ಬಾಲಿವುಡ್ನ ಅತ್ಯಂತ ಜನಪ್ರಿಯ ತಾರಾ ದಂಪತಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಶೀಘ್ರದಲ್ಲೇ ಪೋಷಕರಾಗಿ ಬಡ್ತಿ ಪಡೆಯಲಿದ್ದಾರೆ. ದೀಪಿಕಾ ಪಡುಕೋಣೆ ಈ ವರ್ಷ ತಾಯಿಯಾಗಲಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಅವರೇ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ದಂಪತಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.
ಬಾಲಿವುಡ್ನಲ್ಲಿ ಪ್ರೇಮಪಕ್ಷಿಗಳಾಗಿ ಗುರುತಿಸಿಕೊಂಡಿದ್ದ ದೀಪ್ವೀರ್ ಜೋಡಿ ಆರು ವರ್ಷಗಳ ಡೇಟಿಂಗ್ ನಂತರ 2018ರ ನವೆಂಬರ್ 14ರಂದು ವಿದೇಶದಲ್ಲಿ ಹಸೆಮಣೆ ಏರಿದ್ದರು. ವಿವಾಹವಾಗಿ ಐದು ವರ್ಷಗಳ ಬಳಿಕ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇಂದು ಈ ಇಬ್ಬರೂ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪೋಷಕರಾಗಲಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ತಮ್ಮ ಮಗು ಸೆಪ್ಟೆಂಬರ್ರಲ್ಲಿ ಜನಿಸಲಿದೆ ಎಂದು ಹೇಳಿಕೊಂಡಿದ್ದಾರೆ. ಶೇರ್ ಮಾಡಿರುವ ಪೋಸ್ಟ್ ವಿಭಿನ್ನವಾಗಿದ್ದು, ನೆಟ್ಟಿಗರನ್ನು ಆಕರ್ಷಿಸಿದೆ.
ನಟಿಯ ಪ್ರೆಗ್ನೆನ್ಸಿ ಅನೌನ್ಸ್ಮೆಂಟ್ ಪೋಸ್ಟ್ ಮಗುವಿನ ಬಟ್ಟೆ, ಶೂ ಮತ್ತು ಆಟಿಕೆಗಳ ಚಿತ್ರಗಳನ್ನೊಳಗೊಂಡಿದೆ. ಪೋಸ್ಟ್‌ನಲ್ಲಿ ದೀಪಿಕಾ ಅವರ ಡೆಲಿವರಿ ತಿಂಗಳನ್ನು ಬರೆಯಲಾಗಿದೆ. ಸುತ್ತಲೂ ಈಗಾಗಲೇ ತಿಳಿಸಿದ ಚಿತ್ರಗಳಿದ್ದು, ಮಧ್ಯದಲ್ಲಿ "ಸೆಪ್ಟೆಂಬರ್ 2024" ಎಂದು ಬರೆಯಲಾಗಿದೆ. ಗುಡ್ ನ್ಯೂಸ್ ಹೊರಬರುತ್ತಿದ್ದಂತೆ ಸಿನಿ ಸ್ನೇಹಿತರು, ಅಭಿಮಾನಿಗಳು ಕಾಮೆಂಟ್ ಸೆಕ್ಷನ್ನಲ್ಲಿ ಅಭಿನಂದನೆ ತಿಳಿಸಲು ಶುರು ಹಚ್ಚಿಕೊಂಡಿದ್ದಾರೆ.
ಗರ್ಭಧಾರಣೆ ಬಗ್ಗೆ ದೀಪಿಕಾ ಶೀಘ್ರದಲ್ಲೇ ಅಧಿಕೃತ ಮಾಹಿತಿ ಕೊಡಲಿದ್ದಾರೆ ಎಂದು ಮೂಲವೊಂದು ಇತ್ತೀಚೆಗಷ್ಟೇ ಸುದ್ದಿವಾಹಿನಿಗೆ ತಿಳಿಸಿತ್ತು. ಇದೀಗ ತಾರಾ ದಂಪತಿ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಲಂಡನ್‌ನಲ್ಲಿ 77ನೇ BAFTA ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುವ ಮೂಲಕ ದೀಪಿಕಾ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದರು. ಅಂದು ಅವರ ನಡೆ ಬೇಬಿ ಬಂಪ್ ಮುಚ್ಚಿಕೊಳ್ಳಲು ಯತ್ನಿಸಿದಂತಿತ್ತು. ಅಂದಿನಿಂದ ನಟಿ ಗರ್ಭಿಣಿ ಆಗಿರಬಹುದೆಂಬ ಊಹಾಪೋಹ ಎದ್ದಿತ್ತು. ಜನವರಿಯಲ್ಲಿ, "ರಣ್ವೀರ್ ಮತ್ತು ನಾನು ಮಕ್ಕಳನ್ನು ಇಷ್ಟ ಪಡುತ್ತೇವೆ. ನಾವು ನಮ್ಮದೇ ಆದ ಸಂಪೂರ್ಣ ಕುಟುಂಬ ಹೊಂದಲು ಎದುರು ನೋಡುತ್ತಿದ್ದೇವೆ" ಎಂದು ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳಿಗೆ ತಿಳಿಸಿದ್ದರು.