ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದ ಸಿಲ್ಕ್ ಸ್ಮಿತಾ ಜನಪ್ರಿಯತೆ ಸದಾಕಾಲಕ್ಕೂ ಮುಂದುವರಿಯಲಿದೆ. ಇಂದು ಅವರ ಜನ್ಮದಿನೋತ್ಸವ ಹಿನ್ನೆಲೆ STRI ಸಿನಿಮಾಸ್ ಅಧಿಕೃತವಾಗಿ 'ಸಿಲ್ಕ್ ಸ್ಮಿತಾ - ಕ್ವೀನ್ ಆಫ್ ದಿ ಸೌತ್' ಎಂಬ ಶೀರ್ಷಿಕೆಯ ಬಯೋಪಿಕ್ ಪ್ರಾಜೆಕ್ಟ್ ಘೋಷಿಸಿದೆ. 1980 ಮತ್ತು 1990ರ ದಶಕದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಿಂಚಿ ಮರೆಯಾದ ಅಪ್ರತಿಮ ತಾರೆಯ ಅದ್ಭುತ ಪ್ರಯಾಣವನ್ನು ಈ ಸಿನಿಮಾ ಒಳಗೊಂಡಿರಲಿದೆ.
ಈ ಬಯೋಪಿಕ್‌ಗೆ ನಾಯಕಿ ಯಾರು, ಸಿಲ್ಕ್ ಸ್ಮಿತಾ ಅವರ ಪಾತ್ರವನ್ನು ತೆರೆಮೇಲೆ ತರುವವರು ಯಾರು ಎಂಬ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ. ಚಂದ್ರಿಕಾ ರವಿ ಅವರು ತೆರೆಮೇಲೆ ಸ್ಮಿತಾ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಜಯರಾಮ್ ಸಂಕರನ್ ನಿರ್ದೇಶಿಸಲಿದ್ದು, ಎಸ್.ಬಿ ವಿಜಯ್ ಅಮೃತ್‌ರಾಜ್ ನಿರ್ಮಾಣ ಮಾಡಲಿದ್ದಾರೆ. 2025ರ ಆರಂಭದಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಸಿಲ್ಕ್ ಸ್ಮಿತಾ ಅವರ ಜನ್ಮದಿನದಂದು ಈ ವಿಶೇಷ ಘೋಷಣೆ ಮಾಡಿರುವ ತಂಡ, ಸ್ಪೆಷಲ್ ವಿಡಿಯೋವನ್ನೂ ಸಹ ಅನಾವರಣಗೊಳಿಸಿದ್ದಾರೆ.
1960ರ ಡಿಸೆಂಬರ್ 2ರಂದು ವಿಜಯಲಕ್ಷ್ಮಿ ವಡ್ಲಪಾಟಿಯಾಗಿ ಜನಿಸಿದ ಸಿಲ್ಕ್ ಸ್ಮಿತಾ, ದಕ್ಷಿಣ ಭಾರತ ಚಲನಚಿತ್ರೋದ್ಯಮದಲ್ಲಿ ಅತ್ಯಂತ ಯಶಸ್ವಿ ತಾರೆಯಾಗಿ ಗುರುತಿಸಿಕೊಂಡರು. ಬೋಲ್ಡ್ ಪಾತ್ರಗಳು ಮತ್ತು ಅದ್ಭುತ ಡ್ಯಾನ್ಸ್ ನಟಿಯ ಜನಪ್ರಿಯತೆಗೆ ಪ್ರಮುಖ ಕಾರಣ. ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಬೋಲ್ಡ್ ಬ್ಯೂಟಿಯಾಗಿ ಗುರುತಿಸಿಕೊಂಡರು. 18 ವರ್ಷಗಳ ವೃತ್ತಿಜೀವನದಲ್ಲಿ ಸಿಲ್ಕ್ ಸ್ಮಿತಾ 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ಆಕರ್ಷಿಸಿದ ನಟಿ ವಿಶೇಷವಾಗಿ 1980ರ ದಶಕದಲ್ಲಿ ಸಖತ್ ಸದ್ದು ಮಾಡಿದ್ದರು. ಗ್ಲಾಮರ್‌ಗೆ ಮತ್ತೊಂದು ಹೆಸರೇ ಸಿಲ್ಕ್ ಸ್ಮಿತಾ ಎಂಬಂತಿತ್ತು.
ಇದನ್ನೂ ಓದಿ:ಡ್ರಾಮಾಗೆ ಅವಕಾಶ ಕೊಡದ ಸುದೀಪ್: ಬಾಗಿಲು ತೆರೆದಮೇಲೆ ಹೋಗಲ್ಲವೆಂದ ಶೋಭಾ ಶೆಟ್ಟಿ