ಕಳೆದ ಗುರುವಾರ ಚಿತ್ರಮಂದಿರ ಪ್ರವೇಶಿಸಿದ್ದ ಮೈಥೋಲಾಜಿಕಲ್ ಸೈನ್ಸ್ ಫಿಕ್ಷನ್ 'ಕಲ್ಕಿ 2898 ಎಡಿ' ಜನಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕೇವಲ ಏಳು ದಿನಗಳಲ್ಲಿ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 700 ಕೋಟಿ ರೂ. ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿದೆ. ಸದ್ಯ ಬಹುತೇಕರ ಗಮನ 1,000 ಕೋಟಿ ರೂ.ನ ಕ್ಲಬ್ ಮೇಲಿದೆ. ಗಲ್ಲಾಪೆಟ್ಟಿಗೆಯಲ್ಲಿನ ಸಂಪಾದನೆಯನ್ನು 'ಕಲ್ಕಿ 2898 ಎಡಿ' ಹಿಂದಿರುವ ವೈಜಯಂತಿ ಮೂವೀಸ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇನ್ನು, ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂಪಾಯಿಯ ಸಮೀಪದಲ್ಲಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸೇರಿ ಚಿತ್ರದಲ್ಲಿರುವ ಬಹುತಾರಾಗಣದ ಅಭಿಮಾನಿಗಳು ಸಂತಸ ಹಂಚಿಕೊಂಡಿದ್ದಾರೆ.
ಸಿನಿಮಾ ತನ್ನ ಏಳನೇ ದಿನ (ಬುಧವಾರ), ಭಾರತದಲ್ಲಿ ಸುಮಾರು 23.2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮಂಗಳವಾರದ ಗಳಿಕೆಗಿಂತ ಶೇ.14.23ರಷ್ಟು ಕಡಿಮೆಯಿದೆ. ಮೊದಲ ದಿನ 95.3 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಎರಡನೇ ದಿನ - 59.3 ಕೋಟಿ ರೂ., ಮೂರನೇ ದಿನ - 66.2 ಕೋಟಿ ರೂ., ನಾಲ್ಕನೇ ದಿನ - 88.2 ಕೋಟಿ ರೂ., ಐದು ಮತ್ತು ಆರನೇ ದಿನಗಳಲ್ಲಿ ಕ್ರಮವಾಗಿ 34.15 ಕೋಟಿ ರೂ. ಮತ್ತು 27.05 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಭಾರತೀಯ ಮಾರುಕಟ್ಟೆಯಲ್ಲಿ 'ಕಲ್ಕಿ 2898 ಎಡಿ' ಸುಮಾರು 393.4 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ನೀಡಿದೆ. ಚಿತ್ರದ ಯಶಸ್ಸಿನ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ ನಾಗ್ ಅಶ್ವಿನ್, ಪ್ರಭಾಸ್ ಅವರ ತೆರೆಮರೆಯ ಫೋಟೋ ಹಂಚಿಕೊಂಡು ಸ್ಟಾರ್ ನಟನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. "ಇದಕ್ಕೆಲ್ಲಾ ಕ್ಯಾಶುವಲ್ ಆಗಿ ಕುಳಿತಿರುವ ಈ ವ್ಯಕ್ತಿಯೇ ಕಾರಣ. ಈ ಯುಗದ ದೊಡ್ಡ ಬಾಕ್ಸ್ ಆಫೀಸ್ ಸ್ಟಾರ್. ಅವರು ವಿಶ್ವಾಸ ತುಂಬಿದರು. ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಪ್ರತಿಯೊಬ್ಬರ ಡಾರ್ಲಿಂಗ್, ನಮ್ಮ ಭೈರವ, ಈಗ ವಿಶ್ವದ K____" ಎಂದು ನಾಗ್ ಅಶ್ವಿನ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.