ಮಹಾಕುಂಭ ನಗರ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಜುನಾ ಅಖಾಡಾದ ನೂರಕ್ಕೂ ಹೆಚ್ಚು ಮಹಿಳೆಯರಿಗೆ 'ನಾಗ ಸನ್ಯಾಸಿನಿ' ಆಗುವ ದೀಕ್ಷಾ ಪ್ರಕ್ರಿಯೆ ಭಾನುವಾರದಿಂದ ಪ್ರಾರಂಭವಾಗಿದೆ. 'ಪ್ರಸ್ತುತ ದೀಕ್ಷೆಯ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಮೊದಲ ಹಂತದಲ್ಲಿ 102 ಮಹಿಳೆಯರಿಗೆ ‘ನಾಗ ದೀಕ್ಷೆ’ ನೀಡಲಾಯಿತು' ಎಂದು ಶ್ರೀ ಪಂಚ ದಶನಂ ಜುನಾ ಅಖಾಡದ ಸಂತ ದಿವ್ಯಾ ಗಿರಿ ತಿಳಿಸಿದ್ದಾರೆ.
ಗಂಗಾದಲ್ಲಿ ಪವಿತ್ರ ಸ್ನಾನ ಮಾಡಿದ ನಂತರ, ಅವರಿಗೆ ನೀರಿನ ಮಡಕೆ (ಕಮಂಡಲ), ಗಂಗಾ 'ಜಲ್' ಮತ್ತು 'ದಂಡ' (ಕೋಲು)ವನ್ನು ನೀಡಲಾಯಿತು. ದೀಕ್ಷಾ ಪ್ರಕ್ರಿಯೆಯ ಅಂತಿಮ ಭಾಗವನ್ನು ಜುನಾ ಅಖಾಡದ ಆಚಾರ್ಯ ಮಹಾಮಂಡಲೇಶ್ವರ, ಸ್ವಾಮಿ ಅವಧೇಶಾನಂದ ಗಿರಿ ನೆರವೇರಿಸಲಿದ್ದಾರೆ ಎಂದಿದ್ದಾರೆ.
ನಾಗ ಸನ್ಯಾಸಿನಿ ದೀಕ್ಷೆಯಲ್ಲಿ ಮೂವರು ವಿದೇಶಿಯರೂ ಪಾಲ್ಗೊಂಡಿದ್ದು, ಅವರನ್ನು ಶ್ರೀ ಪಂಚ ದಶನಂ ಜುನ ಅಖಾಡದ ಸದಸ್ಯರನ್ನಾಗಿ ಮಾಡಲಾಗಿದೆ ಎಂದು ದಿವ್ಯ ಗಿರಿ ತಿಳಿಸಿದ್ದಾರೆ. ಅವರಲ್ಲಿ ಇಟಲಿಯ ಬಂಕಿಯಾ ಮರಿಯಮ್ ಅವರು 'ನಾಗ ದೀಕ್ಷೆ' ತೆಗೆದುಕೊಂಡು ಶಿವಾನಿ ಭಾರತಿ ಎಂದು ಮರುನಾಮಕರಣಗೊಂಡಿದ್ದಾರೆ. ಫ್ರಾನ್ಸ್‌ನ ಬಿಕ್ವೆನ್ ಮೇರಿ ಅವರು ದೀಕ್ಷೆಯ ನಂತರ, ಈಗ ಕಾಮಾಖ್ಯ ಗಿರಿ ಎಂದು ಹೆಸರು ಪಡೆದಿದ್ದಾರೆ. ಹಾಗೆಯೇ, ನೇಪಾಳದ ಮೋಕ್ಷಿತಾ ರೈ ಕೂಡ ಅಖಾಡಾದಲ್ಲಿ 'ನಾಗ ದೀಕ್ಷೆ' ಸ್ವೀಕರಿಸಿ ಮೋಕ್ಷಿತ ಗಿರಿ ಎಂದು ಮರು ನಾಮಂಕಿತರಾಗಿದ್ದಾರೆ.
ಹೀಗಿತ್ತು ದೀಕ್ಷೆ ಪ್ರಕ್ರಿಯೆ : ಮೊದಲಿಗೆ ವಿಜಯ ಹವನ ಸಂಸ್ಕಾರ ಮತ್ತು ಮುಂಡನ ಸಂಸ್ಕಾರ ನಡೆಯಿತು. ನಂತರ, ಈ ನಾಗಾ ಸಂತರು ಗಂಗಾ ದಡದಲ್ಲಿ ಸ್ನಾನ ಮಾಡಿದ ನಂತರ ವೇದ ಮಂತ್ರಗಳೊಂದಿಗೆ ದೀಕ್ಷೆ ನೀಡಲಾಯಿತು.
108 ಬಾರಿ ಪ್ರಮಾಣ: ಅಖಾರದ ಧ್ವಜದ ಅಡಿ ಪೂರ್ಣ ವಿಧಿ ವಿಧಾನಗಳೊಂದಿಗೆ ವಿಧಿಗಳನ್ನು ನಡೆಸಲಾಯಿತು. ಗುರುಗಳ ಮಾರ್ಗದರ್ಶನದಂತೆ ಭಜನೆ, ಕೀರ್ತನೆ ಹೇಳಿದ್ದಾರೆ. ನಂತರ ಅವರು ತಮ್ಮ ಮನೆ ತ್ಯಜಿಸುವುದಾಗಿ 108 ಬಾರಿ ಪ್ರಮಾಣ ಮಾಡಿದ್ದಾರೆ. ಮದುವೆಯಾಗುವುದಿಲ್ಲ, ಗೃಹಸ್ಥ ಜೀವನ ನಡೆಸುವುದಿಲ್ಲ, ಯಾವಾಗಲೂ ಋಷಿಗಳು ಮತ್ತು ಸಂತರೊಂದಿಗೆ ಇರುತ್ತೇವೆ. ಸನಾತನ ಧರ್ಮವನ್ನು ಮುಂದಕ್ಕೆ ಕೊಂಡೊಯ್ಯಲು ನಾವು ಸಹ ಸಹಾಯ ಮಾಡುತ್ತೇವೆ ಎಂದು ಶಪಥ ಮಾಡಿದ್ದಾರೆ.
ಮಹಾಕುಂಭದಲ್ಲಿ ನಾಗ ಸನ್ಯಾಸಿ ಎನಿಸಿಕೊಂಡ ಸಂತರು ಈಗ ಧರ್ಮ ಪ್ರಚಾರದ ಜತೆಗೆ ಕೌಟುಂಬಿಕ ಜೀವನದಿಂದ ದೂರ ಉಳಿಯಲಿದ್ದಾರೆ. ಮಹಾಕುಂಭದಲ್ಲಿ ಪ್ರತಿದಿನ ಅನೇಕ ದೊಡ್ಡ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಆಚರಣೆಗಳನ್ನು ಆಯೋಜಿಸಲಾಗುತ್ತಿದೆ. ಭಾನುವಾರ 600 ಮಂದಿಗೆ ನಾಗ ಸಂತರಾಗಲು ದೀಕ್ಷೆ ನೀಡಲಾಯಿತು. ಯಾರಾದರೂ ಇಲ್ಲಿನ ನಿಯಮವನ್ನು ಉಲ್ಲಂಘಿಸಿದರೆ ಅವರನ್ನು ಸನ್ಯಾಸಿ ಸಂಪ್ರದಾಯದಿಂದ ಹೊರ ಹಾಕಲಾಗುತ್ತದೆ.
ಇದನ್ನೂ ಓದಿ : ಮಹಾ ಕುಂಭಮೇಳ 2025 : ನಾಗಾ ಸಾಧುಗಳು ಎಂದರೆ ಯಾರು?- ಏನಿವರ ಮಹತ್ವ?: ಇಲ್ಲಿದೆ ಮಾಹಿತಿ - NAGA SADHU