ದೇಶದಲ್ಲಿಂದು ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ 'ಭಾರತದ ಹೆಮ್ಮೆ: ಛತ್ರಪತಿ ಶಿವಾಜಿ ಮಹಾರಾಜ' ಚಿತ್ರದ ನಿರ್ಮಾಪಕರು ಮರಾಠಾ ರಾಜನ ಮೊದಲ ನೋಟವನ್ನು ಅನಾವರಣಗೊಳಿಸಿದ್ದಾರೆ. ಈ ಪೋಸ್ಟರ್ ಮಹಾನ್ ಯೋಧನ ಶಕ್ತಿ, ಭಕ್ತಿ ಮತ್ತು ಶೌರ್ಯದ ಪ್ರತೀಕದಂತಿದೆ.
'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ನಿರ್ದೇಶಕ ಸಂದೀಪ್ ಸಿಂಗ್ ಅವರು ಚಿತ್ರದ ಮೊದಲ ನೋಟವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಬಿಡುಗಡೆ ಮಾಡಿದ್ದಾರೆ. ಪೋಸ್ಟರ್ನಲ್ಲಿ ಮರಾಠಾ ರಾಜ ಭವಾನಿ ದೇವಿಯ ಎದುರು ನಿಂತಿರುವುದನ್ನು ಕಾಣಬಹುದು. ಆದ್ರೆ ಅವರ ಮುಖವನ್ನು ಗೌಪ್ಯವಾಗಿಡಲಾಗಿದೆ. ಹಿಮ್ಮುಖದ ಫೋಟೋ ಇದಾಗಿದ್ದು, ಮುಂದಿನ ಪೋಸ್ಟರ್ಸ್ ನೋಡುವ ಸಿನಿಪ್ರಿಯರ ಕಾತರ ಹೆಚ್ಚಿದೆ. ಈ ಪೋಸ್ಟರ್ ಆಧ್ಯಾತ್ಮಿಕ ಶಕ್ತಿ ಮತ್ತು ಐತಿಹಾಸಿಕ ಭವ್ಯತೆಯನ್ನು ಪ್ರತಿಬಿಂಬಿಸುತ್ತಿದೆ. ಎಪಿಕ್ ಪೀರಿಯಾಡಿಕಲ್ ಡ್ರಾಮಾ ರೆಡಿಯಾಗುತ್ತಿದೆ ಎಂಬುದರ ಸುಳಿವನ್ನು ಪೋಸ್ಟರ್ ಬಿಟ್ಟುಕೊಟ್ಟಿದೆ.
2027ರ ಜ.21ಕ್ಕೆ ಸಿನಿಮಾ ಬಿಡುಗಡೆ: ಫಸ್ಟ್ ಲುಕ್ ರಿಲೀಸ್ ಮಾಡಿದ ಸಂದೀಪ್ ಸಿಂಗ್, 'ಜೈ ಭವಾನಿ, ಜೈ ಶಿವಾಜಿ, ಹರ್ ಹರ್ ಮಹಾದೇವ್' ಎಂದು ಬರೆದುಕೊಂಡಿದ್ದಾರೆ. ಜೊತೆಗೆ, ಭಾರತದ ಹೆಮ್ಮೆಯ, ಶ್ರೇಷ್ಠ ಯೋಧ ರಾಜ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜನ್ಮ ವಾರ್ಷಿಕೋತ್ಸವದಂದು, ಇಡೀ ಖಂಡದ ವಿಧಿಯನ್ನೇ ಬದಲಿಸಿದ ಮಹಾನ್ ರಾಜನ ಶಕ್ತಿ ಮತ್ತು ಭಕ್ತಿಯನ್ನು ಚಿತ್ರಿಸುವ ಮೊದಲ ನೋಟವನ್ನು ನಾವು ಬಹಳ ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿದ್ದೇವೆ. ಪರಿಣಿತ ತಂಡದೊಂದಿಗೆ ಅಸಾಧಾರಣ ಶೌರ್ಯ, ಗೌರವಕರ ಮತ್ತು ಸ್ವಆಡಳಿತದ ಕಥೆಯನ್ನು ತೆರೆ ಮೇಲೆ ತರುತ್ತಿರುವುದು ಒಂದು ಅತ್ಯುನ್ನತ ಗೌರವ. ಸಿನಿಮಾ ಜನವರಿ 21, 2027ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ದರ್ಶನ್ ಅಭಿಮಾನಿಗಳ ಪುಣ್ಯಕಾರ್ಯ: ದಾಸನ ಹೃದಯಪೂರ್ವಕ ನಮನ
ಚಿತ್ರತಂಡ ಹೀಗಿದೆ: ಪ್ರಸೂನ್ ಜೋಶಿ - ಸಾಹಿತ್ಯ, ಪ್ರೀತಮ್ - ಸಂಗೀತ, ಸಿದ್ಧಾರ್ಥ್ ಗರಿಮಾ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ, ರವಿ ವರ್ಮನ್ - ಛಾಯಾಗ್ರಹಣ ಮತ್ತು ರೆಸುಲ್ ಪೂಕುಟ್ಟಿ - ಸೌಂಡ್ ಡಿಸೈನ್, ಕ್ರೇಗ್ ಮ್ಯಾಕ್ರೇ - ಸ್ಟಂಟ್ಸ್, ನಿತಿನ್ ಜಿಹಾನಿ ಚೌಧರಿ - ಸೆಟ್ ಡಿಸೈನ್, ಫಿಲೋಮಿನ್ ರಾಜ್ - ಸಂಕಲನ, ಆಶ್ಲೇ ರೆಬೆಲ್ಲೊ ಮತ್ತು ಅಜಯ್ ಕುಮಾರ್ - ಕಾಸ್ಟೂಮ್ ಡಿಸೈನ್, ರೋನೆಕ್ಸ್ ಕ್ಸೇವಿಯರ್ - ಮೇಕಪ್, ಗಣೇಶ್ ಹೆಗ್ಡೆ - ನೃತ್ಯ ಸಂಯೋಜನೆ.
ಇದನ್ನೂ ಓದಿ: ಛತ್ರಪತಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ರಿಷಬ್ ಶೆಟ್ಟಿ: ತಜ್ಞರೊಂದಿಗೆ ಚಿತ್ರೀಕರಣ, ಕೇನ್ಸ್‌ನಲ್ಲಿ ಫಸ್ಟ್ ಲುಕ್ ರಿಲೀಸ್
'ಕಾಂತಾರ' ಖ್ಯಾತಿಯ ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸಂದೀಪ್ ಸಿಂಗ್ ನಿರ್ದೇಶನದ ಸಿನಿಮಾ 2027ರ ಜನವರಿ 21ರಂದು ಚಿತ್ರಮಂದಿರಗಳಲ್ಲಿ ಹಿಂದಿ, ಮರಾಠಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.