್ರಿ ಟ್ಯಾಕರ್ ಸ್ಯಾಕ್ನಿಲ್ಕ್ ಅಂದಾಜಿಸಿತ್ತು. ಆದ್ರೆ ಈ ಅಂಕಿ ಅಂಶ ಸಾಕಷ್ಟು ಏರಿಕೆ ಕಂಡಿದೆ.