ಮಂಗಳೂರು: 2024ನೇ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಹಾನಿಯಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವುದು, ರೆಸಾರ್ಟ್ನಲ್ಲಿ ಮೂವರು ಗೆಳತಿಯರ ಸಾವು ಸೇರಿದಂತೆ ಹಲವು ದುರ್ಘಟನೆಗಳು ಸಂಭವಿಸಿವೆ.
ಕಹಿ ಘಟನೆಗಳು:
ತಡೆಗೋಡೆ ಕುಸಿದು ನಾಲ್ವರು ಸಾವು: ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಕುತ್ತಾರ್ ಸಮೀಪದ ಮದನಿ ನಗರ ಎಂಬಲ್ಲಿ ಜೂನ್ 25ರ ರಾತ್ರಿ ಮನೆಯೊಂದರ ತಡೆಗೋಡೆ ಕುಸಿದು ಇನ್ನೊಂದು ಮನೆಯಲ್ಲಿ ಮಲಗಿದ್ದ ತಂದೆ ಮುಹಮ್ಮದ್ ಯಾಸಿರ್ ಮತ್ತು ತಾಯಿ ಮರಿಯಮ್ಮ ಹಾಗೂ ಪುತ್ರಿಯರಾದ ಹಾಜರಾ ರಿಫಾನಾ, ಆಶಿಯಾ ರಿಯಾನಾ ಸೇರಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದರು.
ಈಜುಕೊಳದಲ್ಲಿ ಗೆಳತಿಯರ ದುರ್ಮರಣ: ಸೋಮೇಶ್ವರ ಉಚ್ಚಿಲದ ವಾರ್ಕೊ ಬೀಚ್ ರೆಸಾರ್ಟ್‌ನ ಈಜುಕೊಳದಲ್ಲಿ ನೀರಾಟವಾಡುತ್ತಿದ್ದ ಮೈಸೂರಿನ ಕುರುಬಾರಹಳ್ಳಿ ನಾಲ್ಕನೇ ಕ್ರಾಸ್ ನಿವಾಸಿ ನಿಶಿತಾ ಎಂ.ಡಿ. (21), ಕೆ.ಆರ್.ಮೊಹಲ್ಲ ನಿವಾಸಿ ಪಾರ್ವತಿ ಎಸ್ (20), ವಿಜಯನಗರ ದೇವರಾಜ ಮೊಹಲ್ಲಾ ನಿವಾಸಿ ಕೀರ್ತನಾ ಎನ್(21) ಮುಳುಗಿ ಮೃತಪಟ್ಟಿದ್ದರು. ನವೆಂಬರ್ 17ರಂದು ಘಟನೆ ನಡೆದಿತ್ತು.
ಅಗಲಿದ ಗಣ್ಯರು:
- ಹಿರಿಯ ಸಾಹಿತಿ, ಕವಿ, ವಿದ್ವಾಂಸ, ಸಂಶೋಧಕ, ಯಕ್ಷಗಾನ ಪ್ರಸಂಗಕರ್ತ, ನಿವೃತ್ತ ಪ್ರಾಧ್ಯಾಪಕ ಪ್ರೊ.ಅಮೃತ ಸೋಮೇಶ್ವರ (88) ಅವರು ಜನವರಿ 6ರಂದು ನಿಧನರಾದರು.
- ಹಿರಿಯ ಸಾಹಿತಿ, ಚಿಂತಕ, ಲೇಖಕ, ಭಾಷಾ ತಜ್ಞ ಕೆ.ಟಿ.ಗಟ್ಟಿ ಫೆಬ್ರವರಿ 19ರಂದು ನಿಧನರಾದರು.
- ಹಿರಿಯ ಪತ್ರಕರ್ತ, ಲೇಖಕ, ಸಾಹಿತಿ ಮನೋಹರ ಪ್ರಸಾದ್ ಮಾರ್ಚ್ 1ರಂದು ನಿಧನರಾದರು.
- ಹಿರಿಯ ರಂಗಭೂಮಿ ಕಲಾವಿದ ವಿ.ಜಿ.ಪಾಲ್ ಮಾರ್ಚ್ 21ರಂದು ನಿಧನರಾದರು.
- ಕೂರತ್ ತಂಙಳ್ ಎಂದೇ ಖ್ಯಾತರಾಗಿದ್ದ ದ.ಕ.ಜಿಲ್ಲೆಯ ಹಲವು ಮೊಹಲ್ಲಾಗಳ ಖಾಝಿಯಾಗಿ ಕಾರ್ಯನಿರ್ವಹಿಸಿದ್ದ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ಬುಖಾರಿ ಜುಲೈ 8ರಂದು ಕೇರಳದ ಕಣ್ಣೂರು ಜಿಲ್ಲೆಯ ಎಟ್ಟಿಕ್ಕುಳಂನಲ್ಲಿರುವ ಸ್ವಗೃಹದಲ್ಲಿ ನಿಧನರಾದರು.
- ಹಿರಿಯ ಸಾಹಿತಿ ಪಾಲ್ತಾಡಿ ರಾಮಕೃಷ್ಣ ಆಚಾರ್ ಮೇ 6ರಂದು ನಿಧನರಾದರು.
- ಹಿರಿಯ ರಾಜಕಾರಣಿ, ಮಾಜಿ ಶಾಸಕ ವಸಂತ ಬಂಗೇರಾ ಮೇ 8ರಂದು ನಿಧನರಾದರು.
- ಹಿರಿಯ ರಂಗಕರ್ಮಿ ಸದಾನಂದ ಸುವರ್ಣ ಜುಲೈ 16ರಂದು ನಿಧನರಾದರು.
- ನಾಡಿನ ಹಿರಿಯ ಲೇಖಕಿ, ಸಾಹಿತಿ, ಕಥೆಗಾರ್ತಿ ಮನೋರಮಾ ಎಂ.ಭಟ್ ಸೆಪ್ಟೆಂಬರ್ 15ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
- ಪಿಯುಸಿಎಲ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯಾಧ್ಯಕ್ಷ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಮಾನವ ಹಕ್ಕುಗಳ ಹಿರಿಯ ಹೋರಾಟಗಾರ ಮಂಗಳೂರಿನ ಪಿ.ಬಿ.ಡೇಸಾ ಸೆಪ್ಟಂಬರ್ 24ರಂದು ನಿಧನರಾದರು.
- ಯಕ್ಷಗಾನದ 'ಹಾಸ್ಯರಾಜ' ಎಂದೇ ಹೆಸರುವಾಸಿಯಾಗಿದ್ದ, ಶುದ್ಧ ಹಾಸ್ಯದ ಮೂಲಕ ಪ್ರೇಕ್ಷಕರ ಮನರಂಜಿಸುತ್ತಿದ್ದ ಬಂಟ್ವಾಳ ಜಯರಾಮ ಆಚಾರ್ಯ ಅಕ್ಟೋಬರ್ 21ರಂದು ಇಹಲೋಕ ತ್ಯಜಿಸಿದರು.
- ಖ್ಯಾತ ಪತ್ರಕರ್ತ, ಲೇಖಕ, ಚಿಂತಕ, ದಲಿತ್ ವಾಯ್ಸ್ ನಿಯತಕಾಲಿಕದ ಸ್ಥಾಪಕ ಸಂಪಾದಕ ವಿ.ಟಿ. ರಾಜಶೇಖರ್ ನವೆಂಬರ್ 20ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
- ಯಕ್ಷಗಾನ ಕ್ಷೇತ್ರದ ಪ್ರಪ್ರಥಮ ಮಹಿಳಾ ವೃತ್ತಿಪರ ಭಾಗವತರೆಂಬ ಖ್ಯಾತಿಯ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತೆ ಲೀಲಾವತಿ ಬೈಪಾಡಿತ್ತಾಯ ಡಿಸೆಂಬರ್ 14ರಂದು ನಿಧನರಾದರು.
ಪ್ರಶಸ್ತಿ-ಪದಕಗಳು:
- ಯುಎಇ ಉದ್ಯಮಿ ಡಾ.ತುಂಬೆ ಮೊಯ್ದಿನ್ (ಹೊರದೇಶ) ಮತ್ತು ಧರ್ಮಸ್ಥಳದ ಯಕ್ಷಗಾನ ಹಿಮ್ಮೇಳ ವಾದಕ ಸೀತಾರಾಮ ತೋಳ್ಪಾಡಿತ್ತಾಯ (ಯಕ್ಷಗಾನ) ಹಾಗೂ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಪ್ರಶಾಂತ್ ಮಾಡ್ತಾ (ಸಾಹಿತ್ಯ), ಎಸ್‌ಡಿಎಂ ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎ.ರಾಜೇಂದ್ರ ಶೆಟ್ಟಿ (ಸಾಹಿತ್ಯ), ದೈವ ನರ್ತಕ ಲೋಕಯ್ಯ ಶೇರಾ (ಭೂತಾರಾಧನೆ) ಅವರು ರಾಜ್ಯ ಸರಕಾರದ 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದರು.
- ದ.ಕ. ಮೂಲದ ವಿಶ್ವನಾಥ ಸುವರ್ಣ ಅವರು ಮಾಧ್ಯಮ ಕ್ಷೇತ್ರದ ಸೇವೆಗಾಗಿ 'ಸುವರ್ಣ ಮಹೋತ್ಸವ ಪ್ರಶಸ್ತಿ' ಪಡೆದರು.
- ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಬಜ್ಪೆ ಠಾಣೆಯ ಎಎಸ್ಸೈ ರಾಮಪೂಜಾರಿ ಮತ್ತು ಸಂಚಾರ ಉಪವಿಭಾಗದ ಸಿಎಚ್‌ಸಿ ಮಣಿಕಂಠ ಎಂ. ಅವರು ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಪ್ರಶಸ್ತಿ ಪಡೆದರು.
- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಕನಕಶ್ರೀ ಪ್ರಶಸ್ತಿಗೆ ಮಂಗಳೂರು ವಿವಿ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಶಿವರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ.
- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಬಿ.ವಿ.ಕಾರಂತ ಪ್ರಶಸ್ತಿಗೆ ರಂಗನಟ ಸದಾನಂದ ಸುವರ್ಣ ಆಯ್ಕೆಯಾದರು.
- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಜಾನಪದಶ್ರೀ ಪ್ರಶಸ್ತಿಗೆ (ವಾದನ) ಅರುವ ಕೊರಗಪ್ಪ ಶೆಟ್ಟಿ ಆಯ್ಕೆಯಾದರು.
- ಎಪ್ರಿಲ್ 10ರಂದು ಪ್ರಕಟಗೊಂಡ ದ್ವಿತೀಯ ಪಿಯು ಪರೀಕ್ಷೆಯಲ್ಲಿ ದ.ಕ. ಜಿಲ್ಲೆಗೆ ಪ್ರಥಮ ಸ್ಥಾನ ದೊರೆತಿದೆ.
- ಮೇ 9ರಂದು ಪ್ರಕಟಗೊಂಡ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ದ.ಕ. ಜಿಲ್ಲೆಗೆ ದ್ವಿತೀಯ ಸ್ಥಾನ ಲಭಿಸಿದೆ.
ವಿಧಾನ ಪರಿಷತ್‌ಗೆ ಆಯ್ಕೆ: ವಿಧಾನ ಪರಿಷತ್ ಸದಸ್ಯರಾಗಿ ಕಾಂಗ್ರೆಸ್‌ನ ಐವನ್ ಡಿಸೋಜ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಜೂನ್ 6ರಂದು ಎರಡನೇ ಬಾರಿ ವಿಧಾನ ಪರಿಷತ್ ಪ್ರವೇಶಿಸಿದರು. ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ಅಕ್ಟೋಬರ್ 21ರಂದು ನಡೆದ ರಾಜ್ಯ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಬಿ.ಆರ್. ಗೆಲುವು ಸಾಧಿಸಿದ್ದಾರೆ.
ನೇಮಕ:
- ದಿ ನ್ಯಾಶನಲ್ ಕಮಿಷನ್ ಫಾರ್ ಅಲ್ಲೈಡ್ ಆ್ಯಂಡ್ ಹೆಲ್ತ್‌ಕೇರ್ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಪ್ರೊ.ಡಾ.ಯು.ಟಿ.ಇಫ್ತಿಕಾರ್ ಅಲಿ ಅವರನ್ನು ರಾಜ್ಯ ಸರಕಾರ ನೇಮಿಸಿದೆ.
- ರಾಜ್ಯ ಗೇರು ನಿಗಮದ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದ ದ.ಕ.ಜಿ.ಪಂ. ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ ಫೆಬ್ರವರಿ 29ರಂದು ಅಧಿಕಾರ ಸ್ವೀಕರಿಸಿದ್ದಾರೆ.
- ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ನೇಮಕಗೊಂಡಿದ್ದ ವಿವಿಯ ರಾಜ್ಯಸಭಾ ವಿಭಾಗದ ಪ್ರೊಫೆಸರ್ ಪಿ.ಎಲ್.ಧರ್ಮ ಮಾರ್ಚ್ 5ರಂದು ಅಧಿಕಾರ ಸ್ವೀಕರಿಸಿದರು.
- ಮಾರ್ಚ್ 23ರಂದು ನಡೆದ ದ.ಕ.ಜಿಲ್ಲಾ 26ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಭುವೇಶ್ವರಿ ಹೆಗಡೆ ವಹಿಸಿದ್ದರು.
- ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ತಾರಾನಾಥ ಗಟ್ಟಿ ಕಾಪಿಕಾಡ್, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಉಮರ್ ಯು.ಎಚ್., ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಜೋಕಿಂ ಸ್ಟ್ಯಾನಿ ಅಳ್ವಾರಿಸ್, ಅರೆಭಾಷೆ ಸಂಸ್ಕೃತಿ ಅಕಾಡಮಿಯ ಅಧ್ಯಕ್ಷರಾಗಿ ಸದಾನಂದ ಮಾವಜಿ ಮತ್ತು ಸದಸ್ಯರನ್ನು ಮಾರ್ಚ್ 17ರಂದು ರಾಜ್ಯ ಸರಕಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ.
ಪ್ರಧಾನಿ ಮೋದಿ ಮಂಗಳೂರಿಗೆ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಧಾನಮಂತ್ರಿ ನರೇಂದ್ರ ಮೋದಿ ಏಪ್ರಿಲ್ 14ರಂದು ಮಂಗಳೂರಿನಲ್ಲಿ ರೋಡ್ ಶೋ ನಡೆಸಿದರು.
ಬ್ರಿಜೇಶ್ ಚೌಟ ಸಂಸದರಾಗಿ ಆಯ್ಕೆ: ಏಪ್ರಿಲ್ 26ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರಕ್ಕೆ ಮೂರು ಬಾರಿ ಸಂಸದರಾಗಿದ್ದ ಬಿಜೆಪಿಯ ನಳಿನ್ ಕುಮಾರ್ ಅವರಿಗೆ ಟಿಕೆಟ್ ನಿರಾಕರಣೆ. ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ಅವರನ್ನು 1,49,208 ಮತಗಳ ಅಂತರದಿಂದ ಮಣಿಸಿ ಸಂಸತ್ ಸದಸ್ಯರಾಗಿ ಲೋಕಸಭೆಗೆ ಚೊಚ್ಚಲ ಪ್ರವೇಶ ಪಡೆದರು. ಇದರೊಂದಿಗೆ ಈ ಕ್ಷೇತ್ರದಲ್ಲಿ ಬಿಜೆಪಿ 1991ರಿಂದ ಸತತ 9ನೇ ಬಾರಿ ಗೆಲುವಿನ ಅಭಿಯಾನ ಮುಂದುವರಿಸಿತು. ಜಿಲ್ಲೆಯಲ್ಲಿ ಶೇ 78.02 ಮತದಾನ ನಡೆದಿತ್ತು.
ಇತರೆ:
- ಮಂಗಳೂರು-ತಿರುವನಂತಪುರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾರ್ಚ್ 12ರಂದು ಚಾಲನೆ ನೀಡಿದರು.
- ಮೇ 5ರಂದು ಮಂಗಳೂರಿನ ನವ ಮಂಗಳೂರು ಬಂದರಿಗೆ ನಾರ್ವೇಜಿಯನ್ ವಿಲಾಸಿ ಹಡಗು ಆಗಮಿಸಿತು.
ಅಪರಾಧ-ಶಿಕ್ಷೆ:
ಬಾಲಕಿ ಮೇಲೆ ಅತ್ಯಾಚಾರ, ಕೊಲೆ; ಅಪರಾಧಿಗಳಿಗೆ ಮರಣದಂಡನೆ: ಮಂಗಳೂರು ಹೊರವಲಯದ ಉಳಾಯಿಬೆಟ್ಟು ಬಳಿಯ ರಾಜ್ಟೈಲ್ಸ್ ಫ್ಯಾಕ್ಟರಿಯಲ್ಲಿ 2021ರ ನ.20 ರಂದು ಜಾರ್ಖಂಡ್ ಮೂಲದ ಕುಟುಂಬಕ್ಕೆ ಸೇರಿದ್ದ ಎಂಟು ವರ್ಷ ಪ್ರಾಯದ ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆಗೈದ ಪ್ರಕರಣದ ಅಪರಾಧಿಗಳಾದ ಮಧ್ಯ ಪ್ರದೇಶದ ಪನ್ನಾ ಜಿಲ್ಲೆಯ ಪನಾಯಿ ತೆಪ್ಪಿಲ್ ನಿವಾಸಿ ಜಯಸಿಂಗ್ ಆದಿವಾಸಿ ಮತ್ತು ಮುಕೇಶ್ ಸಿಂಗ್ ಹಾಗೂ ಜಾರ್ಖಂಡ್ ರಾಜ್ಯದ ರಾಂಚಿ ಜಿಲ್ಲೆಯ ಮನೀಶ್ ತಿರ್ಕಿ ಎಂಬವರಿಗೆ ದ.ಕ. ಜಿಲ್ಲಾ ವಿಶೇಷ ಪೋಕ್ಸೊ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ನವೆಂಬರ್ 8ರಂದು ತೀರ್ಪು ನೀಡಿದೆ.
ಉಳ್ಳಾಲ ರಾಜೇಶ್ ಕೋಟ್ಯಾನ್ ಕೊಲೆ: ನಾಲ್ವರಿಗೆ ಜೀವಾವಧಿ ಶಿಕ್ಷೆ: 2016ರ ಏಪ್ರಿಲ್ 12ರಂದು ಉಳ್ಳಾಲ ಕೋಟೆಪುರದ ಫ್ಯಾಕ್ಟರಿಯ ಬಳಿ ಮರದ ಕಟ್ಟಿಗೆಯಿಂದ ಹೊಡೆದು ರಾಜೇಶ್ ಕೋಟ್ಯಾನ್ ಎಂಬವರನ್ನು ಕೊಲೆಗೈದಿದ್ದ ಆರೋಪಿಗಳಾದ ಮುಹಮ್ಮದ್ ಆಸೀಫ್, ಮುಹಮ್ಮದ್ ಸುಹೈಲ್, ಅಬ್ದುಲ್ ಮುತಾಲಿಫ್, ಅಬ್ದುಲ್ ಅಸ್ವೀರ್ಗೆ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಏಪ್ರಿಲ್ 20ರಂದು ಜೀವಾವಧಿ ಶಿಕ್ಷೆ ಹಾಗೂ ತಲಾ 25,000 ರೂ. ದಂಡ ವಿಧಿಸಿದ್ದಾರೆ.
ಪತಿಯ ಕೊಲೆಗೈದ ಪತ್ನಿ ಸಹಿತ ಐವರಿಗೆ ಜೀವಾವಧಿ ಶಿಕ್ಷೆ: ಉಳ್ಳಾಲ ತಾಲೂಕಿನ ಪಾವೂರು ಗ್ರಾಮದ ಇನೋಳಿ ದೆಂಡಿಂಜೆ ನಿವಾಸಿ ಇಸ್ಮಾಯಿಲ್ ಎಂಬವರ ಕೊಲೆಗೆ ಸುಪಾರಿ ನೀಡಿದ್ದ ಆರೋಪ ಎದುರಿಸುತ್ತಿದ್ದ ಪತ್ನಿ ಸಹಿತ 5 ಮಂದಿ ಆರೋಪಿಗಳಾದ ಪಾವೂರು ಗ್ರಾಮದ ಇನೋಳಿಯ ನೆಬಿಸಾ, ಬಿ.ಸಿ.ರೋಡ್ನ ಅಬ್ದುಲ್ ಮುನ್ನಾ, ಉಳ್ಳಾಲದ ಅಬ್ದುಲ್ ರಹಿಮಾನ್, ಬೋಳಿಯಾರಿನ ಶಬೀರ್, ಕುತ್ತಾರ್ ಪದವಿನ ಜಮಾಲ್ ಅಹ್ಮದ್ ಎಂಬವರಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಜುಲೈ 2ರಂದು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ತಮ್ಮನ ಕೊಂದ ಅಣ್ಣನಿಗೆ ಜೀವಾವಧಿ ಶಿಕ್ಷೆ: ಜಮೀನಿನಲ್ಲಿ ಪಾಲು ಕೇಳಲು ತನ್ನ ಮನೆಗೆ ಬಂದಿದ್ದ ಸಹೋದರ ಬಾಳಪ್ಪ ಯಾನೆ ರಾಮನಾಯ್ಕ (35) ಎಂಬವರನ್ನು 2022ರ ಮೇ 10ರಂದು ಹೊಡೆದು ಕೊಲೆ ಮಾಡಿದ್ದ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ನಂದರ ಬೆಟ್ಟುವಿನ ಐತಪ್ಪ ನಾಯ್ಕ ಯಾನೆ ಪುಟ್ಟು ನಾಯ್ಕ ಎಂಬಾತನಿಗೆ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸುನೀತಾ ಅವರು ಸೆಪ್ಟೆಂಬರ್ 20ರಂದು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಉದ್ಯಮಿ ಮುಮ್ತಾಝ್ ಅಲಿ ಸಾವು: ಮುಸ್ಲಿಂ ಸಮುದಾಯದ ಯುವ ಮುಂದಾಳು, ಉದ್ಯಮಿ ಮುಮ್ತಾಝ್ ಅಲಿ ಅಕ್ಟೋಬರ್ 6ರಂದು ತನ್ನ ಕಾರನ್ನು ಕೂಳೂರು ಸೇತುವೆಯಲ್ಲಿಟ್ಟು ನಾಪತ್ತೆಯಾಗಿದ್ದರು. ಮರುದಿನ ಅವರ ಮೃತದೇಹ ಕೂಳೂರು ನದಿಯಲ್ಲಿ ಪತ್ತೆಯಾಗಿತ್ತು. ಈ ಕೃತ್ಯಕ್ಕೆ ಮುಮ್ತಾಝ್ ಅಲಿಯ ಪರಿಚಯಸ್ಥರು ಹನಿಟ್ರ್ಯಾಪ್ ಮಾಡಿ ನೀಡಿದ ಮಾನಸಿಕ ಕಿರುಕುಳವೇ ಕಾರಣ ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕೃಷ್ಣಾಪುರ ನಿವಾಸಿಗಳಾದ ರೆಹಮತ್ ಮತ್ತಾಕೆಯ ಪತಿ ಶುಐಬ್, ಅಬ್ದುಲ್ ಸತ್ತಾರ್, ಮುಸ್ತಫಾ, ಸಿರಾಜ್, ಕಲಂದರ್ ಶಾಫಿ ಎಂಬವರನ್ನು ಬಂಧಿಸಿದ್ದರು.
ಹಾಗೆಯೇ, ಟಿಡಿಆರ್‌ಗೆ ಸಂಬಂಧಿಸಿದಂತೆ ಉದ್ಯಮಿಯಿಂದ 25 ಲಕ್ಷ ರೂ. ಲಂಚ ಸ್ವೀಕರಿಸಿದ ಆರೋಪದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತರಾಗಿದ್ದ ಮನ್ಸೂರ್ ಆಲಿ ಮತ್ತು ದಲ್ಲಾಳಿ ಮುಹಮ್ಮದ್ ಸಲೀಂರನ್ನು ಮಂಗಳೂರು ಲೋಕಾಯುಕ್ತ ಪೊಲೀಸರು ಮಾರ್ಚ್ 23ರಂದು ಬಂಧಿಸಿದ್ದರು.