ಪ್ರೇಮಪಕ್ಷಿಗಳಾದ ಜಹೀರ್ ಇಕ್ಬಾಲ್ ಮತ್ತು ಸೋನಾಕ್ಷಿ ಸಿನ್ಹಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆಪೂರ್ವ ಆಚರಣೆಗಳು ಭರದಿಂದ ಸಾಗಿವೆ. ಮುಂಬೈನ ಜುಹುವಿನಲ್ಲಿರುವ ವಧುವಿನ ನಿವಾಸದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದಿವೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗಿವೆ.
ನಟಿಯ ನಿವಾಸದ ಬಳಿ ಪಾಪರಾಜಿಗಳು ಬೀಡುಬಿಟ್ಟಿದ್ದಾರೆ. ಮದುವೆಯ ಫೋಟೋ-ವಿಡಿಯೋಗಳನ್ನು ಸೆರೆಹಿಡಿಯಲು ಅವರು ಕಾತರರಾಗಿದ್ದಾರೆ. ಪಾಪರಾಜಿಗಳ ಕ್ಯಾಮರಾಗಳನ್ನು ಕಂಡು ಸೋನಾಕ್ಷಿ ಮುಗುಳ್ನಕ್ಕ ದೃಶ್ಯ ಸೆರೆಯಾಗಿದೆ. 'ದಬಾಂಗ್' ನಟಿ ನೀಲಿ ಕುರ್ತಾ ಸೂಟ್, ದುಪಟ್ಟಾದಲ್ಲಿ ಬೆರಗುಗೊಳಿಸುವ ನೋಟ ಬೀರಿದರು.
ಸೋನಾಕ್ಷಿ ಜೊತೆ ಅವರ ತಾಯಿ ಪೂನಂ ಸಿನ್ಹಾ ಕೂಡ ಕಾಣಿಸಿಕೊಂಡರು. ಪಾಪರಾಜಿಗಳತ್ತ ನೋಡಿ ಮುಗುಳ್ನಕ್ಕು, ನಮಸ್ತೆ ಎಂದರು. ಪಾಪರಾಜಿಯೊಬ್ಬರು "ಮುಬಾರಕ್ ಹೋ" ಎಂದು ಪ್ರತಿಕ್ರಿಯಿಸಿದ್ದು, ಪೂನಂ ಸಿನ್ಹಾ ಧನ್ಯವಾದ ಹೇಳಿದರು.
ಮತ್ತೊಂದು ವಿಡಿಯೋದಲ್ಲಿ, ಸಿನ್ನಾ ಮತ್ತು ಅವರ ತಾಯಿ ಪೂಜಾಸ್ಥಳದ ಬಳಿ ಮಾತನಾಡುತ್ತಿರುವುದನ್ನು ಗಮನಿಸಬಹುದು. ಇನ್ನೊಂದು ವಿಡಿಯೋದಲ್ಲಿ, ನಟಿ ಹುಮಾ ಖುರೇಷಿ ಕೂಡ ಸಿನ್ಹಾ ಮನೆಯೊಳಗೆ ಹೋಗುತ್ತಿರುವುದನ್ನು ಕಾಣಬಹುದು. ವಧು-ವರರ ನಿವಾಸಗಳು ವಿದ್ಯುತ್ ದೀಪಗಳಿಂದ ಶೃಂಗಾರಗೊಂಡಿವೆ. ಇವರ ನಿವಾಸಗಳ ಬಳಿ ಅತಿಥಿಗಳ ಆಗಮನವಾಗುತ್ತಿದೆ.
ಮದುವೆಯ ನಂತರ ಸೋನಾಕ್ಷಿ ಇಸ್ಲಾಂಗೆ ಮತಾಂತರಗೊಳ್ಳುತ್ತಾರೆ ಎಂಬ ಊಹಾಪೋಹಗಳು ಜೋರಾಗೇ ಎದ್ದಿತ್ತು. ಭಾವಿ ಮಾವ ಇಕ್ಬಾಲ್ ರತಾನ್ಸಿ, ಈ ಕುರಿತ ಎಲ್ಲಾ ವದಂತಿಗಳನ್ನು ತಳ್ಳಿಹಾಕಿದ್ದಾರೆ. "ಈ ಸಮಾರಂಭ ಯಾವುದೇ ಹಿಂದೂ ಅಥವಾ ಮುಸ್ಲಿಂ ಆಚರಣೆಗಳನ್ನು ಹೊಂದಿಲ್ಲ, ಇದು ಸಿವಿಲ್ ಮ್ಯಾರೇಜ್" ಎಂದು ಉಲ್ಲೇಖಿಸಿದರು.