ಬೆಂಗಳೂರು: ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರ ಚೆಲುವರಾಜು ಎಂಬುವರಿಂದ ಹಣ ಪಡೆದು ವಂಚಿಸಿದ ಮತ್ತು ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು ರದ್ದು ಕೋರಿ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿದ್ದು, ಆದೇಶವನ್ನು ಕಾಯ್ದಿರಿಸಿದೆ.
ತನ್ನ ವಿರುದ್ಧದ ಪ್ರಕರಣ ರದ್ದುಕೋರಿ ಮುನಿರತ್ನ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ಸಂಬಂಧ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ತೀರ್ಪು ಕಾಯ್ದಿರಿಸಿತು. ಅಲ್ಲದೇ, ಆದೇಶ ಪ್ರಕಟಿಸುವವರೆಗೆ ಪ್ರಕರಣದಲ್ಲಿ ಮುಂದುವರಿಯಬಾರದು ಎಂದು ಸಿಐಡಿ ಪೊಲೀಸರಿಗೆ ನಿರ್ದೇಶಿಸಿ ಈ ಹಿಂದೆ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಮುಂದುವರಿಸಿದೆ.
ಅರ್ಜಿಯ ವಿಚಾರಣೆ ವೇಳೆ ಮುನಿರತ್ನ ಪರ ವಕೀಲರು ವಾದ ಮಂಡಿಸಿ, ದೂರುದಾರರು 2019ರಿಂದ 2024ರವರೆಗೆ ನಡೆದಿರುವ ಕೃತ್ಯಗಳ ಬಗ್ಗೆ 2024ರ ಸೆ.13ರಂದು ವೈಯಾಲಿಕಾವಲ್ ಠಾಣೆಗೆ ದೂರು ನೀಡಿದ್ದಾರೆ. ಅಂದರೆ ದೂರು ನೀಡುವಲ್ಲಿಯೇ ವಿಳಂಬ ಮಾಡಿದ್ದಾರೆ. ಇದು ಕಾನೂನಿನಡಿ ಒಪ್ಪಿತವಲ್ಲ. ಇನ್ನೂ ದೂರು ದಾಖಲಿಸಿದ ನಂತರ ಕೂಡಲೇ ಪ್ರಕರಣದ ತನಿಖೆಯನ್ನು ಸಿಐಡಿಯ ಎಸ್‌ಐಟಿಗೆ ವರ್ಗಾಯಿಸಲಾಗಿದೆ. ಆದರೆ, ಸಿಐಡಿಯ ಎಸ್‌ಐಟಿಗೆ ಪೊಲೀಸ್ ಠಾಣೆ ಮಾನ್ಯತೆ ಇಲ್ಲ. ಇಂತಹ ಸಂದರ್ಭದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವ ಅಧಿಕಾರವೂ ಎಸ್‌ಐಟಿಗೆ ಇಲ್ಲ. ಇನ್ನೂ ಮುನಿರತ್ನ ಶಾಸಕರಾಗಿದ್ದು, ಅವರ ವಿರುದ್ಧ ತನಿಖೆ ನಡೆಸಲು ಸಕ್ಷಮ ಪ್ರಾಧಿಕಾರದಿಮದ ಪೂರ್ವಾನುಮತಿ ಪಡೆದಿಲ್ಲ. ಹಾಗಾಗಿ ಪ್ರಕರಣ ಕುರಿತ ಎಫ್‌ಐಆರ್ ಮತ್ತು ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿದರು.
ಸರ್ಕಾರದ ಪರ ಹೆಚ್ಚುವರಿ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿ, ಅರ್ಜಿದಾರರ ವಿರುದ್ಧದ ತನಿಖೆಗೆ ಅನುಮತಿ ಕೇಳಲಾಗಿದೆ. ಆದರೆ, ಇನ್ನೂ ಪೂರ್ವಾನುಮತಿ ದೊರೆತಿಲ್ಲ. ಇನ್ನೂ ಸಿಐಡಿಗೆ ಪೊಲೀಸ್ ಠಾಣೆ ಮಾನ್ಯತೆ ನೀಡಿ ಗೃಹ ಇಲಾಖೆ ಆದೇಶ ಮಾಡಿದೆ. ಸಿಐಡಿ ತನಿಖಾಧಿಕಾರಿಗಳು ಒಳಗೊಂಡ ತಂಡವನ್ನು ತನಿಖೆಗೆ ರಚನೆ ಮಾಡಲಾಗಿದೆ. ಹಾಗಾಗಿ, ತನಿಖೆ ನಡೆಸಿ ವರದಿ ಸಲ್ಲಿಸುವ ಅಧಿಕಾರ ಸಿಐಡಿಯ ಎಸ್‌ಐಟಿಗೆ ಇದೆ. ಅರ್ಜಿದಾರರ ಮೇಲಿನ ಆರೋಪಗಳು ಗಂಭೀರವಾಗಿದ್ದು, ಆ ಕುರಿತು ತನಿಖೆ ಹಾಗೂ ವಿಚಾರಣೆ ನಡೆಸುವುದು ಅಗತ್ಯವಾಗಿದೆ. ಹಾಗಾಗಿ, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು. ವಾದ ಆಲಿಸಿದ ಪೀಠ, ಆದೇಶ ಕಾಯ್ದಿರಿಸಿದೆ.
ಪ್ರಕರಣದ ಹಿನ್ನೆಲೆ: ಶಾಸಕ ಮುನಿರತ್ನ ತಮ್ಮಿಂದ 20 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆ. ಹಣ ಹಿಂದಿರುಗಿಸಲು ಕೇಳಿದಕ್ಕೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ನನ್ನ ಜಾತಿ ಹೆಸರು ತೆಗೆದು ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಗುತ್ತಿದಾರ ಚೆಲುವರಾಜು 2024ರ ಸೆ.13ರಂದು ನಗರದ ವೈಯಾಲಿ ಕಾವಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಈ ಪ್ರಕರಣ ರದ್ದುಪಡಿಸುವಂತೆ ಕೋರಿ ಮುನಿರತ್ನ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದಲ್ಲಿ ಮುಂದುವರಿಯಬಾರದು ಎಂದು ಸಿಐಡಿ ಪೊಲೀಸರಿಗೆ ಸೂಚಿಸಿ 2025ರ ಫೆ.7ರಂದು ಹೈಕೋರ್ಟ್ ಮಧ್ಯಂತರ ಆದೇಶ ಮಾಡಿತ್ತು.