ಬೆಂಗಳೂರು: ಮಂಡಿನೋವಿನಿಂದ ಬಳಲುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಇದೀಗ ಹೊಸ Toyota Vellfire ಕಾರು ಖರೀದಿ ಮಾಡಲು ಮುಂದಾಗಿದ್ದಾರೆ.
ಸಿಎಂ ಮೊದಲು ತಮ್ಮ ಸರ್ಕಾರಿ ಫಾರ್ಚೂನರ್ ಕಾರನ್ನು ಬಳಸುತ್ತಿದ್ದರು. ಈಗ ಮಂಡಿ ನೋವಿದ್ದು, ಕಾಲಿಗೆ ಬೆಲ್ಟ್ ಅಳವಡಿಸಲಾಗಿದೆ. ಹೀಗಾಗಿ ಮುಖ್ಯಮಂತ್ರಿಗಳಿಗೆ ಅವರ ಸರ್ಕಾರಿ ಕಾರಿನಲ್ಲಿ ಹತ್ತಲು ಮತ್ತು ಇಳಿಯಲು, ಕಾಲನ್ನು ಮುಂದಕ್ಕೆ ಚಾಚಿ ಇಡಲು ಕಷ್ಟವಾಗುತ್ತಿದೆ. ಈ ಹಿನ್ನೆಲೆ ಹೊಸ ಕಾರು ಖರೀದಿಗೆ ಮುಂದಾಗಿದ್ದಾರೆ.
ಟೊಯೋಟಾ Vellfire ಕಾರಲ್ಲಿ ಓಡಾಟ: ತಮ್ಮ ಆಪ್ತರು ಹೊಸ ಕಾರು ಖರೀದಿಸಲು ನೀಡಿದ ಸಲಹೆ ಹಿನ್ನೆಲೆ ಸದ್ಯ ಸಿಎಂ ಪ್ರಯೋಗಾರ್ಥವಾಗಿ ಟೊಯೋಟಾ ವೆಲ್ಫೈರ್ ಕಾರನ್ನು ಬಳಲಸುತ್ತಿದ್ದು, ಬಹುತೇಕ ಅದೇ ಕಾರನ್ನು ಖರೀದಿಸುವ ಸಾಧ್ಯತೆ ಇದೆ ಎಂದು ಸಿಎಂ ಸಚಿವಾಲಯದ ಮೂಲಗಳು ತಿಳಿಸಿವೆ.
ಕಳೆದ ಒಂದು ವಾರದಿಂದ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ಕಾರ್ಯಕ್ರಮಗಳಿಗೆ ಸರ್ಕಾರಿ ಕಾರು ಬದಲಿಗೆ Toyota Vellfire ಕಾರಲ್ಲೇ ಓಡಾಟ ನಡೆಸುತ್ತಿದ್ದಾರೆ. ವಿಧಾನಸೌಧದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲು ಸಹ ಸಿಎಂ ಇದೇ ಕಾರಲ್ಲಿ ಆಗಮಿಸಿದ್ದರು. ಬಳಿಕ ಕಾರಿನಿಂದ ಇಳಿದು ವ್ಹೀಲ್ ಚೇರ್ನಲ್ಲಿ ಕುಳಿತು ವಿಧಾನಸೌಧದ ಒಳಕ್ಕೆ ಹೋದರು. ವೈದ್ಯರ ಸಲಹೆ ಮೇರೆಗೆ ಗಾಲಿ ಕುರ್ಚಿಯಲ್ಲೇ ಸಿಎಂ ಕೆಲ ದಿನಗಳ ಕಾಲ ಕೂರಬೇಕಾಗಿದೆ.
ಬಿಎಸ್ವೈಗೂ ಇದೇ ಕಾರು: ಐಶಾರಾಮಿ ಸೌಲಭ್ಯಗಳನ್ನು ಹೊಂದಿರುವ ಟೊಯೋಟಾ ವೆಲ್ಫೈರ್ ಕಾರನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸೇರಿದಂತೆ ಕೆಲ ಹಿರಿಯ ರಾಜಕಾರಣಿಗಳು ಬಳಕೆ ಮಾಡುತ್ತಿದ್ದಾರೆ. ಸಂಚಾರಕ್ಕೂ ಆರಾಮದಾಯಕ ಹಾಗೂ ಒಳಗಡೆ ಹೆಚ್ಚಿನ ಸ್ಥಳಾವಕಾಶ ಇರುವುದರಿಂದ ಹಿರಿಯ ರಾಜಕಾರಣಿಗಳು ಇದೇ ಕಾರನ್ನು ಬಳಸುತ್ತಿದ್ದಾರೆ.
ಇದನ್ನೂ ಓದಿ: ಸಿಎಂಗೆ ಎಡಗಾಲು ಮಂಡಿ ನೋವು: ಎರಡು ದಿನ ವಿಶ್ರಾಂತಿಗೆ ವೈದ್ಯರ ಸಲಹೆ