'ಕೆಂಡ'. ಈಗಾಗಲೇ ಕೆಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿಗಳನ್ನೂ ಬಾಚಿರುವ ಸಿನಿಮಾ. ಭಾರತದಲ್ಲಿ ಇಂಥ ಸಿನಿಮಾಗಳನ್ನೂ ರೂಪಿಸುತ್ತಾರಾ ಎಂಬಂಥ ಬೆರಗೊಂದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ 'ಕೆಂಡ' ಮೂಡಿಸಿದೆ. ಇಷ್ಟೆಲ್ಲಾ ಸಾಧನೆ, ಖುಷಿ ಸಂಗತಿಗಳೊಂದಿಗೆ ಚಿತ್ರತಂಡವೀಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಕೆಂಡ ಟ್ರೇಲರ್ ಅನ್ನು ಹಿರಿಯ ರಂಗಭೂಮಿ ಕಲಾವಿದ ವಿನೋದ್ ರವೀಂದ್ರನ್ ಅನಾವರಣಗೊಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಿನಿಮಾ ಬಗೆಗಿನ ಒಂದಷ್ಟು ಬೆರಗಿನ ವಿಚಾರಗಳನ್ನು ಚಿತ್ರತಂಡ ಹಂಚಿಕೊಂಡಿದೆ.
ಸೂಕ್ಷ್ಮ ಮನಃಸ್ಥಿತಿಯ ನಿರ್ದೇಶಕನ ಕೈಗೆ ಭೂಗತ ಜಗತ್ತಿನ ಕಥೆ ಸಿಕ್ಕರೆ, ಅಲ್ಲಿ ಬೇರೊಂದು ಆಯಾಮದ ದೃಶ್ಯಕಾವ್ಯ ರೂಪುಗೊಳ್ಳುವುದು ಖಚಿತ. ಕೆಂಡ ಕೂಡಾ ಅಂಥದ್ದೇ ರೌಡಿಸಂನ ಸುತ್ತಲಿನ ಕಥನ. ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುವ ಯುವಕನೋರ್ವ, ಪರಿಸ್ಥಿತಿಗಳ ಸೆಳವಿಗೆ ಸಿಕ್ಕು ಭೂಗತದ ತೆಕ್ಕೆಗೆ ಬೀಳುವ ಕಥೆ ಇಲ್ಲಿದೆ. ಹಾಗಂತ ಅದು ಸಿದ್ಧ ಸೂತ್ರಗಳ ಸುತ್ತ ಗಿರಕಿ ಹೊಡೆಯುವಂಥದ್ದಲ್ಲ. ಕೈಗೆ, ಮೈ ಮನಸಿಗೆ ಮೆತ್ತಿಕೊಂಡ ರಕ್ತದ ಕಲೆಗಳನ್ನು ಕಲಾತ್ಮಕವಾಗಿ ತೋರಿಸಲು ಸಾಧ್ಯವೇ? ಸುಡುವ ಕ್ರೌರ್ಯವನ್ನು ಸೂಕ್ಷ್ಮ ಸಂವೇದನೆಯ ಒಳಗಣ್ಣಿನಿಂದ ನೋಡಲು ಹೇಗೆ ಸಾಧ್ಯ? ಇದು ಸಿನಿಮಾಸಕ್ತರನ್ನು ಕಾಡುವ ಗೊಂದಲ ಬೆರೆತ ಅಚ್ಚರಿ. ಅಂಥಾ ಅಚ್ಚರಿಗಳೇ ಬೆರಗುಗೊಳ್ಳುವಂತೆ ಕೆಂಡ ಚಿತ್ರ ಮೂಡಿ ಬಂದಿದೆ ಎಂಬ ಮುನ್ಸೂಚನೆ ಟ್ರೇಲರ್ನಲ್ಲಿ ಸ್ಪಷ್ಟವಾಗಿದೆ.
ಟ್ರೇಲರ್ ಲಾಂಚ್ ಈವೆಂಟ್ನಲ್ಲಿ ನಿರ್ದೇಶಕ ಸಹದೇವ್ ಕೆಲವಡಿ, ನಿರ್ಮಾಪಕಿ ರೂಪಾ ರಾವ್, ಸಂಗೀತ ನಿರ್ದೇಶಕ ರಿತ್ವಿಕ್ ಕಾಯ್ಕಿಣಿ, ರಂಗಭೂಮಿಯಿಂದ ಬಂದಿರುವ ಈ ಚಿತ್ರದ ನಾಯಕ ಬಿ.ವಿ.ಭರತ್, ಪ್ರಣವ್ ಶ್ರೀಧರ್, ಹಿರಿಯ ರಂಗಭೂಮಿ ಕಲಾವಿದ ವಿನೋದ್ ರವೀಂದ್ರನ್, ಸತೀಶ್, ಫೃಥ್ವಿ, ದೀಪ್ತಿ ಮುಂತಾದವರು ಪಾಲ್ಗೊಂಡಿದ್ದರು.
ಮೊದಲಿಗೆ ಮಾತಾಡಿದ ರೂಪಾ ರಾವ್, "ಕೆಂಡ ಕೆಲವು ಸ್ನೇಹಿತರು ಸೇರಿ ನಿರ್ಮಾಣ ಮಾಡಿರುವ ಸಿನಿಮಾ. ಇತ್ತೀಚೆಗೆ ನ್ಯೂಯಾರ್ಕ್ನಲ್ಲಿ ಕೆಂಡ ಚಿತ್ರ ನೋಡಿ ಕಂಟೆಂಟ್ ಹೊಂದಿರುವ ಚಿತ್ರ ಎಂಬ ಪ್ರಶಂಸೆ ಸಿಕ್ಕಿದೆ. ಸದ್ಯಕ್ಕೆ ಚಿತ್ರಮಂದಿರದ ಕಡೆ ಪ್ರೇಕ್ಷಕರು ಬರುತ್ತಿಲ್ಲ ಅನ್ನೋದು ಗೊತ್ತಿದೆ. ಹಾಗಾಗಿ, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗಿಂತ ಮಲ್ಟಿಪ್ಲೆಕ್ಸ್ಗಳಲ್ಲಿ ಹೆಚ್ಚು ರಿಲೀಸ್ ಮಾಡುತ್ತಿದ್ದೇವೆ. ಕಾರ್ಮಿಕರು ಅಸಹಾಯಕತೆಯಿಂದ ಹೇಗೆ ರೌಡಿಗಳು ಆಗ್ತಾರೆ ಅನ್ನೋದನ್ನು ಈ ಚಿತ್ರ ಹೇಳುತ್ತದೆ" ಎಂದು ತಿಳಿಸಿದರು.