ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮುಖ್ಯಭೂಮಿಕೆಯ ಸೈನ್ಸ್ ಫಿಕ್ಷನ್ ಸಿನಿಮಾ 'ಕಲ್ಕಿ 2898 ಎಡಿ' ನಿರೀಕ್ಷೆಯಂತೆ ಯಶ ಕಂಡಿದೆ. ಶಂಕರ್ ನಿರ್ದೇಶನದ 'ಇಂಡಿಯನ್ 2', ಸುಧಾ ಕೊಂಗರ ಅವರ 'ಸರ್ಫಿರಾ' ಮತ್ತು ಆನಂದ್ ತಿವಾರಿ ಆ್ಯಕ್ಷನ್ ಕಟ್ ಹೇಳಿರುವ 'ಬ್ಯಾಡ್ ನ್ಯೂಸ್'ನಂತಹ ಲೇಟೆಸ್ಟ್ ರಿಲೀಸ್ ಸಿನಿಮಾಗಳ ತೀವ್ರ ಪೈಪೋಟಿಯ ನಡುವೆಯೂ ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 ಎಡಿ' ಮಂಗಳವಾರದಂದು ಭಾರತೀಯ ಬಾಕ್ಸ್ ಆಫೀಸ್ನಲ್ಲಿ 1.77 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಸೋಮವಾರದ ಸಂಪಾದನೆಗೆ ಹೋಲಿಸಿದರೆ ಶೇ.7.27ರಷ್ಟು ಹೆಚ್ಚಳವಾಗಿದೆ. ಈ ಮೂಲಕ ಬಹುತಾರಾಗಣದ ಈ ಚಿತ್ರ ಭಾರತದಲ್ಲಿ 620 ಕೋಟಿ ರೂಪಾಯಿ ಗಡಿ ದಾಟಿದೆ. ಶಾರುಖ್ ಖಾನ್ ಮುಖ್ಯಭೂಮಿಕೆಯ ಬ್ಲಾಕ್ಬಸ್ಟರ್ 'ಜವಾನ್'ನ ಒಟ್ಟು ಕಲೆಕ್ಷನ್ 640 ಕೋಟಿ ರೂಪಾಯಿ ಮೀರಿಸಲು ಸಜ್ಜಾಗಿದೆ.
ಅದಾಗ್ಯೂ, 27ನೇ ದಿನದ ಚಿತ್ರದ ಗಳಿಕೆ ಗಮನಿಸಿದರೆ 'ಜವಾನ್' ಕಲೆಕ್ಷನ್ಗಿಂತ ಕೊಂಚ ಕಡಿಮೆ ಇದೆ. ಜವಾನ್ ತನ್ನ 27ನೇ ದಿನ 2.05 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇನ್ನೂ, ಈಗಿರುವ ಚಿತ್ರಗಳ ಜೊತೆಗೆ ಡೆಡ್‌ಪೂಲ್ ಮತ್ತು ವೊಲ್ವೆರಿನ್‌ನಂತಹ ಬಹುನಿರಿಕ್ಷಿತ ಚಿತ್ರಗಳು ಈ ವಾರ ಬಿಡುಗಡೆಯಾಗುತ್ತಿದ್ದು, ಕಲ್ಕಿ ಕಲೆಕ್ಷನ್ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ.
ಇನ್ನೂ, ಕಲ್ಕಿ 11 ದಿನಗಳ ಹಿಂದೆ ಜಾಗತಿಕವಾಗಿ 1,000 ಕೋಟಿ ರೂಪಾಯಿಯ ಗಡಿ ದಾಟಿದೆ. ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರಗಳ ಪಟ್ಟಿಯಲ್ಲಿ ಭದ್ರ ಸ್ಥಾನ ಪಡೆದುಕೊಳ್ಳಲು ಚಿತ್ರ 1,100 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಬೇಕಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಬ್ಲಾಕ್ಬಸ್ಟರ್ 'ಪಠಾಣ್' ಕಲೆಕ್ಷನ್ ಮೀರಿಸಿ ಐದನೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ. ಅದಾಗ್ಯೂ, 1,160 ಕೋಟಿ ರೂಪಾಯಿಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿರುವ 'ಜವಾನ್' ಜಾಗತಿಕ ಕಲೆಕ್ಷನ್ ಮೀರಿಸುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.