ಬೆಂಗಳೂರು/ಶಿವಮೊಗ್ಗ:ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯನಟ ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಶಿವಮೊಗ್ಗದಲ್ಲಿ ಸಂತಾಪ ಸೂಚಿಸಿದರು. "ದ್ವಾರಕೀಶ್ ಹಿರಿಯರು, ಅವರ ಅಗಲಿಕೆ ನಮಗೆ ನೋವುಂಟು ಮಾಡಿದೆ. ಅವರ ಕುಟುಂಬ ನಮ್ಮ ಕುಟುಂಬಕ್ಕೆ ತುಂಬ ಹತ್ತಿರವಾಗಿದೆ. ಅವರ ಪ್ರೊಡಕ್ಷನ್ನಲ್ಲಿ ನಮ್ಮ ತಂದೆ ದೂರದ ಬೆಟ್ಟ ಚಿತ್ರದಲ್ಲಿ ನಟಿಸಿದ್ದರು. ನಾನೂ ಸಹ ಆಯುಷ್ಮಾನ್ ಚಿತ್ರದಲ್ಲಿ ನಟಿಸಿದ್ದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ. ನಾವು ಅವರ ಮಕ್ಕಳೊೆದಿಗೆ ಯಾವಾಗಲೂ ಇದ್ದೇ ಇರುತ್ತೇವೆ" ಎಂದರು.
ನಟ ರಮೇಶ್ ಅರವಿಂದ್ ಮಾತನಾಡಿ, "ನಾವು ವಿದ್ಯಾರ್ಥಿಗಳಾಗಿದ್ದಾಗ ಕಳ್ಳ ಕುಳ್ಳ, ಸಿಂಗಾಪುರ್ನಲ್ಲಿ ರಾಜಾ ಕುಳ್ಳ, ಕಿಟ್ಟು ಪುಟ್ಟು ಸಿನಿಮಾಗಳನ್ನು ನೋಡಿ ಖುಷಿಪಡುತ್ತಿದ್ದೆವು. ಆ ಸಿನಿಮಾಗಳನ್ನು ನೋಡಿದ ಬಳಿಕ ನಾವು ಎಷ್ಟೋ ಸಲ ಸೈಕಲ್ ಏರಿ ದ್ವಾರಕೀಶ್ ಅವರ ಮನೆ ಸುತ್ತ ಸುತ್ತಿದ್ದೇವೆ. ಕೆಲವು ದಿನಗಳ ಬಳಿಕ ಆ ಮನೆಯನ್ನು ದ್ವಾರಕೀಶ್ ಮಾರಿದರು. ಆ ಸುದ್ದಿ ಕೇಳಿ ನಮಗೆ ಬಹಳ ಬೇಜಾರಾಯಿತು. ದ್ವಾರಕೀಶ್ ಸರ್ ಸಾಕಷ್ಟು ಸೋಲುಗಳನ್ನು ಮೆಟ್ಟಿ ನಿಂತವರು".
"ಹಲವು ಚಿತ್ರಗಳ ಸೋಲಿನ ಬಳಿಕ ಆಪ್ತಮಿತ್ರ ಎಂಬ ಅತ್ಯದ್ಭುತ ಸಿನಿಮಾ ನೀಡಿದರು. ಸೋಲಿನ ಬಳಿಕವೂ ಪುಟಿದೇಳುವ ಅವರ ಆತ್ಮವಿಶ್ವಾಸ ನಮ್ಮಂತವರಿಗೆ ಸ್ಪೂರ್ತಿ. ಅವರ ಸ್ವಭಾವ ಕೂಡ ಹಾಗೆ ಇತ್ತು. ಎಲ್ಲರ ಜೊತೆ ಬೆರೆಯುತ್ತಿದ್ದರು. ಅವರ ಮೇಲೆ ಅವರೇ ಜೋಕ್ ಮಾಡಿಕೊಳ್ಳುತ್ತಾ ಎಲ್ಲರನ್ನೂ ಖುಷಿಪಡುತ್ತಿದ್ದರು. ಇದೆಲ್ಲದರ ನಡುವೆ ಅವರಿಗೆ ಉತ್ತಮ ವ್ಯವಹಾರ ಜ್ಞಾನ ಕೂಡ ಇತ್ತು. ಸಿನಿಮಾ ಬಗ್ಗೆ ಅವರಿಗಿದ್ದ ಪ್ರೀತಿ ಅಪಾರ. 50 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇಷ್ಟೊಂದು ಸಿನಿಮಾಗಳನ್ನು ನಿರ್ಮಾಣ ಮಾಡುವುದು ಸುಲಭದ ಕೆಲಸವಲ್ಲ. ಕನ್ನಡದ ಚಿತ್ರರಂಗದಲ್ಲಿ ಇದೊಂದು ದೊಡ್ಡ ಸಾಧನೆ. ಇವತ್ತು ಅವರು ನಮ್ಮನ್ನು ಅಗಲಿದ್ದಾರೆ. ಆದರೆ, ಎಂದೂ ಮರೆಯದಂತಹ ಸಾಕಷ್ಟು ಸಿನಿಮಾಗಳನ್ನು ಕೊಟ್ಟು ಹೋಗಿದ್ದಾರೆ. ಅದಕ್ಕಾಗಿ ಅವರಿಗೆ ನಾವು ಧನ್ಯವಾದಗಳನ್ನು ಸಲ್ಲಿಸಬೇಕು" ಎಂದರು.
ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ: "ದ್ವಾರಕೀಶ್ ನಿಧನದ ಸುದ್ದಿ ತಿಳಿದು ಬಹಳ ದುಃಖವಾಯಿತು. ಬೆಳಗ್ಗೆ ವಾಯುವಿಹಾರಕ್ಕೆ ಬರುತ್ತಿದ್ದರು. ಸಮಯಕ್ಕೆ ಸರಿಯಾಗಿ ಮಾತ್ರೆ, ಊಟೋಪಚಾರ ಸೇರಿದಂತೆ ಮನೆಯಲ್ಲಿ ಎಲ್ಲರೂ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಬೆಳಗ್ಗೆ 10:30ಕ್ಕೆ ಹೃದಯಾಘಾತ ಸಂಭವಿಸಿದ ಬಳಿಕ ಪುತ್ರ ಯೋಗೀಶ್ ಫೋನ್ ಮಾಡಿ ವಿಚಾರ ತಿಳಿಸಿದರು. ನಾವು ಮನೆಯವರಿಗೆ ಧೈರ್ಯ ಹೇಳಿದೆವು. ದ್ವಾರಕೀಶ್ ಅವರ ಅಂತಿಮ ದರ್ಶನಕ್ಕೆ ತಯಾರಿ ನಡೆದಿದೆ. ನಾಳೆ ಬೆಳಗ್ಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವ್ಯವಸ್ಥೆ ಮಾಡಲಿದೆ" ಎಂದು ಚಿತ್ರ ನಿರ್ಮಾಪಕ ಕೆ.ಮಂಜು ತಿಳಿಸಿದ್ದಾರೆ.
ಇದನ್ನೂ ಓದಿ:ದ್ವಾರಕೀಶ್ ನಿಧನಕ್ಕೆ ಸಿಎಂ, ಡಿಸಿಎಂ, ಸಚಿವರಿಂದ ಸಂತಾಪ - Condolences For Dwarakish