ದೇಶದೆಲ್ಲೆಡೆ ಲೋಕಸಭೆ ಚುನಾವಣಾ ಕಾವು ಜೋರಾಗಿದ್ದು, ಇದರ ಎಫೆಕ್ಟ್ ಸಿನಿಮಾ ಕ್ಷೇತ್ರದ ಮೇಲೆಯೂ ಆಗುತ್ತಿದೆ. ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಮತದಾನ ಮುಗಿದು, ಮೇ 7ಕ್ಕೆ ಎರಡನೇ ಹಂತಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ ತೀವ್ರ ಬರ ಎದುರಿಸುತ್ತಿದೆ.
ಮೊದಲಿಗೆ, ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಸದ್ಯ ಯಾವುದೇ ದೊಡ್ಡ ಅಥವಾ ಸ್ಟಾರ್ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ. ಎರಡನೇಯದಾಗಿ, ಸಿನಿಪ್ರಿಯರು ಚಿತ್ರಮಂದಿರಗಳಿಗೆ ಬಾರದೆ, ಥಿಯೇಟರ್ಗಳು ಖಾಲಿ ಹೊಡೆಯುತ್ತಿವೆ. ಅದರಲ್ಲೂ ಈ ಬೇಸಿಗೆ ರಜೆಗೆ ಯಾವುದೇ ಹೇಳಿಕೊಳ್ಳುವಂತಹ ಚಿತ್ರಗಳೇನಿಲ್ಲ.
ಹೀಗಾಗಿ, ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯಲು ದಿ. ಪುನೀತ್ ರಾಜ್ಕುಮಾರ್ ಅಭಿನಯದ 'ಅಂಜನಿಪುತ್ರ' ಚಿತ್ರವನ್ನು ಮೇ 10 ರಂದು ಪುನಃ ಬಿಡುಗಡೆ ಮಾಡಲಾಗುತ್ತಿದೆ. ಪುನೀತ್ ಹುಟ್ಟುಹಬ್ಬದ ಸಂದರ್ಭದಲ್ಲಿ ಕಳೆದ ತಿಂಗಳು 'ಜಾಕಿ' ಸಿನಿಮಾ ಮರು ಬಿಡುಗಡೆ ಆಗಿತ್ತು. ಚಿತ್ರವು ಯಶಸ್ವಿ ಪ್ರದರ್ಶನದ ಜೊತೆಗೆ ಬರೋಬ್ಬರಿ 3 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
ಸದ್ಯ ಮೇ 10 ರಂದು 'ಕವಲುದಾರಿ' ಖ್ಯಾತಿಯ ರಿಷಿ ಮತ್ತು ಪ್ರಣೀತಾ ಸುಭಾಷ್ ಅಭಿನಯದ 'ರಾಮನ ಅವತಾರ' ಚಿತ್ರ ಮಾತ್ರ ಬಿಡುಗಡೆ ಆಗುತ್ತಿದೆ. ಇದರ ಹೊರತಾಗಿ ಕನ್ನಡದಲ್ಲಿ ಯಾವುದೇ ಸ್ಟಾರ್ ಚಿತ್ರಗಳು ತೆರೆಗೆ ಬರುತ್ತಿಲ್ಲ. ಅದಕ್ಕಾಗಿ ಪವರ್ ಸ್ಟಾರ್ ನಟನೆಯ ಕೌಟುಂಬಿಕ ಮನರಂಜನಾ 'ಅಂಜನಿ ಪುತ್ರ' ಚಿತ್ರವನ್ನು ಹೊಸದಾಗಿ ಬಿಡುಗಡೆ ಮಾಡಲಾಗುತ್ತಿದೆ.
ಎಂ.ಎನ್.ಕೆ ಮೂವೀಸ್ ಲಾಂಛನದಲ್ಲಿ ನಿರ್ಮಾಪಕ ಎಂ.ಎನ್ ಕುಮಾರ್ ನಿರ್ಮಿಸಿ, ಎ. ಹರ್ಷ ನಿರ್ದೇಶನದಲ್ಲಿ ತಯಾರಾದ 'ಅಂಜನಿಪುತ್ರ' ಚಿತ್ರವು 2017ರ ಡಿಸೆಂಬರ್ 12 ರಂದು ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ತಮಿಳಿನ 'ಪೂಜೈ' ಚಿತ್ರದ ರೀಮೇಕ್ ಆದ 'ಅಂಜನಿಪುತ್ರ'ದಲ್ಲಿ ಪುನೀತ್ ರಾಜ್ಕುಮಾರ್ ಹಾಗೂ ರಶ್ಮಿಕಾ ಮಂದಣ್ಣ ನಟಿಸಿದ್ದರು. ಜೊತೆಗೆ, ರಮ್ಯಾ ಕೃಷ್ಣ, ಚಿಕ್ಕಣ್ಣ, ಮುಕೇಶ್ ತಿವಾರಿ, ರವಿಶಂಕರ್, ಅಖಿಲೇಂದ್ರ ಮಿಶ್ರ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದ 'ಬಾರಿ ಖುಷಿ ಮಾರ್ರೆ ನಂಗೆ' ಸೇರಿದಂತೆ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದವು.
ಈಗ ಮತ್ತೆ 'ಅಂಜನಿಪುತ್ರ' ಮರು ಬಿಡುಗಡೆ ಆಗುತ್ತಿರುವುದು ಪವರ್ ಸ್ಟಾರ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಮತ್ತೊಂದೆಡೆ, ಲೋಕಸಭೆ ಎಲೆಕ್ಷನ್ನಿಂದ ಕನ್ನಡ ಚಿತ್ರರಂಗ ಮಂಕಾಗಿರುವ ಸಮಯದಲ್ಲಿ ಪುನೀತ್ ಸಿನಿಮಾ ರೀ ರಿಲೀಸ್ ಆಗುವ ಮೂಲಕ ಚಿತ್ರರಂಗಕ್ಕೆ ಬೂಸ್ಟ್ ನೀಡಲಿ ಎಂಬ ಆಶಯ ಎಲ್ಲರದ್ದಾಗಿದೆ.
ಇದನ್ನೂ ಓದಿ:ಕೋಲಾರದ ನೈಜ ಘಟನೆ ಆಧರಿಸಿ ಬರುತ್ತಿದೆ 'ದ ರೂಲರ್ಸ್' ಚಿತ್ರ - The Rulers