ಬೆಂಗಳೂರು: ಯುವತಿಗೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆಗೆ ಯತ್ನಿಸಿದ ಆರೋಪದಡಿ ಕಿರುತೆರೆ ನಟನನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಕಿರುಕುಳಕ್ಕೆ ಒಳಗಾದ ಯುವತಿ ಕಿರುತೆರೆ ನಟಿಯಾಗಿದ್ದು, ಈಕೆ ನೀಡಿದ ದೂರಿನ ಮೇರೆಗೆ ನಟ ಚರಿತ್ ಬಾಳಪ್ಪ ಎಂಬಾತನನ್ನು ಬಂಧಿಸಲಾಗಿದೆ.
ನಾಯಂಡಹಳ್ಳಿಯಲ್ಲಿ ವಾಸವಾಗಿದ್ದ ಆರೋಪಿ ಮೂಲತಃ ಮಂಗಳೂರಿನವನಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಯೂರಿದ್ದ. ಕನ್ನಡದ ಮುದ್ದುಲಕ್ಷ್ಮಿ ಸೇರಿ ತೆಲುಗಿನ ಅನೇಕ ಧಾರವಾಹಿಗಳಲ್ಲಿ ನಟನಾಗಿ ಗುರುತಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ದೂರುದಾರ ಯುವತಿಯನ್ನು ಪರಿಚಯಿಸಿಕೊಂಡಿದ್ದ ಚರಿತ್, ಕಾಲಕ್ರಮೇಣ ಆಕೆಯೊಂದಿಗೆ ಸಲುಗೆಯಿಂದ ಓಡಾಡಿಕೊಂಡಿದ್ದ. ಆತ್ಮೀಯತೆ ಹೆಚ್ಚಾಗುತ್ತಿದ್ದಂತೆ ಯುವತಿಯನ್ನು ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಈತನ ಪ್ರೀತಿಗೆ ಯುವತಿ ನಿರಾಕರಿಸಿದ್ದಳು. "ಪ್ರೀತಿ ನೆಪದಲ್ಲಿ ದೈಹಿಕ ಸಂಪರ್ಕ ಇಟ್ಟುಕೊಳ್ಳಲು ಒತ್ತಾಯಿಸಿದ್ದ. ಹಣ ಕೊಡುವಂತೆ ಪೀಡಿಸುತ್ತಿದ್ದ. ಇದಕ್ಕೆ ಒಪ್ಪದಿದ್ದಾಗ ಜೀವ ಬೆದರಿಕೆ ಹಾಕಿದ್ದಾನೆ" ಎಂದು ದೂರಿನಲ್ಲಿ ಯುವತಿ ವಿವರಿಸಿದ್ದಾಳೆ.
"ದೈಹಿಕ ಸಂಪರ್ಕ ಇಟ್ಟುಕೊಳ್ಳಲು ನಿರಾಕರಿಸಿದರೆ ಖಾಸಗಿ ಫೋಟೊ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿರುವ ಸ್ನೇಹಿತರ ಗ್ರೂಪ್ಗಳಿಗೆ ಹರಿಬಿಡುವುದಾಗಿ ಧಮಕಿ ಹಾಕಿದ್ದ. ತನಗೆ ರಾಜಕಾರಣಿಗಳ ಹಾಗೂ ಪೊಲೀಸರ ಬಲವಿದೆ. ಅಲ್ಲದೆ ರೌಡಿಗಳ ಪರಿಚಯವಿದೆ. ಸುಳ್ಳು ಕೇಸ್ ಹಾಕಿಸಿ ಸಾಯುವವರೆಗೂ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತೇನೆ ಎಂದು ಹಲವು ಬಾರಿ ಹಲ್ಲೆ ಮಾಡಿರುವುದಾಗಿ" ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.
ವಿವಾಹಿತನಾಗಿರುವ ಚರಿತ್, ಕೆಲ ವರ್ಷಗಳ ಹಿಂದೆ ಪತ್ನಿಯಿಂದ ವಿಚ್ಚೇದನ ಪಡೆದುಕೊಂಡಿದ್ದ. ನ್ಯಾಯಾಲಯದ ಆದೇಶದಂತೆ ಪರಿಹಾರ ನೀಡುವಂತೆ ಪತ್ನಿ ಕಳುಹಿಸಿದ್ದ ನೋಟಿಸ್ಗೆ ಬೆದರಿಕೆ ಹಾಕಿದ್ದ. ಈ ಸಂಬಂಧ ಸರ್ಜಾಪುರ ಠಾಣೆಯಲ್ಲಿ ಎನ್ಸಿಆರ್ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 'ನಾನು ಕುಗ್ಗೋದಿಲ್ಲ, ಬಗ್ಗೋದೂ ಇಲ್ಲ': ಕಳಪೆ ಸ್ವೀಕರಿಸಿ ಆರಾಮಾಗಿ ಜೈಲಿಗೋದ ಹನುಮಂತು; ಬಿಗ್ಬಾಸ್ನಲ್ಲಿ ಇದೇ ಮೊದಲು