ನವದೆಹಲಿ: ಕೆಲವು ಯೂಟ್ಯೂಬ್ ಚಾನೆಲ್‌ಗಳು ಹಾಗು ವೆಬ್‌ಸೈಟ್‌ಗಳು ತಮ್ಮ ಆರೋಗ್ಯದ ಕುರಿತು ಪ್ರಕಟಿಸಿರುವ ಸುಳ್ಳು ಮಾಹಿತಿಯನ್ನು ತೆಗೆದುಹಾಕುವಂತೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಅಪ್ರಾಪ್ತ ಪುತ್ರಿ ಆರಾಧ್ಯ ಬಚ್ಚನ್ ಸಲ್ಲಿಸಿದ್ದ ಅರ್ಜಿಗೆ ಸ್ಪಂದಿಸಿದ ದೆಹಲಿ ಹೈಕೋರ್ಟ್, ಗೂಗಲ್ ಹಾಗು ಇತರೆ ಕೆಲವು ವೆಬ್‌ಸೈಟ್‌ಗಳಿಗೆ ನೋಟಿಸ್ ನೀಡಿ ಪ್ರತಿಕ್ರಿಯೆ ಕೇಳಿದೆ.
ಇದಕ್ಕೂ ಮುನ್ನ, ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಸುಳ್ಳು ವಿಷಯವನ್ನು ಪ್ರಕಟಿಸಿದ ಚಾನೆಲ್‌ಗಳ ವಿರುದ್ಧ ತಾರಾ ದಂಪತಿಯ ಪುತ್ರಿ ಆರಾಧ್ಯ ಎಫ್ಐಆರ್ ದಾಖಲಿಸಿದ್ದರು. ಇದಾದ ನಂತರ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಆದರೆ, ಆರಾಧ್ಯ ಕುರಿತು ಸುಳ್ಳು ಸುದ್ದಿ ಹರಡಿದ ಆರೋಪ ಹೊತ್ತ ಯೂಟ್ಯೂಟ್ ಚಾನೆಲ್‌ಗಳ ಪ್ರಮುಖರು ಕೋರ್ಟ್ ನೋಟಿಸ್ ನೀಡಿದ ಬಳಿಕವೂ ವಿಚಾರಣೆಗೆ ಹಾಜರಾಗಲಿಲ್ಲ. ಹೀಗಾಗಿ, ಅವರ ಪ್ರತಿಕ್ರಿಯೆಗೆ ಕಾಯದೇ ಕೋರ್ಟ್ ಮಧ್ಯಪ್ರವೇಶಿಸಿ ತೀರ್ಪು ಪ್ರಕಟಿಸಬೇಕು ಎಂದು ಆರಾಧ್ಯ ಪರ ವಕೀಲರು ಮನವಿ ಮಾಡಿದ್ದರು.
ಇದನ್ನೂ ಓದಿ: ವಿಶ್ವ ಕ್ಯಾನ್ಸರ್ ದಿನ 2025: ಶಿವಣ್ಣ To ಸಂಜಯ್ ದತ್ - ಕ್ಯಾನ್ಸರ್ ವಿರುದ್ಧ ಹೋರಾಡಿದ ಸೆಲೆಬ್ರಿಟಿಗಳಿವರು
ತಮ್ಮ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಕಟಿಸಿರುವ ಪ್ರತಿವಾದಿಗಳು ವಿಚಾರಣೆಗೆ ಹಾಜರಾಗಲು ವಿಫಲವಾಗಿದ್ದಾರೆ. ಹಾಗಾಗಿ, ಕೋರ್ಟ್ ತಮ್ಮ ಪರವಾಗಿ ತೀರ್ಪು ನೀಡುಬೇಕು ಎಂದು ಆರಾಧ್ಯ ಪರ ವಕೀಲರು ವಿನಂತಿ ಮಾಡಿದ್ದಾರೆ. ಈ ವಾದ ಆಲಿಸಿದ ಕೋರ್ಟ್ ಮುಂದಿನ ವಿಚಾರಣೆಯನ್ನು ಮಾರ್ಚ್ 17ಕ್ಕೆ ನಿಗದಿಪಡಿಸಿದೆ.
ಇದನ್ನೂ ಓದಿ: 23 ವರ್ಷಗಳ ಹಿಂದಿನ ಬ್ಲಾಕ್ಬಸ್ಟರ್ 'ಕಭಿ ಖುಷಿ ಕಭಿ ಘಮ್' ತೆರೆಮರೆಯ ಫೋಟೋ ವೈರಲ್
ಪ್ರಕರಣದ ಮತ್ತಷ್ಟು ವಿವರ: ಆರಾಧ್ಯ ಹೂಡಿರುವ ಮೊಕದ್ದಮೆಯು ಕೆಲವು ಯೂಟ್ಯೂಬ್ ಚಾನೆಲ್‌ಗಳು ಮತ್ತು ವೆಬ್‌ಸೈಟ್‌ಗಳು ಹಂಚಿಕೊಂಡ ಆನ್‌ಲೈನ್ ಮಾಹಿತಿಗೆ ಸಂಬಂಧಿಸಿದೆ. ಇವುಗಳು ಆರಾಧ್ಯ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಪೋಸ್ಟ್ ಮಾಡಿದ್ದವು. ಇಂಥ ಆಧಾರರಹಿತ ಪೋಸ್ಟ್ಗಳು ಬಚ್ಚನ್ ಕುಟುಂಬಕ್ಕೆ ಹಾನಿ ಮಾಡುವ, ದಾರಿತಪ್ಪಿಸುವ ವಿಷಯಗಳನ್ನು ಪ್ರಚಾರ ಮಾಡುತ್ತಿವೆ ಎಂದು ವಕೀಲರು ತಿಳಿಸಿದ್ದಾರೆ.
ಈ ಹಿಂದೆಯೂ, ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, "ದಾರಿ ತಪ್ಪಿಸುವ ವಿಷಯಗಳನ್ನು" ತೆಗೆದುಹಾಕುವಂತೆ ಗೂಗಲ್‌ಗೆ ಸೂಚಿಸಿತ್ತು. ಇದೀಗ ಆರಾಧ್ಯರ ಮನವಿಗೆ ಪ್ರತಿಕ್ರಿಯಿಸುವಂತೆ ಗೂಗಲ್‌ಗೆ ತಿಳಿಸಿದೆ. ಏಕೆಂದರೆ ಈಗಲೂ ಹಲವು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಲಭ್ಯವಿದೆ.