ಬಹು ನಿರೀಕ್ಷಿತ ''ಪುಷ್ಪ: ದಿ ರೂಲ್'' ಅಬ್ಬರಕ್ಕೆ ಅದ್ಧೂರಿ ವೇದಿಕೆ ಸಜ್ಜಾಗಿದೆ. ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದ್ದು, ವಿಶ್ವಾದ್ಯಂತ 12,500 ಸ್ಕ್ರೀನ್ಗಳಲ್ಲಿ ಪುಷ್ಪರಾಜ್ ಸದ್ದು ಮಾಡಲಿದ್ದಾನೆ. ರಿಲೀಸ್ ಟೈಮ್ ಅತ್ಯಂತ ಸಮೀಪದಲ್ಲಿದ್ದು, ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಮತ್ತು ಬಹುಭಾಷಾ ಬಹುಬೇಡಿಕೆ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾ ಸುತ್ತಲಿನ ಕ್ರೇಜ್ ಅಭೂತಪೂರ್ವ ಅಂತಲೇ ಹೇಳಬಹುದು. ಬಹುನಿರೀಕ್ಷಿತ ಚಿತ್ರ ತನ್ನ ಅಡ್ವಾನ್ಸ್ ಬುಕಿಂಗ್ ಕಲೆಕ್ಷನ್ ವಿಷಯದಿಂದ ಕೋಟ್ಯಂತರ ಜನರ ಗಮನ ಸೆಳೆದಿದೆ. ಸಿನಿಮಾ ಬಿಗ್ ಬ್ಲಾಕ್ಬಸ್ಟರ್ ಆಗಲಿದೆ ಎಂಬುದು ಈಗಾಗಲೇ ಸ್ಪಷ್ಟವಾಗಿದೆ.
ವಿಶ್ವಾದ್ಯಂತದ ಮುಂಗಡ ಬುಕಿಂಗ್ - 100 ಕೋಟಿ ರೂ. ಕಲೆಕ್ಷನ್:ಬಿಡುಗಡೆಗೂ ಮುನ್ನ ಪುಷ್ಪ ಸೀಕ್ವೆಲ್ ಬಾಕ್ಸ್ ಆಫೀಸ್‌ನಲ್ಲಿ ಈಗಾಗಲೇ ದೊಡ್ಡ ಮೊತ್ತವನ್ನು ಸಂಗ್ರಹಿಸಿದೆ. ಚಿತ್ರ ತಯಾರಕರ ಲೇಟೆಸ್ಟ್ ಅಪ್ಡೇಟ್ಸ್ ಪ್ರಕಾರ, ಸಿನಿಮಾ ವಿಶ್ವಾದ್ಯಂತ ಅಡ್ವಾನ್ಸ್ ಟಿಕೆಟ್ ಬುಕಿಂಗ್‌ನಲ್ಲಿ 100 ಕೋಟಿ ರೂಪಾಯಿ ದಾಟಿದೆ. ನಾಯಕ ನಟ ಅಲ್ಲು ಅರ್ಜುನ್ ಸಿಂಹಾಸನದ ಮೇಲೆ ಕುಳಿತಿರುವ ಪವರ್ಫುಲ್ ಪೋಸ್ಟರ್ ಅನಾವರಣಗೊಳಿಸಿ ಚಿತ್ರತಂಡ ಈ ಮಾಹಿತಿ ಹಂಚಿಕೊಂಡಿದೆ. "ಪುಷ್ಪ2: ದಿ ರೂಲ್ ಅಡ್ವಾನ್ಸ್ ಬುಕಿಂಗ್‌ನಲ್ಲಿ 100 ಕೋಟಿ ರೂ.ನ ಗಡಿ ದಾಟಿದೆ. ಭಾರತದ ಅತಿ ದೊಡ್ಡ ಚಿತ್ರವು ದಾಖಲೆಗಳನ್ನು ಮುರಿಯುತ್ತಿದೆ" ಎಂಬ ಕ್ಯಾಪ್ಷನ್ ನೆಟ್ಟಿಗರ ಗಮನ ಸೆಳೆದಿದೆ.
ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ವೃತ್ತಿಜೀವನದ ದೊಡ್ಡ ದಾಖಲೆ:ದೊಡ್ಡ ಮಟ್ಟದ ಪೂರ್ವ ವ್ಯವಹಾರದೊಂದಿಗೆ, ಪುಷ್ಪ 2 ಈಗಾಗಲೇ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ 'ಬಿಗ್ಗೆಸ್ಟ್ ಓಪನರ್' (ದೇಶೀಯ ಮತ್ತು ವಿಶ್ವಾದ್ಯಂತದ ಮೊದಲ ದಿನದ ಕಲೆಕ್ಷನ್) ಆಗಲಿದೆ ಎಂದು ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಮಾಡಿದೆ. ಮೊದಲ ದಿನವೇ ಚಿತ್ರ ಹಲವು ದಾಖಲೆಗಳನ್ನು ಮುರಿಯಲು ಸಜ್ಜಾಗಿದೆ. ಆರಂಭಿಕ ಅಂದಾಜಿನ ಪ್ರಕಾರ, ಪುಷ್ಪಾ 2 ತೆರೆಕಂಡ ದಿನವೇ 250-275 ಕೋಟಿ ರೂಪಾಯಿಗಳ ನಡುವೆ ಕಲೆಕ್ಷನ್ ಮಾಡುವ ಸಾಧ್ಯತೆಗಳಿವೆ.