ಮೈಸೂರು: ಕ್ರಿಸ್ಮಸ್, ವಾರಾಂತ್ಯ ರಜೆ ಸೇರಿದಂತೆ ಹೊಸವರ್ಷದ ಹಿನ್ನೆಲೆಯಲ್ಲಿ ಪ್ರವಾಸಿಗರ ದಂಡು ಅರಮನೆ ನಗರಿಗೆ ಹರಿದು ಬಂದಿದ್ದು, ನಗರದ ಬಹುತೇಕ ಹೋಟೆಲ್ ರೂಮ್ಗಳು ಭರ್ತಿಯಾಗಿವೆ.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ 'ಈಟಿವಿ ಭಾರತ್' ಜೊತೆ ಮಾತನಾಡಿ, "ನಗರದಲ್ಲಿರುವ ಸುಮಾರು 425ಕ್ಕೂ ಹೆಚ್ಚು ಹೋಟೆಲ್ಗಳು, ಅತಿಥಿ ಗೃಹಗಳು, ಕ್ಲಬ್ಗಳು, ವಿವಿಧ ಬಡಾವಣೆಗಳಲ್ಲಿರುವ ಸರ್ವಿಸ್ ಅಪಾರ್ಟ್ಮೆಂಟ್ಗಳು ಹಾಗೂ ಹೋಂ ಸ್ಟೇಗಳು ಭರ್ತಿಯಾಗಿವೆ. ನಗರದಲ್ಲಿ 10 ಸಾವಿರಕ್ಕೂ ಹೆಚ್ಚು ರೂಮ್ಗಳಿದ್ದು, ಅವುಗಳಲ್ಲಿ ಬಹುತೇಕ ರೂಮ್ಗಳು 10 ದಿನಗಳ ವರೆಗೂ ಬುಕ್ಕಿಂಗ್ ಆಗಿವೆ" ಎಂದು ಮಾಹಿತಿ ನೀಡಿದರು.
ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದು: "ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದಿಂದ ಮೈಸೂರು ಅರಮನೆ ಆವರಣದಲ್ಲಿ ಮಾಗಿ ಉತ್ಸವದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಪೊಲೀಸ್ ಬ್ಯಾಂಡ್ ಹಾಗೂ ಡಿಸೆಂಬರ್ 31ರ ರಾತ್ರಿ ಅರಮನೆ ಮುಂಭಾಗದಲ್ಲಿ ಮಧ್ಯರಾತ್ರಿ ಬಾಣಬಿರುಸು (ಹಸಿರು ಪಟಾಕಿ) ಪ್ರರ್ದಶನ ರದ್ದುಪಡಿಸಲಾಗಿದೆ. ಇಂದು ಮತ್ತು ನಾಳೆ ಅರಮನೆ ದೀಪಾಲಂಕಾರ ರದ್ದು ಮಾಡಲಾಗಿದೆ. ಫಲಪುಷ್ಪ ಪ್ರದರ್ಶನ ಎಂದಿನಂತೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಇರಲಿದೆ" ಎಂದು ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕ ಸುಬ್ರಮಣಿ ತಿಳಿಸಿದ್ದಾರೆ.
ಇದನ್ನೂ ಓದಿ: ಹೊಸ ವರ್ಷಾಚರಣೆ: ಅನ್ಯ ರಾಜ್ಯಗಳಿಂದ ಸಾಗಿಸುತ್ತಿದ್ದ ₹86 ಲಕ್ಷ ಮೌಲ್ಯದ ಗಾಂಜಾ ಜಪ್ತಿ