ಕನ್ನಡ ಚಿತ್ರರಂಗದ ಹೆಸರಾಂತ ನಟ ರಕ್ಷಿತ್ ಶೆಟ್ಟಿ ಕೊನೆಯದಾಗಿ ಕಾಣಿಸಿಕೊಂಡಿರೋ ಸಿನಿಮಾ 'ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ'. ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಮುಖ್ಯಭೂಮಿಕೆಯ ಈ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ಸು ಕಂಡಿತ್ತು. ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸದವರು ಯಾವಾಗ 'ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ' ಒಟಿಟಿಗೆ ಬರಲಿದೆ? ಎಂದು ಕಾತುರದಿಂದ ಕಾಯುತ್ತಿದ್ದರು. ಅಂತಿಮವಾಗಿ ಸಿನಿಮಾ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಯಶಸ್ವಿ ಚಿತ್ರ ಲಭ್ಯವಿದೆ. ಸಿನಿಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ.
2023ರ ಸೆಪ್ಟೆಂಬರ್ 1ರಂದು 'ಸಪ್ತಸಾಗರದಾಚೆ ಎಲ್ಲೋ ಸೈಡ್ ಎ' ಚಿತ್ರ ತೆರೆಕಂಡಿತ್ತು. ನಿರೀಕ್ಷಿಸಿದಂತೆ ಈ ಸಿನಿಮಾ ಯಶಸ್ವಿ ಆಗಿತ್ತು. ನಿರ್ದೇಶಕ ಹೇಮಂತ್ ಎಂ ರಾವ್ ಆ್ಯಕ್ಷನ್ ಕಟ್ ಹೇಳಿದ್ದ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆ ರುಕ್ಮಿಣಿ ವಸಂತ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಈ ಜೋಡಿ ಮನು ಮತ್ತು ಪ್ರಿಯಾ ಪಾತ್ರಗಳಿಗೆ ಜೀವ ತುಂಬಿದ್ದರು. ಭಾಗ ಎರಡರಲ್ಲಿ ಚೈತ್ರಾ ಜೆ ಆಚಾರ್ ಎಂಟ್ರಿ ಕೊಟ್ಟಿದ್ದರು. ಭಾಗ ಎರಡು ಅಂದರೆ 'ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ' ಇದೀಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ.
ಪ್ರೇಮಕಥೆಗಳುಳ್ಳ ಸಾವಿರಾರು ಸಿನಿಮಾಗಳು ನಮ್ಮ ಕಣ್ಣೆದುರು ಇವೆ. ಆದ್ರೆ, ಕೆಲ ಸಿನಿಮಾಗಳು ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಮನಸ್ಸಲ್ಲಿ ಜಾಗ ಗಿಟ್ಟಿಸಿಕೊಂಡಿವೆ. ಅಂಥ ಸಾಲಿನಲ್ಲಿ 'ಸಪ್ತಸಾಗರದಾಚೆ ಎಲ್ಲೋ....' ಸಿನಿಮಾವಿದೆ. ವಿಭಿನ್ನ ಮಧುರ ಪ್ರೇಮಕಥೆಯೊಂದಿಗೆ ಜನಮನ ಸೆಳೆದಿದೆ. ಬಾಕ್ಸ್ ಆಫೀಸ್ ವಿಚಾರದಲ್ಲೂ ಉತ್ತಮ ಅಂಕಿಅಂಶಗಳನ್ನು ಒಳಗೊಂಡಿದೆ.