ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಇತ್ತೀಚಿನ ಬಾಲಿವುಡ್ ಸಿನಿಮಾ 'ಛಾವಾ' ಬಾಕ್ಸ್ ಆಫೀಸ್‌ನಲ್ಲಿ ತನ್ನ ಅದ್ಭುತ ಪ್ರದರ್ಶನ ಮುಂದುವರಿಸಿದೆ. ಫೆಬ್ರವರಿ 14ರಂದು ಚಿತ್ರಮಂದಿರ ಪ್ರವೇಶಿಸಿದ ಐತಿಹಾಸಿಕ ಆ್ಯಕ್ಷನ್-ಡ್ರಾಮಾ, ವಾರದ ದಿನಗಳಲ್ಲಿ ಕೊಂಚ ಕುಸಿತದ ಹೊರತಾಗಿಯೂ ಒಟ್ಟು ಗಳಿಕೆ ವಿಚಾರದಲ್ಲಿ ಉತ್ತಮ ಅಂಕಿಅಂಶ ಕಾಯ್ದುಕೊಳ್ಳುವಲ್ಲಿ ಯಶಸ್ವಿ ಆಗಿದೆ.
ಛಾವಾ ಬಾಕ್ಸ್ ಆಫೀಸ್ ಕಲೆಕ್ಷನ್ (5 ದಿನಗಳು) : ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಮಾಡಿದಂತೆ ಆರಂಭಿಕ ಅಂದಾಜಿನ ಪ್ರಕಾರ, ಛಾವಾ ತನ್ನ 5ನೇ ದಿನದಂದು 25.25 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಸಿನಿಮಾದ ಒಟ್ಟು ದೇಶಿಯ ಗಳಿಕೆ 165.75 ಕೋಟಿ ರೂ.ಗೆ ತಲುಪಿದೆ. ತನ್ನ ಮೊದಲ ದಿನ 31 ಕೋಟಿ ರೂ.ನೊಂದಿಗೆ ತನ್ನ ಬಾಕ್ಸ್ ಆಫೀಸ್ ಪ್ರಯಾಣವನ್ನು ಪ್ರಾರಂಭಿಸಿದ ಈ ಚಿತ್ರವು ವಾರಾಂತ್ಯದಲ್ಲಿಯೂ ಉತ್ತಮ ಕಲೆಕ್ಷನ್ ಮಾಡಿದೆ. ಶನಿವಾರ 37 ಕೋಟಿ ರೂ., ಭಾನುವಾರ 48.5 ಕೋಟಿ ರೂ. ಸಂಪಾದಿಸಿದ ಚಿತ್ರ ಮೊದಲ ಸೋಮವಾರ 24 ಕೋಟಿ ರೂ.ಗಳನ್ನು ಗಳಿಸಿದೆ. ವಾರಾಂತ್ಯದ ಉತ್ತಮ ಕಲೆಕ್ಷನ್ ನಂತರ ಕೊಂಚ ಕುಸಿತದ ಹೊರತಾಗಿಯೂ, ಚಿತ್ರ ಮಂಗಳವಾರ ತನ್ನ ಗಳಿಕೆಯಲ್ಲಿ ಏರಿಕೆ ಕಂಡಿದೆ.
ಗ್ಲೋಬಲ್ ಕಲೆಕ್ಷನ್ : ದೇಶಿಯ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆಯ ಜೊತೆಗೆ, ಛಾವಾ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದೆ. ಮೊದಲ ನಾಲ್ಕು ದಿನಗಳಲ್ಲಿ ಚಿತ್ರ ವಿದೇಶಗಳಲ್ಲಿ 27 ಕೋಟಿ ರೂ. ಗಳಿಸಿದ್ದು, 4ನೇ ದಿನದ ವೇಳೆಗೆ ವಿಶ್ವದಾದ್ಯಂತದ ಒಟ್ಟು ಗಳಿಕೆ 195.60 ಕೋಟಿ ರೂ. ತಲುಪಿತ್ತು. ಬಾಕ್ಸ್ ಆಫೀಸ್‌ನಲ್ಲಿ ಈ ಉತ್ತಮ ಪ್ರದರ್ಶನ ಮುಂದುವರಿದರೆ, ಚಿತ್ರ ಶೀಘ್ರದಲ್ಲೇ ವಿಶ್ವದಾದ್ಯಂತ 200 ಕೋಟಿ ರೂ.ಗಳನ್ನು ದಾಟುವ ನಿರೀಕ್ಷೆ ಇದೆ.
ಇದನ್ನೂ ಓದಿ: ದರ್ಶನ್ ಅಭಿಮಾನಿಗಳ ಪುಣ್ಯಕಾರ್ಯ: ದಾಸನ ಹೃದಯಪೂರ್ವಕ ನಮನ
ಲಕ್ಷ್ಮಣ್ ಉಟೇಕರ್ ಆ್ಯಕ್ಷನ್ ಕಟ್ ಹೇಳಿರುವ ಛಾವಾ ಚಿತ್ರವನ್ನು ಮ್ಯಾಡಾಕ್ ಫಿಲ್ಮ್ಸ್ ಅಡಿಯಲ್ಲಿ ದಿನೇಶ್ ವಿಜನ್ ನಿರ್ಮಾಣ ಮಾಡಿದ್ದಾರೆ. ಮರಾಠಾ ರಾಜ ಸಂಭಾಜಿ ಮಹಾರಾಜರ ಜೀವನವನ್ನು ಆಧರಿಸಿದ ಹಿಸ್ಟಾರಿಕಲ್ ಆ್ಯಕ್ಷನ್ ಡ್ರಾಮಾ ಆಗಿದೆ. ವಿಕ್ಕಿ ಕೌಶಲ್ ಸಂಭಾಜಿ ಮಹಾರಾಜರ ಪಾತ್ರ ನಿರ್ವಹಿಸಿದ್ದರೆ, ಮಹಾರಾಣಿ ಯೇಸುಬಾಯಿ ಪಾತ್ರವನ್ನು ರಶ್ಮಿಕಾ ಮಂದಣ್ಣ ಚಿತ್ರಿಸಿದ್ದಾರೆ. ಅಕ್ಷಯ್ ಖನ್ನಾ ಮೊಘಲ್ ಆಡಳಿತಗಾರ ಔರಂಗಜೇಬ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಅಶುತೋಷ್ ರಾಣಾ ಸರ್ಸೇನಾಪತಿ ಹಂಬಿರಾವ್ ಮೋಹಿತೆ ಪಾತ್ರವನ್ನು ನಿಭಾಯಿಸಿದ್ದು, ಸೋಯಾರಾಬಾಯಿ ಪಾತ್ರವನ್ನು ದಿವ್ಯಾ ದತ್ತಾ ಚಿತ್ರಿಸಿದ್ದಾರೆ. ಈ ಚಿತ್ರವು ಮಹರ್ಷಿ ಶಿವಾಜಿ ಸಾವಂತ್ ಅವರ ಮರಾಠಿ ಕಾದಂಬರಿ 'ಛಾವಾ'ವನ್ನು ಆಧರಿಸಿದ್ದು, ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ.
ಇದನ್ನೂ ಓದಿ: ಛತ್ರಪತಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ರಿಷಬ್ ಶೆಟ್ಟಿ: ತಜ್ಞರೊಂದಿಗೆ ಚಿತ್ರೀಕರಣ, ಕೇನ್ಸ್‌ನಲ್ಲಿ ಫಸ್ಟ್ ಲುಕ್ ರಿಲೀಸ್